IPL 2022 ಫಿನಿಶರ್ ಧೋನಿಗೆ ಚಮಕ್ ನೀಡಿದ ಆರ್ಶ್ ದೀಪ್, ಪಂಜಾಬ್ ಗೆ ಸೂಪರ್ ಗೆಲುವು!

Published : Apr 25, 2022, 11:30 PM IST
 IPL 2022 ಫಿನಿಶರ್ ಧೋನಿಗೆ ಚಮಕ್ ನೀಡಿದ ಆರ್ಶ್ ದೀಪ್, ಪಂಜಾಬ್ ಗೆ ಸೂಪರ್ ಗೆಲುವು!

ಸಾರಾಂಶ

ಸ್ಲಾಗ್ ಓವರ್ ಗಳಲ್ಲಿ ಅದ್ಭುತ ಬೌಲಿಂಗ್ ಮೂಲಕ ಗಮನಸೆಳೆದ ಅರ್ಶ್ ದೀಪ್ ಸಿಂಗ್ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡದ ಭರ್ಜರಿ ಗೆಲುವಿಗೆ ಕಾರಣರಾಗಿದ್ದಾರೆ. ಪಂದ್ಯದ ಕೊನೆಯ ಹಂತದಲ್ಲಿ ಅಂಬಟಿ ರಾಯುಡು, ಎಂಎಸ್ ಧೋನಿ ಹಾಗೂ ರವೀಂದ್ರ ಜಡೇಜಾರನ್ನು ಕಟ್ಟುಹಾಕುವ ಮೂಲಕ ಪಂಜಾಬ್ ವಿಜಯ ಸಾಧಿಸಿತು.  

ಮುಂಬೈ (ಏ. 25): ಸ್ಲಾಗ್ ಓವರ್ ಗಳಲ್ಲಿ ಚೆನ್ನೈ ತಂಡದ ಬ್ಯಾಟಿಂಗ್ ಗೆ ಕಡಿವಾಣ ಹಾಕಿದ ಆರ್ಶ್ ದೀಪ್ ಸಿಂಗ್ ಪಂಜಾಬ್ ಕಿಂಗ್ಸ್ ತಂಡದ ಅದ್ಭುತ ಗೆಲುವಿಗೆ ಕಾರಣರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 11 ರನ್ ಗಳಿಂದ ಮಣಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ ನಾಲ್ಕನೇ ಗೆಲವು ಕಂಡಿತು.

ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ, ಶಿಖರ್ ಧವನ್ (88 ರನ್, 59 ಎಸೆತ, 9 ಬೌಂಡರಿ, 2 ಸಿಕ್ಸರ್) ಅವರ ಸಾಹಸಿಕ ಬ್ಯಾಟಿಂಗ್ ನ ಫಲವಾಗಿ 4 ವಿಕೆಟ್ 187 ರನ್ ಪೇರಿಸಲು ಯಶಸ್ವಿಯಾಯಿತು. ಪ್ರತಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಂಬಟಿ ರಾಯುಡು (78 ರನ್, 39 ಎಸೆತ, 7 ಬೌಂಡರಿ, 6 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತರುವ ಪ್ರಯತ್ನ ಮಾಡಿದ್ದರು. ಆದರೆ, ಆರ್ಶ್ ದೀಪ್ ತಾವು ಎಸೆದ 17ನೇ ಓವರ್ ನಲ್ಲಿ 7 ರನ್ ಹಾಗೂ 19ನೇ ಓವರ್ ನಲ್ಲಿ ಕೇವಲ 8 ರನ್ ನೀಡುವ ಮೂಲಕ ಚೆನ್ನೈ ತಂಡದ ಗೆಲುವಿನ ಹೋರಾಟವನ್ನು ನಿಯಂತ್ರಿಸಿದರು. ಇದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಗೆ 176 ರನ್ ಗಳಿಸಲಷ್ಟೇ ಶಕ್ತವಾಯಿತು.    

ಚೇಸಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಾಬಿನ್ ಉತ್ತಪ್ಪ, ಮಿಚೆಲ್ ಸ್ಯಾಂಟ್ನರ್ ಹಾಗೂ ಶಿವಂ ದುಬೆ ತಂಡದ ಮೊತ್ತ 40 ರನ್ ಆಗುವ ಮುನ್ನವೇ ನಿರ್ಗಮಿಸಿದರು. ಇದು ಚೆನ್ನೈ ತಂಡದ ಚೇಸಿಂಗ್ ನ ಮೇಲೆ ಪರಿಣಾಮ ಬೀರಿತು.

ಕ್ರೀಸ್ ನಲ್ಲಿ ರನ್ ಗಳಿಸಲು ಪರದಾಟ ನಡೆಸುತ್ತಿದ್ದ ರಾಬಿನ್ ಉತ್ತಪ್ಪ, ಸಂದೀಪ್ ಶರ್ಮ ಎಸೆತದಲ್ಲಿ ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದರು.  ಬಡ್ತಿ ಪಡೆದು ಬಂದು ಆಡಿದ ಮಿಚೆಲ್ ಸ್ಯಾಂಟ್ನರ್ (9) ತಂಡದ ಮೊತ್ತ 30 ರನ್ ಆಗುವವರೆಗೂ ಕ್ರೀಸ್ ನಲ್ಲಿದ್ದರು. 15 ಎಸೆತಗಳನ್ನು ಎದುರಿಸಿದ ಸ್ಯಾಂಟ್ನರ್ 6ನೇ ಓವರ್ ನಲ್ಲಿ ಆರ್ಶ್ ದೀಪ್ ಸಿಮಗ್ ಗೆ ಬೌಲ್ಡ್ ಆಗಿ ನಿರ್ಗಮಿಸಿದರು. ಈ ಮೊತ್ತಕ್ಕೆ 10 ರನ್ ಸೇರಿಸುವ ಹಂತದಲ್ಲಿ ತಂಡದ ಸ್ಟಾರ್ ಆಟಗಾರ ಶಿವಂ ದುಬೆ (8), ರಿಷಿ ಧವನ್ ಎಸೆತದಲ್ಲಿ ಔಟಾದಾಗ ಚೆನ್ನೈ ತಂಡ ಸಂಕಷ್ಟ ಎದುರಿಸಿತ್ತು.

ಚೇತರಿಕೆ ನೀಡಿದ ರಾಯುಡು-ರುತುರಾಜ್: 40 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ 4ನೇ ವಿಕೆಟ್ ಗೆ ಅಂಬಟಿ ರಾಯುಡು ಹಾಗೂ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ (30 ರನ್, 27 ಎಸೆತ, 4 ಬೌಂಡರಿ) 49 ರನ್ ಜೊತೆಯಾಟವಾಡುವ ಮೂಲಕ ಆಧರಿಸಿದರು. ಆದರೆ, ಇವರ ಜೊತೆಯಾಟದ ಯಾವ ಹಂತದಲ್ಲೂ ಚೆನ್ನೈ ತಂಡ ಗೆಲುವು ಸಾಧಿಸಬಹುದು ಎನ್ನುವ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ನಿಧಾನಗತಿಯ ಬ್ಯಾಟಿಂಗ್ ಆಡಿದ ಈ ಜೋಡಿ 13ನೇ ಓವರ್ ನಲ್ಲಿ ಬೇರ್ಪಡುವ ವೇಳೆ ಚೆನ್ನೈ ತಂಡದ ಗೆಲುವಿಗೆ 51 ಎಸೆತಗಳಲ್ಲಿ 99 ರನ್ ಗಳ ಅಗಾಧ ಸವಾಲಿತ್ತು. ರಬಾಡ ಎಸೆತದಲ್ಲಿ ರುತುರಾಜ್ ನಿರ್ಗಮಿಸಿದ ಬಳಿಕ, ಅಂಬಟಿ ರಾಯುಡು 28 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಡೀಪ್ ಸ್ಕ್ವೇರ್ ಲೆಗ್ ನಲ್ಲಿ ಆಕರ್ಷಕ ಸಿಕ್ಸರ್ ಸಿಡಿಸಿ ರಾಯುಡು ಹಾಲಿ ವರ್ಷದ ತಮ್ಮ ಮೊದಲ ಅರ್ಧಶತಕ ಸಿಡಿಸಿದರು.

ಚೆನ್ನೈ ತಂಡಕ್ಕೆ ಕೊನೆಯ 30 ಎಸೆತಗಳಲ್ಲಿ 70 ರನ್ ಬೇಕಿದ್ದ ಹಂತದಲ್ಲಿ 16ನೇ ಓವರ್ ದಾಳಿಗಳಿದ ಸಂದೀಪ್ ಶರ್ಮಗೆ ಮೂರು ಸಿಕ್ಸರ್ ಹಾಗೂ 1 ಬೌಂಡರಿ ಇದ್ದ 23 ರನ್ ಸಿಡಿಸಿದ ಅಂಬಟಿ ರಾಯುಡು ಏಕಾಂಗಿಯಾಗಿ ಚೆನ್ನೈ ತಂಡವನ್ನು ಮತ್ತೆ ಗೆಲುವಿನ ಹಳಿಗೆ ಏರಿಸಿದ್ದರು. 18ನೇ ಓವರ್ ನಲ್ಲಿ ರಾಯುಡುಗೆ ವಿಕೆಟ್ ಒಪ್ಪಿಸುವವರೆಗೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಭೀತಿ ಹುಟ್ಟಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ