2025ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದ್ದು, ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹರ್ಭಜನ್ ಸಿಂಗ್ ಈ ಎರಡು ತಂಡಗಳನ್ನು ಭಾರತ-ಪಾಕಿಸ್ತಾನ ತಂಡಗಳಿಗೆ ಹೋಲಿಸಿದ್ದಾರೆ.
ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ.
ಇನ್ನು ಈ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, 5 ಬಾರಿಯ ಚಾಂಪಿಯನ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. 'ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳಂತೆ. ಎರಡೂ ತಂಡಗಳ ಫ್ಯಾನ್ಸ್, ತಮ್ಮ ತಂಡವನ್ನು ಕೊನೆಯ ಕ್ಷಣದವರೆಗೂ ಹುರಿದುಂಬಿಸುತ್ತಾರೆ. ಸಾಕಷ್ಟು ದಿಗ್ಗಜ ಆಟಗಾರರು ಈ ಎರಡು ತಂಡಗಳಲ್ಲಿ ಆಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್‌ನ ಅತ್ಯುತ್ತಮ ತಂಡಗಳಲ್ಲಿ ಒಂದು ಎನಿಸಿದೆ. ಒಂದು ವೇಳೆ ನೀವು ಆ ತಂಡವನ್ನು ಸೋಲಿಸಿದರೆ ಅದೇ ಅಂದಿನ ಹೆಡ್‌ಲೈನ್. ಅದೇ ರೀತಿ ಮುಂಬೈ ತಂಡ ಕೂಡ. ಅತಿಹೆಚ್ಚು ಒತ್ತಡ, ಹೈವೋಲ್ಟೇಜ್ ಪಂದ್ಯ ಮತ್ತು ಮತ್ತು ಭರಪೂರ ಮನರಂಜನೆ ಸಿಗುತ್ತೆ ಎಂದು ಜಿಯೋ ಸ್ಟಾರ್ ಎಕ್ಸ್‌ಪರ್ಟ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಠ ಫ್ಯಾನ್ ಬೇಸ್ ಹೊಂದಿವೆ. ಇಡೀ ಅಭಿಮಾನಿ ಬಳಗವೇ ಧೋನಿ ಹಳದಿ ಜೆರ್ಸಿ ತೊಟ್ಟು ಕಣಕ್ಕಿಳಿಯುವುದನ್ನು ನೋಡಲು ವರ್ಷ ಪೂರ್ತಿ ಕಾಯುತ್ತಿರುತ್ತಾರೆ. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಮುಂಬೈ ಎದುರು ಚೆನ್ನೈ ಮೇಲುಗೈ ಸಾಧಿಸಿತ್ತು. ರೋಹಿತ್ ಶರ್ಮಾ ಶತಕ ಸಿಡಿಸಿದರೂ ಸಹಾ ಚೆನ್ನೈ 20 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಧೋನಿ ಕೇವಲ 4 ಎಸೆತಗಳನ್ನು ಎದುರಿಸಿ 20 ರನ್ ಸಿಡಿಸಿದ್ದರು. ಇದೇ ಚೆನ್ನೈ ಹಾಗೂ ಮುಂಬೈ ನಡುವಿನ ಸೋಲು-ಗೆಲುವಿನ ಅಂತರ ಎನಿಸಿಕೊಂಡಿದ್ದು ವಿಶೇಷ. ಇನ್ನು 2025ರ ಐಪಿಎಲ್ ಟೂರ್ನಿಯು ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಕೊನೆಯ ಐಪಿಎಲ್ ಆಗುವ ಸಾಧ್ಯತೆಯಿದ್ದು, ಟ್ರೋಫಿಯೊಂದಿಗೆ ಐಪಿಎಲ್‌ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 1 ಟ್ರೋಫಿ, 10 ಟೀಂ: ಇಂದಿನಿಂದ ಐಪಿಎಲ್ ಮೆಗಾ ಫೈಟ್! ಉದ್ಘಾಟನಾ ಪಂದ್ಯದಲ್ಲಿಂದು ಆರ್‌ಸಿಬಿ vs ಕೆಕೆಆರ್ ಕದನ
ಇದೀಗ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂರನೇ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಐಪಿಎಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.