ಹಾರ್ದಿಕ್‌ ಪಾಂಡ್ಯ ಆಲ್ರೌಂಡ್ ಆಟ, ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 50 ರನ್‌ ಗೆಲುವು

By Santosh NaikFirst Published Jul 8, 2022, 9:01 AM IST
Highlights

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದರಿಂದ ಟೀಮ್‌ ಇಂಡಿಯಾ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 50 ರನ್‌ ಗೆಲುವು ಕಂಡಿದೆ. ಉಭಯ ತಂಡಗಳ ನಡುವಿನ 2ನೇ ಟಿ20 ಪಂದ್ಯ ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.
 

ಸೌಥಾಂಪ್ಟನ್‌ (ಜುಲೈ 8): ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟಿಗನ ಅತ್ಯುತ್ತಮ ಆಲ್ರೌಂಡ್‌ ಆಟದ ಪ್ರದರ್ಶನ ನೀಡಿದ ಹಾರ್ದಿಕ್‌ ಪಾಂಡ್ಯ (Hardik Pandya), ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ (England) ವಿರುದ್ಧ ಭಾರತ ತಂಡದ 50 ರನ್‌ ಗೆಲುವಿಗೆ ನೆರವಾದರು.

ಗುರುವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಆಲ್ರೌಂಡ್ ಆಟದ ನಿರ್ವಹಣೆ ನೀಡಿದ ಹಾರ್ದಿಕ್‌ ಪಾಂಡ್ಯ ಕೇವಲ 33 ಎಸೆತಗಳಲ್ಲಿ 51 ರನ್‌ ಸಿಡಿಸಿದರು. ಇದರಿಂದಾಗಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ 8 ವಿಕೆಟ್‌ ಗೆ 198 ರ್‌ ಬಾರಿಸಿತು. ಬಳಿಕ ಬೌಲಿಂಗ್‌ನಲ್ಲೂ ಅದ್ಭುತವಾಗಿ ಪ್ರದರ್ಶನ ತೋರಿದ ಹಾರ್ದಿಕ್‌ ಪಾಂಡ್ಯ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 33 ರನ್‌ಗೆ 4 ವಿಕೆಟ್‌ ಉರುಳಿಸಿ ಇಂಗ್ಲೆಂಡ್‌ ಬ್ಯಾಟಿಂಗ್‌ ವಿಭಾಗವನ್ನು ಧ್ವಂಸ ಮಾಡಿದರು. ಈ ಸಾಧನೆಗಾಗಿ ಅವರು ಪಂದ್ಯಶ್ರೇಷ್ಠ ಗೌರವವನ್ನೂ ಪಡೆದರು.

ಐಸಿಸಿಯ ಪೂರ್ಣ ಸದಸ್ಯತ್ವ ಪಡೆದ ರಾಷ್ಟ್ರದ ವಿರುದ್ಧ ಟಿ20 ಪಂದ್ಯದಲ್ಲಿ ಅರ್ಧಶತಕ ಹಾಗೂ ನಾಲ್ಕು ವಿಕೆಟ್‌ ಸಾಧನೆ ಮಾಡಿದ ಕೇವಲ ನಾಲ್ಕನೇ ಆಟಗಾರ ಎನಿಸಿಕೊಂಡ ಹಾರ್ದಿಕ್‌ ಪಾಂಡ್ಯ ಸಾಹಸದಿಂದ ಇಂಗ್ಲೆಂಡ್‌ 19.3 ಓವರ್‌ಗಳಲ್ಲಿ ಕೇವಲ 148 ರನ್‌ಗೆ ಆಲೌಟ್‌ ಆಯಿತು.

ಇದು ಹಾರ್ದಿಕ್‌ ಪಾಂಡ್ಯ ಅವರಿಗೆ ಅಂತಾರಷ್ಟ್ರೀಯ ಟಿ20ಯಲ್ಲಿ ಮೊದಲ ಅರ್ಧಶತಕವೆನಿಸಿತ್ತು. ಇವರ ಸಾಹಸದಿಂದಾಗಿಯೇ ಟೀಮ್‌ ಇಂಡಿಯಾ ಮಧ್ಯಮ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಲು ಯಶಸ್ವಿಯಾಗಿತ್ತು. ಇದಕ್ಕೂ ಮುನ್ನ ಆರಂಭದಲ್ಲಿ ನಾಯಕ ರೋಹಿತ್ ಶರ್ಮ (14 ಎಸೆತಗಳಲ್ಲಿ 24 ರನ್‌), ಸೂರ್ಯಕುಮಾರ್‌ ಯಾದವ್‌ (19 ಎಸೆತಗಳಲ್ಲಿ 39 ರನ್‌) ಹಾಗೂ ದೀಪಕ್‌ ಹೂಡಾ (17 ಎಸೆತಗಳಲ್ಲಿ 33 ರನ್‌) ಬಿರುಸಿನ ಆಟವಾಡಿದ್ದರು. 17 ಓವರ್‌ ವೇಳೆಗೆ 5 ವಿಕೆಟ್‌ಗೆ 178 ರನ್‌ ಬಾರಿಸಿದ್ದ ಭಾರತ ತಂಡ, ಕೊನೆಯ 18 ಎಸೆತಗಳಲ್ಲಿ ಕೇವಲ 20 ರನ್‌ ಗಳಿಸಲಷ್ಟೇ ಯಶ ಕಂಡಿತು.

199 ರನ್‌ಗಳನ್ನು ರಕ್ಷಣೆ ಮಾಡಿಕೊಳ್ಳುವ ವೇಳೆ ಟೀಮ್‌ ಇಂಡಿಯಾ ಭುವನೇಶ್ವರ್‌ ಕುಮಾರ್‌ ಮೂಲಕ ಉತ್ತಮ ಆರಂಭ ಪಡೆದುಕೊಂಡಿತ್ತು. ನಾಯಕ ಜೋಸ್‌ ಬಟ್ಲರ್‌, ಭುವನೇಶ್ವರ್‌ ಎಸೆದ ಆಕರ್ಷಕ ಇನ್‌ಸ್ವಿಂಗರ್‌ ಎಸೆತಕ್ಕೆ ಬೌಲ್ಡ್‌ ಆದರೆ, ಜೇಸನ್‌ ರಾಯ್‌ಗೆ ಸತತ ನಾಲ್ಕು ಔಟ್‌ ಸ್ವಿಂಗರ್‌ ಎಸೆತಗಳ ಮೂಲಕ ಪರೀಕ್ಷೆ ನಡೆಸಿದರು.

ಬ್ಯಾಟಿಂಗ್‌ನಲ್ಲಿ ಮಿಂಚಿನ ಆಟದ ಬಳಿಕ, ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ನಲ್ಲಿ ತಾವು ಎಸೆದ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಉರುಳಿಸಿದರು. ಡೇವಿಡ್‌ ಮಲಾನ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ರನ್ನು ಡಗ್‌ಔಟ್‌ಗೆ ಅಟ್ಟಿದ್ದರಿಂದ ಐದನೇ ಓವರ್‌ ವೇಳೆಗೆ ಇಂಗ್ಲೆಂಡ್‌ 29 ರನ್‌ಗಳಿಗೆ 3 ಪ್ರಮುಖ ವಿಕೆಟ್‌ ಕಳೆದುಕೊಂಡಿತ್ತು. ಆ ಬಳಿಕ, ಕ್ರೀಸ್‌ನಲ್ಲಿ ಪರದಾಟ ನಡೆಸುತ್ತಿದ್ದ ಜೇಸನ್‌ ರಾಯ್‌ನ ವಿಕೆಟ್‌ ಉರುಳಿಸಿದರೆ, ಕೊನೆಯಲ್ಲಿ ಸ್ಯಾಮ್‌ ಕರ್ರನ್‌ ವಿಕೆಟ್‌ ಕಬಳಿಸಿ ನಾಲ್ಕು ವಿಕೆಟ್‌ ಸಾಧನೆ ಮಾಡಿದರು.

ಭಾರತದ ಬ್ಯಾಟಿಂಗ್‌ನ ವೇಳೆ ಸಾಕಷ್ಟು ಉತ್ತಮ ಅಂಶಗಳು ಕಂಡು ಬಂದವು. ಕೋವಿಡ್‌ ಕಾರಣದಿಂದಾಗಿ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ತಪ್ಪಿಸಿಕೊಂಡಿದ್ದ ನಾಯಕ ರೋಹಿತ್‌ ಶರ್ಮ ಪಂದ್ಯದಲ್ಲಿ ಉತ್ತಮ ಆರಂಭ ನೀಡಿದರು. ಸ್ಯಾಮ್‌ ಕರ್ರನ್‌ ಹಾಗೂ ಕ್ರಿಸ್‌ ಜೋರ್ಡನ್‌ ಜೋಡಿಯನ್ನು ಭರ್ಜರಿಯಾಗಿ ದಂಡಿಸುವ ಮೂಲಕ ಭಾರತದ ರನ್‌ಗತಿಯನ್ನು ಏರಿಸಿದರು. ಮೋಯಿನ್‌ ಅಲಿಗೆ ಎರಡು ಸ್ವೀಪ್‌ ಶಾಟ್‌ಗಳ ಮೂಲಕ ಬೌಂಡರಿ ಸಿಡಿಸಿದ್ದ ರೋಹಿತ್‌ (Rohit Sharma), ಅದೇ ಓವರ್‌ನಲ್ಲಿ ಔಟಾದರು. ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ಅಬ್ಬರಿಸಿದ್ದ ದೀಪಕ್‌ ಹೂಡಾ ಅದೇ ಫಾರ್ಮ್‌ಅನ್ನು ಪಂದ್ಯದಲ್ಲಿ ಮುಂದುವರಿದರು. ಲಾಂಗ್‌ ಆನ್‌ನಲ್ಲಿ ಮೊಯಿನ್‌ ಅಲಿಗೆ ಎರಡು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು.

ನಿಮ್ಮಂತ ನಾಯಕ ಮತ್ತೊಬ್ಬರಿಲ್ಲ: ಧೋನಿ ಹುಟ್ಟುಹಬ್ಬಕ್ಕೆ ಭಾವನಾತ್ಮಕವಾಗಿ ಶುಭ ಕೋರಿದ ಕೊಹ್ಲಿ..!

ಈ ನಡುವೆ ಇಶಾನ್‌ ಕಿಶನ್‌ ಮೂಲಕ ಮೋಯಿನ್‌ ಅಲಿ ತಮ್ಮ 2ನೇ ವಿಕೆಟ್ ಉರುಳಿಸಿದರೂ, ಭಾರತದ ಬ್ಯಾಟಿಂಗ್‌ ಅಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸಿಕ್ಸರ್ ಮೂಲಕ ಇನ್ನಿಂಗ್ಸ್ ಆರಂಭಿಸಿದ್ದ ದೀಪಕ್‌ ಹೂಡಾಗೆ ಸೂರ್ಯಕುಮಾರ್‌ ಯಾದವ್‌ ಉತ್ತಮ ಸಾಥ್‌ ನೀಡಿದರು. ಇನ್ನಿಂಗ್ಸ್‌ನ 6ನೇ ಓವರ್‌ ಎಸೆದ ರೀಸ್‌ ಟಾಪ್ಲೆಗೆ ಮೂರು ಬೌಂಡರಿ ಈ ಜೋಡಿ ಸಿಡಿಸಿದ್ದರಿಂದ ಪವರ್‌ ಪ್ಲೇ ಮುಕ್ತಾಯದ ವೇಳೆ ಭಾರತ 2 ವಿಕೆಟ್‌ಗೆ 66 ರನ್ ಬಾರಿಸಿತ್ತು. ದೀಪಕ್‌ ಹೂಡಾ ಔಟಾದ ಬಳಿಕ ಸೂರ್ಯಕುಮಾರ್‌ಗೆ ಜೊತೆಯಾದ ಹಾರ್ದಿಕ್‌ ಪಾಂಡ್ಯ ಎದುರಿಸಿದ ಮೊದಲ ಎಸೆತದಿಂದಲೇ ಅಬ್ಬರದ ಆಟಕ್ಕಿಳಿದರು. 37 ರನ್‌ ಗಳಿಸಿದ್ದ ವೇಳೆ ಜೀವದಾನ ಪಡೆದುಕೊಂಡಿದ್ದ ಹಾರ್ದಿಕ್‌ ಪಾಂಡ್ಯ, ಅರ್ಧಶತಕ ಬಾರಿಸಿ, 18ನೇ ಓವರ್‌ನ 4 ಎಸೆತದಲ್ಲಿ ಔಟಾದರು. 

HBD Devdutt Padikkal: ಕನ್ನಡಿಗ ಪಡಿಕ್ಕಲ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಭಾರತ: 8 ವಿಕೆಟ್‌ಗೆ 198
(ರೋಹಿತ್ ಶರ್ಮ 24, ದೀಪಕ್‌ ಹೂಡಾ 33, ಸೂರ್ಯಕುಮಾರ್‌ ಯಾದವ್‌ 39, ಹಾರ್ದಿಕ್‌ ಪಾಂಡ್ಯ 51, ಅಕ್ಸರ್‌ ಪಟೇಲ್‌ 17, ದಿನೇಶ್‌ ಕಾರ್ತಿಕ್‌ 11,     ಮೋಯಿನ್‌ ಅಲಿ 26ಕ್ಕೆ 2, ಕ್ರಿಸ್ ಜೋರ್ಡನ್‌ 23ಕ್ಕೆ 2), ಇಂಗ್ಲೆಂಡ್‌: 19.3 ಓವರ್‌ಗಳಲ್ಲಿ 148 (ಜೇಸನ್‌ ರಾಯ್‌ 4, ಬಟ್ಲರ್‌ 0, ಡೇವಿಡ್‌ ಮಲಾನ್‌ 21, ಲಿವಿಂಗ್‌ ಸ್ಟೋನ್‌ 0, ಹ್ಯಾರಿ ಬ್ರೂಕ್‌ 28, ಮೋಯಿನ್‌ ಅಲಿ 36,  ಕ್ರಿಸ್‌ ಜೋರ್ಡನ್‌ 26, ಹಾರ್ದಿಕ್‌ ಪಾಂಡ್ಯ 33ಕ್ಕೆ 4, ಆರ್ಶ್‌ ದೀಪ್‌ ಸಿಂಗ್ 18ಕ್ಕೆ 2)

click me!