ಕೊರೋನಾ ವೈರಸ್ ವಿರುದ್ಧ ಸೆಣಸುತ್ತಿರುವ ಸರ್ಕಾರಕ್ಕೆ ತನ್ನ ಕೈಲಾದ ಅಳಿಲು ಸೇವೆ ಮಾಡಲು ಪಾಂಡಿಚೆರಿ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಪಾಂಡಿಚೆರಿ ಕ್ರಿಕೆಟ್ ಸಂಸ್ಥೆಯ ನಡೆ ಇದೀಗ ಉಳಿದವರಿಗೆ ಮಾದರಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪುದುಚೇರಿ(ಮಾ.24): ಕೊರೋನಾ ಸೋಂಕು ತಗುಲಿದ, ಇಲ್ಲವೇ ಶಂಕಿತ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಇರಿಸಲು ತನ್ನ ಕ್ರೀಡಾಂಗಣಗಳಲ್ಲಿ ಇರುವ ಡಾರ್ಮೆಟರಿ(ಆಟಗಾರರ ವಿಶ್ರಾಂತಿ ಕೋಣೆ)ಗಳನ್ನು ಬಿಟ್ಟುಕೊಡುವುದಾಗಿ ಪುದುಚೇರಿ ಕ್ರಿಕೆಟ್ ಸಂಸ್ಥೆ ಘೋಷಿಸಿದೆ.
ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ ಖಚಿತ..?
ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಅವರಿಗೆ ಪತ್ರದ ಮೂಲಕ ವಿಷಯ ತಿಳಿಸಿದ್ದು, ತನ್ನಿಂದ ಸಾಧ್ಯವಾಗುವ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದೆ. ಪುದುಚೇರಿ ಕ್ರಿಕೆಟ್ ಸಂಸ್ಥೆಯ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ದೇಶದ ಇನ್ನಿತರ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸಹ ಕೊರೋನಾ ಸೋಂಕನ್ನು ನಿಯಂತ್ರಿಸಲು ಸರ್ಕಾರಗಳಿಗೆ ನೆರವಾಗಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕೊರೋನಾ ಭೀತಿ ಹೆಚ್ಚಳ: ಇಂದಿರಾ ಕ್ಯಾಂಟೀನ್ ಬಂದ್‌ಗೆ ಸಿಎಂ ಸೂಚನೆ
ಕೊರೋನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ನೂರಾರು ದೇಶಗಳು ಕೋವಿಡ್ 19 ಸೋಂಕಿಗೆ ತುತ್ತಾಗಿವೆ. ಮದ್ದಿಲ್ಲದ ಮಹಾಮಾರಿ ಎನಿಸಿರುವ ಕೊರೋನಾ ಕ್ರೀಡಾ ಜಗತ್ತಿನ ಮೇಲೂ ವಕ್ರದೃಷ್ಟಿ ಬೀರಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್ ನಾಕೌಟ್ ಟೂರ್ನಿಗಳು ಮುಂದೂಡಲ್ಪಟ್ಟವೆ. ಭಾರತದಲ್ಲಿ ಬಹುತೇಕ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಇನ್ನು ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕೂಡಾ ನಡೆಯುವುದು ಅನುಮಾನ ಎನಿಸಿದೆ. ಇದುವರೆಗೂ ಜಗತ್ತಿನಾದ್ಯಂತ 3,82,943 ಮಂದಿ ಕೊರೋನಾ ವೈರಸ್‌ಗೆ ತುತ್ತಾಗಿದ್ದು, 16,584 ಮಂದಿ ಕೊನೆಯುಸಿರೆಳೆದಿದ್ದಾರೆ.