
ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನವನ್ನು ಮಣಿಸಿ ಟ್ರೋಫಿ ಗೆಲ್ಲುವುದೇ ಒಂದು ರೋಮಾಂಚನ. ಅದೇ ರೀತಿ ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ ಕೊನೆಯ ಎಸೆತದವರೆಗೂ ಉಸಿರು ಬಿಗಿಹಿಡಿದು ಚಾಂಪಿಯನ್ ಆಗಿದೆ. ಇದರೊಂದಿಗೆ ಭಾರತದ ಪುರುಷರ ತಂಡವು 9ನೇ ಬಾರಿಗೆ ಅಂಡರ್-19 ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಐತಿಹಾಸಿಕ ಗೆಲುವಿನ ಹಿಂದೆ ತೆರೆಮರೆಯಲ್ಲಿ ನಿಂತು ಶ್ರಮಿಸಿದ ಒಂದು 'ಕನ್ನಡದ ಶಕ್ತಿ' ಇದೆ. ಕರ್ನಾಟಕ ಕ್ರಿಕೆಟ್‌ನ ಹೆಮ್ಮೆ, ರಾಯಚೂರಿನ ಮಣ್ಣಿನ ಮಗ, ಭಾರತ ಅಂಡರ್-19 ತಂಡದ ಕೋಚ್ ಯೆರೇಗೌಡ! ದೇಶಿಯ ಕ್ರಿಕೆಟ್‌ನಲ್ಲಿ ಆಟಗಾರನಾಗಿ ಹಾಗೂ ಕೋಚ್ ಆಗಿ ಮಿಂಚಿದ್ದು ಯರೇಗೌಡ, ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡಕ್ಕೆ ಏಷ್ಯಾಕಪ್ ಗೆಲ್ಲಿಸಿಕೊಡುವ ಮೂಲಕ 'ಚಾಂಪಿಯನ್ ಕೋಚ್' ಆಗಿ ಹೊರಹೊಮ್ಮಿದ್ದಾರೆ.
ಚಾಂಪಿಯ್ ಬೆನ್ನಲ್ಲೇ IANS ಜೊತೆ ಮಾತನಾಡಿದ ಅವರು.. ಕಳೆದ ನಾಲ್ಕೈದು ತಿಂಗಳಿನಿಂದ ಕಠಿಣ ಪರಿಶ್ರಮ ಪಟ್ಟಿದ್ದೇವೆ. ಈ ಮೊದಲು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡಿದ್ದೆವು. ಅಲ್ಲಿಯೂ ನಮ್ಮ ಹುಡುಗರು ಅದ್ಭುತ ಪ್ರದರ್ಶನ ನೀಡಿದ್ದರು. ಈ ಟೂರ್ನಿಗೆ ಕಾಲಿಡುವ ಮೊದಲೇ ನಾವು ಉತ್ತಮ ಪ್ರದರ್ಶನ ನೀಡುತ್ತೇವೆಂಬ ನಂಬಿಕೆ ನಮಗಿತ್ತು. ಅದರಂತೆ ಹುಡುಗರು ಚೆನ್ನಾಗಿ ಆಡಿದರು. ಯಾವಾಗೆಲ್ಲಾ ಒತ್ತಡದ ಸನ್ನಿವೇಶ ಎದುರಾಯಿತೋ, ಆಗಲೆಲ್ಲಾ ಆಟಗಾರರು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು ಎಂದು ಶಿಷ್ಯರ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ.
ಯರೇಗೌಡ ಕೇವಲ ಒಬ್ಬ ಶ್ರೇಷ್ಠ ಕೋಚ್ ಮಾತ್ರವಲ್ಲ, ದೇಶೀಯ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರ ಪೂರ್ಣ ಹೆಸರು ಯೆರೆ ಕರೆಕಲ್ ತಿಪ್ಪನ ಗೌಡ. 1971ರ ನವೆಂಬರ್ 27ರಂದು ಕರ್ನಾಟಕದ (ಅಂದಿನ ಮೈಸೂರು ರಾಜ್ಯ) ರಾಯಚೂರಿನಲ್ಲಿ ಜನಿಸಿದ ಇವರಿಗೆ ಈಗ 54 ವರ್ಷ ವಯಸ್ಸು. ಬಲಗೈ ಬ್ಯಾಟ್ಸ್‌ಮನ್ ಹಾಗೂ ಬಲಗೈ ಲೆಗ್-ಬ್ರೇಕ್ ಬೌಲರ್ ಆಗಿದ್ದ ಯೆರೇಗೌಡ 1994ರಲ್ಲಿ ಕರ್ನಾಟಕ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಒಂದು ವರ್ಷದ ನಂತರ ಅಂದರೆ 1995ರಲ್ಲಿ ಅವರು ರೈಲ್ವೇಸ್ ತಂಡಕ್ಕೆ ಸ್ಥಳಾಂತರಗೊಂಡರು. ರೈಲ್ವೇಸ್ ಪರ ಆಡುತ್ತಾ 2 ರಣಜಿ ಟ್ರೋಫಿ ಹಾಗೂ 3 ಇರಾನಿ ಟ್ರೋಫಿಗಳನ್ನು ಗೆದ್ದುಕೊಟ್ಟರು. ಕೇಂದ್ರ ವಲಯ (Central Zone) ತಂಡವನ್ನು ಪ್ರತಿನಿಧಿಸಿ ದುಲೀಪ್ ಟ್ರೋಫಿ ಗೆಲುವಿನಲ್ಲೂ ಭಾಗಿಯಾಗಿದ್ದರು.
2006-07ರ ಸಾಲಿನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುವ ಸಲುವಾಗಿ ಮತ್ತೆ ತವರು ತಂಡಕ್ಕೆ ಮರಳಿದರು. (ಆ ಸಂದರ್ಭದಲ್ಲಿ ತವರು ತಂಡಕ್ಕೆ ಮರಳುವ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಬಿಸಿಸಿಐ ಅವರನ್ನು ಮೊದಲ ಪಂದ್ಯಕ್ಕೆ ನಿಷೇಧಿಸಿತ್ತು ಎಂಬುದು ಗಮನಾರ್ಹ). ಬಳಿಕ ಮತ್ತೆ ರೈಲ್ವೇಸ್ ತಂಡಕ್ಕೆ ಮರಳಿದ ಅವರು 2011ರವರೆಗೆ ಆಡಿದರು. ಭಾರತೀಯ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ರಣಜಿ ಪಂದ್ಯಗಳನ್ನು ಆಡಿದ ಕೆಲವೇ ಕೆಲವು ದಿಗ್ಗಜ ಆಟಗಾರರಲ್ಲಿ ಯರೇಗೌಡ ಕೂಡ ಒಬ್ಬರು. ಇವರ ತಾಳ್ಮೆಯುತ ಮತ್ತು ಭದ್ರ ಬ್ಯಾಟಿಂಗ್ ಶೈಲಿಯನ್ನು ಕಂಡು ಕರ್ನಾಟಕದ ದಿಗ್ಗಜ ಜಾವಗಲ್ ಶ್ರೀನಾಥ್ ಅವರು ಯೆರೇಗೌಡರನ್ನು ರೈಲ್ವೇಸ್‌ನ ರಾಹುಲ್ ದ್ರಾವಿಡ್ ಎಂದು ಕರೆದು ಗೌರವಿಸಿದ್ದರು!
ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಕೋಚಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಯರೇಗೌಡ, ಕರ್ನಾಟಕ ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿಸಿದರು. 2019-20ನೇ ಸಾಲಿನಲ್ಲಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಸ್ತಾಕ್ ಅಲಿ ಟ್ರೋಫಿ ತಂಡಗಳ ಹೆಡ್ ಕೋಚ್ ಆಗಿ ಜವಾಬ್ದಾರಿ ನಿಭಾಯಿಸಿದ್ದರು. 2023-2024ನೇ ಸಾಲಿನಲ್ಲಿ ಕರ್ನಾಟಕ ಮೊದಲ ಬಾರಿಗೆ ಟ್ರೋಫಿ ಗೆದ್ದಾಗಲೂ ಇವರೇ ಹೆಡ್ ಕೋಚ್ ಆಗಿದ್ದರು. 2024ರಲ್ಲಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ಮುಡಿಗೇರಿಸಿಕೊಂಡಾಗ ಮತ್ತು ಕಳೆದ ಬಾರಿ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಫೈನಲ್ ತಲುಪಿದಾಗಲೂ ತಂಡದ ಬೆನ್ನೆಲುಬಾಗಿ ನಿಂತಿದ್ದು ಯರೇಗೌಡ. ರಾಜ್ಯ ತಂಡಕ್ಕೆ ಯಶಸ್ಸಿನ ಹಾದಿ ತೋರಿದ್ದ ರಾಯಚೂರಿನ ಈ ಪ್ರತಿಭೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಿರಿಯರ ತಂಡವನ್ನು (ಅಂಡರ್-19) ತಿದ್ದಿ ತೀಡುವ ದೊಡ್ಡ ಜವಾಬ್ದಾರಿ ನೀಡಿತ್ತು. ಆ ನಂಬಿಕೆಯನ್ನು ಉಳಿಸಿಕೊಂಡಿರುವ ಯೆರೇಗೌಡ, ಪಾಕಿಸ್ತಾನದಂತಹ ಬಲಿಷ್ಠ ತಂಡದ ವಿರುದ್ಧ ಒತ್ತಡದ ಸನ್ನಿವೇಶದಲ್ಲೂ ಯುವ ಆಟಗಾರರನ್ನು ಹುರಿದುಂಬಿಸಿ, ಭಾರತಕ್ಕೆ 9ನೇ ಏಷ್ಯಾಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ರಾಯಚೂರಿನಿಂದ ಆರಂಭವಾದ ಯೆರೇಗೌಡರ ಕ್ರಿಕೆಟ್ ಪಯಣ ಇಂದು ಇಡೀ ದೇಶವೇ ಹೆಮ್ಮೆಪಡುವ ಮಟ್ಟಕ್ಕೆ ಬಂದು ನಿಂತಿದೆ. ಎಲೆಮರೆಯ ಕಾಯಿಯಂತೆ ಸದ್ದಿಲ್ಲದೆ ಕೆಲಸ ಮಾಡಿ ತಂಡವನ್ನು ಗೆಲುವಿನ ಶಿಖರಕ್ಕೇರಿಸುವ 'ಚಾಂಪಿಯನ್ ಕೋಚ್' ಯರೇಗೌಡರ ಈ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಫೂರ್ತಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.