Latest Videos

ಗ್ರೂಪ್ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನ ತಂಡದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್‌..!

By Naveen KodaseFirst Published Jun 17, 2024, 6:57 PM IST
Highlights

ಯುಎಸ್‌ಎನಂತಹ ಕ್ರಿಕೆಟ್ ಶಿಶು ಎನಿಸಿಕೊಂಡಿರುವ ತಂಡದ ಎದುರು ಪಾಕಿಸ್ತಾನ ಸೋಲು ಅನುಭವಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಇದೆಲ್ಲದರ ನಡುವೆ ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸ್ವತಃ ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್‌ಕೋಚ್ ಗ್ಯಾರಿ ಕರ್ಸ್ಟನ್‌ ತುಟಿಬಿಚ್ಚಿದ್ದಾರೆ.

ನ್ಯೂಯಾರ್ಕ್‌: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿದೆ. 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಪಾಕಿಸ್ತಾನ ಕ್ರಿಕೆಟ್ ತಂಡವು ಅನಾಯಾಸವಾಗಿಯೇ ಸೂಪರ್ 8 ಹಂತಕ್ಕೆ ಪ್ರವೇಶ ಪಡೆಯಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮೊದಲ ಪಂದ್ಯದಲ್ಲೇ ಆತಿಥೇಯ ಯುಎಸ್‌ಎ ಎದುರು ಸೋಲಿನ ಕಹಿಯುಂಡಿದ್ದ ಪಾಕಿಸ್ತಾನ ತಂಡವು, ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಬದ್ದ ಎದುರಾಳಿ ಟೀಂ ಇಂಡಿಯಾ ಎದುರು ಮುಗ್ಗರಿಸುವ ಮೂಲಕ ಸತತ ಎರಡು ಸೋಲು ಅನುಭವಿಸಿತು. ಇನ್ನು ಕೆನಡಾ ಹಾಗೂ ಐರ್ಲೆಂಡ್ ಎದುರು ಗೆಲುವು ಸಾಧಿಸಿದರೂ ಪಾಕಿಸ್ತಾನಕ್ಕೆ ಸೂಪರ್ 8 ಹಂತ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ.

ಯುಎಸ್‌ಎನಂತಹ ಕ್ರಿಕೆಟ್ ಶಿಶು ಎನಿಸಿಕೊಂಡಿರುವ ತಂಡದ ಎದುರು ಪಾಕಿಸ್ತಾನ ಸೋಲು ಅನುಭವಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಇದೆಲ್ಲದರ ನಡುವೆ ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸ್ವತಃ ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್‌ಕೋಚ್ ಗ್ಯಾರಿ ಕರ್ಸ್ಟನ್‌ ತುಟಿಬಿಚ್ಚಿದ್ದಾರೆ. ತಂಡದೊಳಗಿನ ಆಂತರಿಕ ಕಚ್ಚಾಟ, ಸಮನ್ವಯದ ಕೊರತೆಯಿಂದಾಗಿಯೇ ಪಾಕಿಸ್ತಾನ ಸೋಲು ಅನುಭವಿಸಿದೆ ಎಂದು ಕರ್ಸ್ಟನ್ ಹೇಳಿದ್ದಾರೆ.

ಪಾಕ್ ಪರ್ತಕರ್ತರೊಬ್ಬರ ಜತೆ ಮಾತನಾಡಿರುವ ಗ್ಯಾರಿ ಕರ್ಸ್ಟನ್, "ಪಾಕಿಸ್ತಾನ ತಂಡದಲ್ಲಿ ಒಗ್ಗಟ್ಟು ಎನ್ನುವುದೇ ಇಲ್ಲ. ಅವರು ಅದನ್ನೊಂದು ತಂಡ ಎನ್ನಬಹುದು, ಆದರೆ ಅದು ತಂಡವಾಗಿ ಉಳಿದಿಲ್ಲ. ಅವರು ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಿಲ್ಲ. ಪ್ರತಿಯೊಬ್ಬರೂ ಬೇರೆ ಬೇರೆಯಾಗಿದ್ದಾರೆ. ನಾನು ಈಗಾಗಲೇ ಸಾಕಷ್ಟು ತಂಡಗಳ ಜತೆಗೆ ಕೆಲಸ ಮಾಡಿದ್ದೇನೆ. ಆದರೆ ನಾನೆಲ್ಲೂ ಇಂತಹ ಪರಿಸ್ಥಿತಿ ನೋಡಿಲ್ಲ" ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೇವಲ ಒಂದೂವರೆ ತಿಂಗಳು ಬಾಕಿ ಇದ್ದಾಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ದಕ್ಷಿಣ ಆಫ್ರಿಕಾ ಮೂಲದ ಗ್ಯಾರಿ ಕರ್ಸ್ಟನ್ ಅವರನ್ನು ಪಾಕಿಸ್ತಾನ ತಂಡದ ಹೆಡ್ ಕೋಚ್ ಆಗಿ ನೇಮಿಸಲಾಗಿತ್ತು. 2011ರಲ್ಲಿ ಗ್ಯಾರಿ ಕರ್ಸ್ಟನ್ ಮಾರ್ಗದರ್ಶನದಲ್ಲಿಯೇ ಟೀಂ ಇಂಡಿಯಾ, ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹೀಗಾಗಿ ಗ್ಯಾರಿ ಮಾರ್ಗದರ್ಶನದಲ್ಲಿ ಪಾಕಿಸ್ತಾನ ತಂಡವು ಅದ್ಭುತ ಪ್ರದರ್ಶನ ತೋರಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಆ ಎಲ್ಲಾ ನಿರೀಕ್ಷೆಗಳು ಇದೀಗ ಹುಸಿಯಾಗಿವೆ.

'ಎ' ಗುಂಪಿನಲ್ಲಿ ಭಾರತ ಹಾಗೂ ಯುಎಸ್‌ಎ ತಂಡಗಳು ಕ್ರಮವಾಗಿ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿವೆ. ಇನ್ನು ಗ್ರೂಪ್ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನದ ಆಟಗಾರರು ನೇರವಾಗಿ ತವರಿಗೆ ವಾಪಾಸ್ಸಾಗಿಲ್ಲ. ನಾಯಕ ಬಾಬರ್ ಅಜಂ ಸೇರಿದಂತೆ ಪಾಕಿಸ್ತಾನದ ಆರು ಆಟಗಾರರು ರಜಾ ಸಮಯವನ್ನು ಎಂಜಾಯ್ ಮಾಡಲು ಲಂಡನ್‌ನಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನು ವಿದೇಶಿ ಕೋಚ್‌ಗಳು ಕೂಡಾ ಪಾಕಿಸ್ತಾನಕ್ಕೆ ಬರದೇ, ತಮ್ಮ ತಮ್ಮ ದೇಶಕ್ಕೆ ವಾಪಸ್ಸಾಗಿದ್ದಾರೆ.

click me!