
ಬೆಂಗಳೂರು: ‘ದೇಶದಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವಂಥ ವ್ಯವಸ್ಥೆ ಇನ್ಯಾವ ಕ್ರಿಕೆಟ್ ಸ್ಟೇಡಿಯಂನಲ್ಲೂ ಇರಲು ಸಾಧ್ಯವಿಲ್ಲ’. ಇದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಮಂಗಳವಾರ ಆರ್‌ಸಿಬಿ ತನ್ನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಲು ಒಪ್ಪಿಕೊಂಡ ಬಳಿಕ ಸುದ್ದಿಗೋಷ್ಠಿ ನಡೆಸಿ ಆಡಿದ ಮಾತುಗಳು. ಜೂ.4, 2025ರ ಕಾಲ್ತುಳಿತ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳು ನಿಂತು ಹೋಗಿದ್ದವು. ಕ್ರೀಡಾಂಗಣದಲ್ಲಿ ಇನ್ನು ಐಪಿಎಲ್ ಇರಲಿ, ದೇಸಿ ಪಂದ್ಯಗಳೂ ನಡೆಯುತ್ತದೆಯೋ ಇಲ್ಲವೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಚಿನ್ನಸ್ವಾಮಿಗೆ ಕ್ರಿಕೆಟ್ ವಾಪಸ್ ತರುವುದಾಗಿ ಭರವಸೆ ನೀಡಿ ಚುನಾವಣೆಯಲ್ಲಿ ಗೆದ್ದ ಬಳಿಕ ವೆಂಕಟೇಶ್ ಪ್ರಸಾದ್ ಹಾಗೂ ಅವರ ತಂಡ ಅದನ್ನು ಮಾಡಿ ತೋರಿಸಿದೆ. ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರು ಸುರಕ್ಷಿತಗಾಗಿ ಕೆಎಸ್‌ಸಿಎ ಹಲವು ಹೊಸ ವ್ಯವಸ್ಥೆಗಳನ್ನು ಮಾಡಿದೆ.
9 ಮೀ. ಅಗಲದ ದ್ವಾರಗಳು: ಕಾಲ್ತುಳಿತ ಘಟನೆ ಬಳಿಕ ಸರ್ಕಾರ ನೇಮಿಸಿದ್ದ ನ್ಯಾ.ಕುನ್ಹಾ ಸಮಿತಿ ಹಲವು ಶಿಫಾರಸುಗಳನ್ನು ಮಾಡಿತ್ತು. ಸಮಿತಿ ಶಿಫಾರಸಿನಲ್ಲಿ ಪ್ರವೇಶ ದ್ವಾರಗಳನ್ನು 6 ಮೀ.ಗೆ ವಿಸ್ತರಿಸಬೇಕು ಎಂದಿತ್ತು. ಆದರೆ ಕೆಎಸ್‌ಸಿಎ ದ್ವಾರಗಳ ಅಗಲವನ್ನು 9 ಮೀ.ಗೆ ವಿಸ್ತರಿಸಿದೆ. ಇದರಿಂದ ದ್ವಾರಗಳ ಬಳಿ ನೂಕುನುಗ್ಗಲು ತಪ್ಪಿಸಬಹುದಾಗಿದೆ.
ಇನ್ನು, ಈಗಾಗಲೇ ಇದ್ದ 20 ದ್ವಾರಗಳ ಜೊತೆಗೆ ಹೊಸದಾಗಿ 13 ದ್ವಾರಗಳನ್ನು ತೆರೆಯಲಾಗುತ್ತಿದೆ. ಇದರಿಂದ ಕ್ರೀಡಾಂಗಣಕ್ಕೆ ಆಗಮಿಸುವ ಪ್ರೇಕ್ಷಕರನ್ನು ಸಮರ್ಪಕವಾಗಿ ನಿಭಾಯಿಸಬಹುದು.
ಇಷ್ಟು ದಿನ ಕ್ರೀಡಾಂಗಣದ ಬಳಿ ಕೇವಲ ಆ್ಯಂಬುಲೆನ್ಸ್‌ಗಳು ಇರುತ್ತಿದ್ದವು. ಕ್ರೀಡಾಂಗಣದಲ್ಲಿ ಹೆಚ್ಚೆಂದರೆ ಪ್ರಥಮ ಚಿಕಿತ್ಸೆ ದೊರೆಯುತ್ತಿತ್ತು. ಆದರೆ ಈಗ ಕ್ರೀಡಾಂಗಣದ ನಾಲ್ಕೂ ದಿಕ್ಕಿನಲ್ಲಿ ಸುಸಜ್ಜಿತ ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಆ ಕೇಂದ್ರಗಳಲ್ಲೇ ಅಗತ್ಯ ಚಿಕಿತ್ಸೆ ದೊರೆಯಲಿದೆ.
ಪಂದ್ಯಗಳು ನಡೆಯುವಾಗ ಕ್ರೀಡಾಂಗಣದಲ್ಲಿ ಮಹಿಳೆಯರು, ಮಕ್ಕಳಿಗೆ ಪ್ರತ್ಯೇಕ ದ್ವಾರಗಳನ್ನು ಮೀಸಲಿಡಲಾಗುತ್ತದೆ. ಮಹಿಳೆಯರು, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಮಾಡಲಾಗಿದೆ.
ಇಷ್ಟು ದಿನ ಕ್ರೀಡಾಂಗಣದ ಹೊರಗೆ ದೊಡ್ಡ ಪ್ರಮಾಣದಲ್ಲಿ ಜನದಟ್ಟಣೆ ಆಗುತ್ತಿತ್ತು. ಪಾದಚಾರಿ ಮಾರ್ಗಗಳು ಜನರಿಂದ ತುಂಬಿ ಹೋಗಿ ನಡೆದುಕೊಂಡು ಓಡಾಡಲು ಸಹ ಆಗುತ್ತಿರಲಿಲ್ಲ. ರಸ್ತೆಗಳಲ್ಲೂ ಜನರು ನಿಲ್ಲುತ್ತಿದ್ದ ಕಾರಣ ವಾಹನ ಸಂಚಾರಕ್ಕೂ ತೊಂದರೆ ಆಗುತ್ತಿತ್ತು. ಆದರೆ ಈಗ ಕೆಎಸ್‌ಸಿಎ ‘ಬಿ’ ಮೈದಾನ (ಈ ಮೊದಲು ಎನ್‌ಸಿಎ), ಕೆಎಸ್‌ಸಿಎ ಟೆನಿಸ್ ಗ್ರೌಂಡ್‌ನಲ್ಲಿ ಜನರು ನಿಂತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಕ್ರೀಡಾಂಗಣದ ಹೊರಗೆ ಜನದಟ್ಟಣೆ ಕಡಿಮೆಯಾಗಲಿದೆ.
ಕ್ರೀಡಾಂಗಣದಲ್ಲಿ ಜನ ಓಡಾಡುವ ಎಲ್ಲಾ ಜಾಗಗಳಲ್ಲೂ ಹೆಚ್ಚು ವಿದ್ಯುತ್ ದೀಪಗಳು, ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಜನರ ಓಡಾಟಕ್ಕೆ ಹೆಚ್ಚು ಅನುಕೂಲವಾಗಲಿದೆ.
ಒಂದೆಡೆ ಕೆಎಸ್‌ಸಿಎ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಆರ್‌ಸಿಬಿ ಸಹ ಪ್ರೇಕ್ಷಕರ ಅನುಕೂಲಕ್ಕೆ ವಿವಿಧ ಮಾರ್ಗಗಳನ್ನು ಹುಡುಕುತ್ತಿದೆ. ಕ್ರೀಡಾಂಗಣದ ಸುತ್ತಮುತ್ತ ಪಾರ್ಕಿಂಗ್ ಸಮಸ್ಯೆ ಇರುವ ಕಾರಣ, ಪ್ರೇಕ್ಷಕರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಉಪಯೋಗಿಸುವಂತೆ ಉತ್ತೇಜಿಸಲು ಫ್ರಾಂಚೈಸಿಯು ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಐಪಿಎಲ್ ಪಂದ್ಯಗಳ ಟಿಕೆಟ್ ಮೆಟ್ರೋ ಟಿಕೆಟನ್ನೂ ಒಳಗೊಂಡಿರಲಿದೆ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಜೊತೆಗೆ ಮೆಟ್ರೋ ನಿಲ್ದಾಣಗಳಿಂದ ಬಿಎಂಟಿಸಿ ಫೀಡರ್ ಬಸ್‌ಗಳ ವ್ಯವಸ್ಥೆ ಮಾಡಲು ಸಹ ಫ್ರಾಂಚೈಸಿ ಮಾತುಕತೆ ನಡೆಸುತ್ತಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.