ಅಂಧರ ಟಿ20 ವಿಶ್ವಕಪ್ ಟೂರ್ನಿಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಸುನಿಲ್ ಎಂಬ ಯುವಕ ಆಯ್ಕೆಯಾಗಿದ್ದು, ರಾಜ್ಯ ಹಾಗೂ ಜಿಲ್ಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.29): ಅಂಧರ ಟಿ20 ವಿಶ್ವಕಪ್ ಟೂರ್ನಿಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಸುನಿಲ್ ಎಂಬ ಯುವಕ ಆಯ್ಕೆಯಾಗಿದ್ದು, ರಾಜ್ಯ ಹಾಗೂ ಜಿಲ್ಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಮೂರನೇ ಆವೃತ್ತಿಯ ಅಂಧರ ಟಿ 20 ವಿಶ್ವಕಪ್‌ಗೆ ಭಾರತದ ತಂಡವನ್ನು ಪ್ರತಿನಿಧಿಸಲು ಮೂವರು ಕನ್ನಡಿಗರು ಆಯ್ಕೆಯಾಗಿದ್ದು, ಅದರಲ್ಲಿ ಚಿಕ್ಕಮಗಳೂರಿನ ಸುನೀಲ್ ರಮೇಶ್, ಗಂಗಾವತಿಯ ಲೋಕೇಶ್ ಹಾಗೂ ರಾಮನಗರದ ಪ್ರಕಾಶ್ ಸ್ಥಾನ ಪಡೆದಿದ್ದಾರೆ.
ಟಿ20 ವಿಶ್ವಕಪ್ ಕ್ರಿಕೆಟ್‌ನ ಭಾರತ ತಂಡಕ್ಕೆ ಆಯ್ಕೆಯಾದ ಕಾಫಿನಾಡಿನ ಸುನೀಲ್: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಗುಡ್ಡದೂರು ಗ್ರಾಮದ 24 ರ ಹರೆಯದ ಸುನೀಲ್ ರಮೇಶ್, ಪದವಿಯನ್ನು ಮುಗಿಸಿದ್ದು ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿಯನ್ನು ಹೊಂದಿ ಆಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅಂಧರಾದ ಇವರು ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನ ಆಶಾಕಿರಣ ಅಂಧರ ಶಾಲೆಯಲ್ಲಿ ಮುಗಿಸಿ 2012 ರಿಂದ ಈವರೆಗೆ ಅನೇಕ ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಡುವ ಮೂಲಕ ಅಂಧರಾದರೂ ಯಾರಿಗೂ ಕಡಿಮೆಯಿಲ್ಲ ಎಂಬಂತೆ ತಮ್ಮ ಸಾಮರ್ಥ್ಯವನ್ನು ಜಗತ್ತಿಗೇ ಪ್ರಸ್ತುತಪಡಿಸಿದ್ದಾರೆ.
Chikkamagaluru: ಮಾಟ ಮಂತ್ರಕ್ಕೆ ಇಲ್ಲಿ ಬ್ರೇಕ್: ಕಣ್ಣಾಸರಕ್ಕೂ ಇಲ್ಲಿನ ಪೂಜೆ ರಾಮಬಾಣ
ದೇಶಕ್ಕಾಗಿ ಆಡುವುದರಲ್ಲಿ, ವಿಜಯಕ್ಕಾಗಿ ಶ್ರಮಿಸುವುದರಲ್ಲಿ ನನಗೆ ಹೆಚ್ಚಿನ ಸಂತಸವಿದೆ. ಅವಕಾಶಗಳು ಹಾಗೂ ಸಿಎಬಿಐ ಸಮರ್ಥನ ಸಂಸ್ಥೆ ನೀಡುತ್ತಿರುವ ಪೂರಕವಾದ ಸಹಕಾರ ನಿಜಕ್ಕೂ ಹುರುಪನ್ನು ತಂದುಕೊಡುತ್ತಿದೆ. ಈ ಬಾರಿಯೂ ಗೆಲ್ಲುವ ವಿಶ್ವಾಸದಿಂದ ತೆರಳುತ್ತೇವೆ. ಅಂಧರ ಸಾಧನೆಗೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಕ್ರಿಕೆಟಿಗ ಸುನೀಲ್ ಅಭಿಪ್ರಾಯಿಸಿದ್ದಾರೆ.
ಸುನೀಲ್ ಸಾಧನೆಯ ಹಾದಿ: 2016 ರಲ್ಲಿ ನಡೆದ ಅಂಧರ ಆವೃತ್ತಿಯ ಏಷ್ಯಾಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸುನೀಲ್ T20 ವರ್ಲ್ಡ್ ಕಪ್‌ನಲ್ಲಿ ಮೂರು ಬಾರಿ ಶತಕವನ್ನು ಬಾರಿಸುವ ಮೂಲಕ ತಮ್ಮ ಆಟವನ್ನು ಪ್ರದರ್ಶಿಸಿದ್ದಾರೆ. 2018 ರಲ್ಲಿ ದುಬೈ ನಲ್ಲಿ ಬದ್ಧವೈರಿ ಪಾಕಿಸ್ತಾನದ ಎದುರು ನಡೆದ ವರ್ಲ್ಡ್ ಕಪ್‌ನಲ್ಲಿ ಭಾರತ ಜಯಗಳಿಸುವಂತೆ ಮಾಡುವ ಮೂಲಕ ಮ್ಯಾನ್ ಆಫ್‌ದ ಮ್ಯಾಚ್ ಆಗಿ ಪ್ರಶಸ್ತಿಯನ್ನು ಪಡೆದು ಸಾಧನೆಗೈದಿದ್ದಾರೆ. ಡಿಸೆಂಬರ್ ತಿಂಗಳ ಆರನೇ ತಾರೀಖಿನಿಂದ 17ರ ವರೆಗೆ ಭಾರತದ ವಿವಿಧ ನಗರಗಳಲ್ಲಿ ನಡೆಯಲಿರುವ ಅಂಧರ ಟಿ 20 ವಿಶ್ವಕಪ್ ಟೂರ್ನಿಗೆ ಕನ್ನಡಿಗ ಸುನೀಲ್ ರಮೇಶ್ ಆಯ್ಕೆಯಾಗಿರುವುದು ಪೋಷಕರಲ್ಲಿ ಹಾಗೂ ಸ್ಥಳೀಯರಲ್ಲಿ ಸಂತಸವನ್ನು ಮೂಡಿಸಿದೆ.
Chikkamagaluru: ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ: ಸಿ.ಟಿ.ರವಿ
ರಮೇಶ್ ಅವರ ಈ ಸಾಧನೆಗೆ ಸಹಕಾರ ನೀಡಿದ್ದು ಸಮರ್ಥನ ಸಂಸ್ಥೆ ಹಾಗೂ ಸಿಎಬಿಐ (Cricket Association for Blind in India) ಈ ಎರಡೂ ಸಂಸ್ಥೆಗಳು ರಮೇಶ್ ಅವರ ಬೆಳವಣಿಗೆಗೆ ಹಾಗೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಇಂದು ದೇಶವನ್ನು ಪ್ರತಿನಿಧಿಸುವಲ್ಲಿ ಸಹಕಾರ ನೀಡಿದೆ ಎಂದು ರಮೇಶ್ ಹರ್ಷ ವ್ಯಕ್ತಪಡಿಸಿದರು. ಕೋಚ್ ಆಗಿ ಬೆಂಗಳೂರಿನ ಆಸೀಫ್ ಅವರು ಇವರನ್ನು ತರಬೇತಿ ನೀಡಿ ಕ್ರೀಡೆಗೆ ಪೂರಕವಾಗಿ ತಯಾರು ಮಾಡಿದ್ದು ಮುಂಬರುವ ಸರಣಿಗಳಲ್ಲಿ ಗೆಲುವು ಭಾರತ ತಂಡದ್ದಾಗಲಿ ಎಂದು ಅನೇಕರು ಹಾರೈಸಿದ್ದಾರೆ.