ಬ್ಯಾಟರ್‌ಗಳ ವೈಫಲ್ಯ, ಸಾಧಾರಣ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 32 ರನ್ ಸೋಲನುಭವಿಸಿದೆ. ಸೆಂಚೂರಿಯನ್‌ನ ಬೌನ್ಸಿ ಪಿಚ್‌ನಲ್ಲಿ ಪೆವಿಲಿಯನ್ ಪರೇಡ್ ನಡೆಸಿದ್ದ ಭಾರತಕ್ಕೆ ಕೇಪ್‌ಟೌನ್‌ನಲ್ಲೂ ಬೌನ್ಸರ್‌ಗಳ ಸವಾಲು ಎದುರಾಗುವುದು ಖಚಿತ.
ಕೇಪ್‌ಟೌನ್(ಜ.03): ಆರಂಭಿಕ ಟೆಸ್ಟ್‌ನಲ್ಲಿ ಎದುರಾದ ಹೀನಾಯ ಸೋಲು ಭಾರತದ 3 ದಶಕಗಳ ಸರಣಿ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟಿದೆ. ಆದರೆ ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯನ್ನು ಸಮಬಲ ಸಾಧಿಸಲು ಟೀಂ ಇಂಡಿಯಾಕ್ಕೆ ಅವಕಾಶವಿದ್ದು, ಬುಧವಾರದಿಂದ ಆತಿಥೇಯರ ವಿರುದ್ಧ 2ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಕೇಪ್‌ಟೌನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಸೇಡು ತೀರಿಸಿಕೊಳ್ಳುವುದರ ಜೊತೆಗೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೇಲೇರುವ ಕಾತರ ಭಾರತದ್ದು.
ಬ್ಯಾಟರ್‌ಗಳ ವೈಫಲ್ಯ, ಸಾಧಾರಣ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 32 ರನ್ ಸೋಲನುಭವಿಸಿದೆ. ಸೆಂಚೂರಿಯನ್‌ನ ಬೌನ್ಸಿ ಪಿಚ್‌ನಲ್ಲಿ ಪೆವಿಲಿಯನ್ ಪರೇಡ್ ನಡೆಸಿದ್ದ ಭಾರತಕ್ಕೆ ಕೇಪ್‌ಟೌನ್‌ನಲ್ಲೂ ಬೌನ್ಸರ್‌ಗಳ ಸವಾಲು ಎದುರಾಗುವುದು ಖಚಿತ. ಪ್ರಮುಖವಾಗಿ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಶುಭ್‌ಮನ್ ಗಿಲ್ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಮತ್ತೆ ಆಫ್ರಿಕಾ ದಾಳಿಯನ್ನು ಮೆಟ್ಟಿನಿಲ್ಲುವ ಭರವಸೆಯಲ್ಲಿದ್ದಾರೆ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಜಡೇಜಾ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದ್ದು, ಆರ್.ಅಶ್ವಿನ್ ಜಾಗ ಬಿಟ್ಟುಕೊಡಬೇಕಾಗಬಹುದು.
ಕುಸ್ತಿ ಸಮಸ್ಯೆ ಪರಿಹರಿಸಿ: ಜಾಗತಿಕ ಸಂಸ್ಥೆಯ ಮೊರೆ ಹೋದ ಭಾರತದ ರೆಸ್ಲರ್ಸ್
ಭಾರತಕ್ಕೆ ಹೆಚ್ಚಿನ ತಲೆನೋವಿಗೆ ಕಾರಣವಾಗಿದ್ದು ವೇಗಿಗಳ ಪಡೆ. ಮೊದಲ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿರಲಿಲ್ಲ. ಮತ್ತೊಂದೆಡೆ ಮೊಹಮದ್ ಶಮಿ ಸ್ಥಾನ ತುಂಬಬಲ್ಲ ಅನುಭವಿ ವೇಗಿಯ ಕೊರತೆಯಿದೆ. ಆರಂಭಿಕ ಪಂದ್ಯದ ಮೂಲಕ ಟೆಸ್ಟ್ ಪಾದಾರ್ಪಣೆ ಮಾಡಿದ್ದ ಪ್ರಸಿದ್ಧ್ ಕೃಷ್ಣ ದುಬಾರಿಯಾಗಿದ್ದರು. ಶಾರ್ದೂಲ್ ಠಾಕೂರ್ ಕೂಡಾ ವಿಫಲರಾಗಿದ್ದರು. ಇವರಿಬ್ಬರನ್ನು ಹೊರಗಿಟ್ಟು ಮುಕೇಶ್ ಕುಮಾರ್ ಮತ್ತು ಆವೇಶ್ ಖಾನ್‌ರನ್ನು 2ನೇ ಪಂದ್ಯಕ್ಕೆ ತಂಡಕ್ಕೆ ಸೇರಿಸಿಕೊಂಡೂ ಅಚ್ಚರಿಯಿಲ್ಲ.
ಸರಣಿ ಜಯದ ಗುರಿ: ಮತ್ತೊಂದೆಡೆ ಆಫ್ರಿಕಾ ಆರಂಭಿಕ ಪಂದ್ಯದ ಭರ್ಜರಿ ಗೆಲುವಿನ ಹುಮ್ಮಸ್ಸಿನಲ್ಲಿದ್ದು, ತವರಿನ ಪಿಚ್‌ನ ಲಾಭವೆತ್ತಿ 2ನೇ ಪಂದ್ಯದಲ್ಲೂ ಗೆಲ್ಲುವ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಡೀನ್ ಎಲ್ಗರ್ ವಿದಾಯದ ಪಂದ್ಯದಲ್ಲೂ ಭಾರತೀಯ ವೇಗಿಗಳನ್ನು ಕಾಡುವ ತವಕದಲ್ಲಿದ್ದಾರೆ. ಮುಖ್ಯವಾಗಿ ಕಗಿಸೊ ರಬಾಡ, ನಂಡ್ರೆ ಬರ್ಗರ್, ಮಾರ್ಕೊ ಯಾನ್ಸನ್ ಭಾರತೀಯರ ಬ್ಯಾಟರ್‌ಗಳಲ್ಲಿ ನಡುಕ ಹೆಚ್ಚಿಸಿದ್ದಾರೆ.
ಆಸೀಸ್ ಎದುರು ಭಾರತಕ್ಕೆ ಹ್ಯಾಟ್ರಿಕ್ ಸೋಲು, ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಕಾಂಗರೂ ಪಡೆ
ಒಟ್ಟು ಮುಖಾಮುಖಿ: 42
ಭಾರತ: 15
ದ.ಆಫ್ರಿಕಾ: 18
ಡ್ರಾ: 10
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್(ನಾಯಕ), ಜೈಸ್ವಾಲ್, ಗಿಲ್, ವಿರಾಟ್, ರಾಹುಲ್, ಶ್ರೇಯಸ್, ಜಡೇಜಾ, ಶಾರ್ದೂಲ್, ಬೂಮ್ರಾ, ಪ್ರಸಿದ್ಧ್/ಮುಕೇಶ್, ಸಿರಾಜ್.
ದ.ಆಫ್ರಿಕಾ: ಎಲ್ಗರ್(ನಾಯಕ), ಮಾರ್ಕ್‌ರಮ್, ಜೊರ್ಜಿ, ಕೀಗನ್, ಜುಬೈರ್, ಬೆಡಿಂಗ್‌ಹ್ಯಾಮ್, ವೆರೈನ್, ಯಾನ್ಸನ್, ರಬಾಡ, ಬರ್ಗರ್, ಎನ್‌ಗಿಡಿ.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ಪಿಚ್ ರಿಪೋರ್ಟ್
ಕೇಪ್‌ಟೌನ್ ಕ್ರೀಡಾಂಗಣದ ಪಿಚ್ ಮೊದಲ ಟೆಸ್ಟ್‌ನಂತೆಯೇ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಹೆಚ್ಚು. ಪಿಚ್‌ನಲ್ಲಿ ಹುಲ್ಲು ಬೆಳೆದಿರುವ ಕಾರಣ ಹೆಚ್ಚಿನ ಬೌನ್ಸರ್ ಕೂಡಾ ಇರಲಿದೆ.
ದಕ್ಷಿಣ ಆಫ್ರಿಕಾದಲ್ಲಿ ಕೊನೆಯ 3 ಸರಣಿಯಲ್ಲೂ ಸೋಲು
ಭಾರತ ತಂಡ ಈ ಹಿಂದಿನ 3 ಪ್ರವಾಸಗಳಲ್ಲೂ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತಿದೆ. 2011ರಲ್ಲಿ ಕೊನೆ ಬಾರಿ 1-1ರಲ್ಲಿ ಸರಣಿ ಡ್ರಾ ಮಾಡಿಕೊಂಡಿದ್ದ ಭಾರತ, ಬಳಿಕ 2013, 2018, 2021-22ರಲ್ಲಿ ಸರಣಿ ಸೋಲನುಭವಿಸಿದೆ. ಒಟ್ಟಾರೆ ಈ ವರೆಗೆ ದ.ಆಫ್ರಿಕಾದಲ್ಲಿ ನಡೆದ 8 ಸರಣಿಗಳಲ್ಲಿ ಭಾರತ 7ರಲ್ಲಿ ಪರಾಭವಗೊಂಡಿದೆ.