
ನವದೆಹಲಿ (ಮಾ.24) ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ. ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಇದರ ನಡುವೆ ರಾಜಸ್ಥಾನ ರಾಯಲ್ಸ್ ತಂಡ ಮಾರಾಟವಾಗಿದೆ. ಅಮೆರಿಕನ್ ಮೂಲದ ಉದ್ಯಮಿ ಕಲ್ ಸೋಮಾನಿ ಹಾಗೂ ಫ್ಲಿಪ್‌ಕಾರ್ಟ್ ಮಾಲೀಕ ವಾಲ್‌ಮಾರ್ಟ್ ಸಂಸ್ಥಾಪಕ ರಾಬ್ ವಾಲ್ಟನ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಖರೀದಿಸಿದ್ದಾರೆ. ಬರೋಬ್ಬರಿ 15,000 ಕೋಟಿ ರೂಪಾಯಿಗೆ ಈ ಮಾರಾಟ ನಡೆದಿದೆ. ಇದು ಹೊಸ ದಾಖಲೆಯಾಗಿದೆ. ಇದೇ ಮೊದಲ ಬಾರಿಗೆ ಐಪಿಎಲ್ ತಂಡವೊಂದ 1 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಮಾರಾಟವಾಗಿದೆ.
ಅಮೆರಿಕದಲ್ಲಿ ಹಲವು ಉದ್ಯಮ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿರುವ ಕಲ್ ಸೋಮಾನಿ ಹಾಗೂ ರಾಬ್ ವಾಲ್ಟನ್ ಜೊತೆ ಸೇರಿ ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದ್ದಾರೆ. 2023ರಲ್ಲಿ ಕಲ್ ಸೋಮಾನಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸಣ್ಣ ಪಾಲು ಖರೀದಿಸಿದ್ದರು. ಸಣ್ಣ ಹೂಡಿಕೆ ಮೂಲಕ ಐಪಿಎಲ್ ಟೂರ್ನಿಗೆ ಎಂಟ್ರಿಕೊಟ್ಟ ಕಲ್ ಸೋಮಾನಿ ಇದೀಗ ಬಹುಪಾಲನ್ನು ಖರೀದಿಸಿದ್ದಾರೆ.
ಫ್ರಾಂಚೈಸಿ ಬಿಡ್ಡಿಂಗ್‌ನಲ್ಲಿ ಕಲ್ ಸೋಮಾನಿ ಹಾಗೂ ರಾಬ್ ವಾಲ್ಟನ್‌ಗೆ ಟೈಮ್ಸ್ ಗ್ರೂಪ್ ತೀವ್ರ ಪೈಪೋಟಿ ಒಡ್ಡಿತ್ತು. ಇದೀಗ ರಾಜಸ್ಥಾನ ರಾಯಲ್ಸ್‌ನಲ್ಲಿ ಕಲ್ ಸೋಮಾನಿ ಗ್ರೂಪ್ ಹಾಗೂ ರಾಬ್ ವಾಲ್ಟನ್ ಶೇಕಡಾ 100 ರಷ್ಟು ಪಾಲು ಹೊಂದಿದ್ದಾರೆ. ಭಾರತೀಯ ಮೂಲದ ಕಲ್ ಸೋಮಾನಿ ಅಮೆರಿಕದಲ್ಲಿ ಅತೀ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಗಾಲ್ಫ್‌ನಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಗಾಲ್ಫ್ ದಿಗ್ಗ ಟೈಗರ್ ವುಡ್ ಸಹಯೋಗದಲ್ಲಿ ಮೋಟಾರ್ ಸಿಟಿ ಗಾಲ್ಫ್ ಕ್ಲಬ್ ಆರಂಭಿಸಿದ್ದಾರೆ. ಇದೀಗ ಐಪಿಎಲ್ ಮೂಲಕ ಕ್ರಿಕೆಟ್‌ನಲ್ಲೂ ಹೊಸ ಅಧ್ಯಾಯ ಆರಂಭಿಸಿದ್ದಾರೆ.ಕಲ್ ಸೋಮಾನಿ ಶಿಕ್ಷಣ, ಟೆಕ್ನಾಲಜಿ, ಎಐ ಗವರ್ನೆನ್ಸ್ ಹಾಗೂ ಸ್ಪೋಟ್ಸ್ ಟೆಕ್ನಾಲಜಿ ಕ್ಷೇತ್ರದಲ್ಲಿ ಹಲವು ಕಂಪನಿಗಳನ್ನು ಹೂಂದಿದ್ದಾರೆ.
ಐಪಿಎಲ್ 2026 ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ. ಸದ್ಯ ಪ್ರಸಕ್ತ ಫ್ರಾಂಚೈಸಿ ಅಡಿಯಲ್ಲೇ ತಂಡ ಆಡಲಿದೆ. ಮುಂದಿನ 2 ತಿಂಗಳಲ್ಲಿ ಮಾರಾಟದ ಕಾನೂನು ಪ್ರಕ್ರಿಯೆಗಳು ಹಾಗೂ ಹಣದ ವರ್ಗಾವಣೆ ನಡೆಯಲಿದೆ. ಐಪಿಎಲ್ 2026 ಟೂರ್ನಿ ಅಂತ್ಯದ ವೇಳೆ ರಾಜಸ್ಥಾನ ರಾಯಲ್ಸ್ ತಂಡ ಮಾರಾಟ ಪ್ರಕ್ರಿಯೆ ಪೂರ್ಣಗೊಂಡು ಹೊಸ ಮಾಲೀಕತ್ವ ವಹಿಸಿಕೊಳ್ಳಲಿದೆ.
ಸದ್ಯ ರಾಜಸ್ಥಾನ ರಾಯಲ್ಸ್ ಮಾಲೀಕರಾಗಿರುವ ಬ್ರಿಟಿಷ್ ಮೂಲದ ಭಾರತೀಯ ಮನೋಜ್ ಬದಾಲೆ ಕಳೆೆದ 6 ತಿಂಗಳಿಂದ ತಂಡ ಮಾರಾಟದ ಪ್ರಕ್ರಿಯೆ ಆರಂಭಿಸಿದ್ದರು. ಐಪಿಎಲ್ ಟೂರ್ನಿ 2008ರಲ್ಲಿ ಆರಂಭಗೊಂಡಿತ್ತು. ಮೊದಲ ಆವೃತ್ತಿಯಲ್ಲೇ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮನೋಜ್ ಬದಾಲೆ ಅವರ ಎಮರ್ಜಿಂಗ್ ಮೀಡಿಯಾ ವೆಂಚರ್ ಕೇವಲ 67 ಮಿಲಿಯನ್ ಅಮೆರಿಕನ್ ಡಾಲರ್‌ಗೆ ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದ್ದರು. ಇದೀಗ 1 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ ಮಾರಾಟವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.