
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತೀಯ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿದ ಗುಜರಾತ್ ಜೈಂಟ್ಸ್‌ನ ಯುವ ಆಟಗಾರ್ತಿ ಅನುಷ್ಕಾ ಶರ್ಮಾ ಭಾರತ ಮಹಿಳಾ ಟಿ20 ತಂಡಕ್ಕೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಯು ಮುಂದಿನ ತಿಂಗಳು 17 ರಿಂದ 27 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ.
ಮಧ್ಯಪ್ರದೇಶದ ಆಟಗಾರ್ತಿ ಅನುಷ್ಕಾ ಶರ್ಮಾ ಅವರನ್ನು ಮಹಿಳಾ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನಲ್ಲಿ ಗುಜರಾತ್ ಜೈಂಟ್ಸ್ 45 ಲಕ್ಷ ರೂ.ಗೆ ಖರೀದಿಸಿತ್ತು. ಅನ್‌ಕ್ಯಾಪ್ಡ್ ಆಟಗಾರರಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ್ತಿ ಎನ್ನುವ ಹಿರಿಮೆಗೆ ಅನುಷ್ಕಾ ಶರ್ಮಾ ಪಾತ್ರರಾಗಿದ್ದರು. ಈಕೆ ಬಲಗೈ ಮಧ್ಯಮ ವೇಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಅನುಷ್ಕಾ ಶರ್ಮಾ ಗುರುತಿಸಿಕೊಂಡಿದ್ದಾರೆ. ಚೊಚ್ಚಲ ಪಂದ್ಯದಲ್ಲೇ 30 ಎಸೆತಗಳಲ್ಲಿ 44 ರನ್ ಗಳಿಸಿ ಅನುಷ್ಕಾ ಗಮನ ಸೆಳೆದಿದ್ದರು. ಅನುಷ್ಕಾ ಜೊತೆಗೆ ಕಾಶ್ವಿ ಗೌತಮ್ ತಂಡಕ್ಕೆ ಮರಳಿರುವುದು ಮತ್ತೊಂದು ಬದಲಾವಣೆ. ಈ ಹಿಂದೆ ಭಾರತ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಿದ್ದರೂ, ಕಾಶ್ವಿ ಗೌತಮ್ ಟಿ20 ತಂಡಕ್ಕೆ ಇದೇ ಮೊದಲ ಬಾರಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಕೆಟ್ ಕೀಪರ್ ರಿಚಾ ಘೋಷ್ ಅವರಿಗೆ ಬ್ಯಾಕಪ್ ಆಗಿ ಉಮಾ ಛೆಟ್ರಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
17ರ ಹರೆಯದ ಜಿ. ಕಮಾಲಿನಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಕಳಪೆ ಫಾರ್ಮ್‌ನಿಂದಾಗಿ ಆಲ್‌ರೌಂಡರ್ ಅಮನ್‌ಜೋತ್ ಕೌರ್ ಮತ್ತು ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಈ ಸರಣಿಯು ವಿಶ್ವಕಪ್ ತಂಡದ ಆಯ್ಕೆಯಲ್ಲೂ ನಿರ್ಣಾಯಕವಾಗಲಿದೆ.
ಏಪ್ರಿಲ್ 17 ರಂದು ಡರ್ಬನ್‌ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಎರಡನೇ ಪಂದ್ಯ 19 ರಂದು ಡರ್ಬನ್‌ನಲ್ಲಿ ನಡೆಯಲಿದೆ. ಮೂರನೇ ಟಿ20 ಪಂದ್ಯ 22 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ನಾಲ್ಕನೇ ಟಿ20 ಪಂದ್ಯ 25 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಮತ್ತು ಐದನೇ ಟಿ20 ಪಂದ್ಯ 27 ರಂದು ಬೆನೋನಿಯಲ್ಲಿ ನಡೆಯಲಿದೆ. ಜೂನ್ 12 ರಂದು ಆರಂಭವಾಗಲಿರುವ ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಪ್ರವಾಸವು ತಂಡವನ್ನು ಸಿದ್ಧಪಡಿಸಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೀ ಚರಣಿ, ಶ್ರೇಯಾಂಕಾ ಪಾಟೀಲ್, ಕಾಶ್ವಿ ಗೌತಮ್, ಭಾರತಿ ಫುಲ್ಮಾಲಿ, ಉಮಾ ಛೆಟ್ರಿ (ವಿಕೆಟ್ ಕೀಪರ್), ಅನುಷ್ಕಾ ಶರ್ಮಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.