ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಿದ 19 ವರ್ಷದ ಸ್ಯಾಮ್ ಕೊನ್‌ಸ್ಟಾಸ್, ಜಸ್ಪ್ರೀತ್ ಬುಮ್ರಾ ಅವರ ಓವರ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ 4,483 ಎಸೆತಗಳ ಬಳಿಕ ಮೊದಲ ಬಾರಿಗೆ ಸಿಕ್ಸರ್ ಚಚ್ಚಿಸಿಕೊಂಡಿದ್ದಾರೆ. ಕೊನ್‌ಸ್ಟಾಸ್ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಭರ್ಜರಿ ಚಾಲನೆ ಸಿಕ್ಕಿದ್ದು ಮೊದಲ ದಿನವೇ ಆತಿಥೇಯ ಆಸ್ಟ್ರೇಲಿಯಾ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಇನ್ನು ಈ ಟೆಸ್ಟ್ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದ ಸ್ಯಾಮ್ ಕೊನ್‌ಸ್ಟಾಸ್ ಚೊಚ್ಚಲ ಪಂದ್ಯದಲ್ಲೇ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸಲು ಆಸೀಸ್ ಬ್ಯಾಟರ್‌ಗಳು ಪರದಾಡುತ್ತಿದ್ದರು. ಆದರೆ 19 ವರ್ಷದ ಸ್ಯಾಮ್ ಕೊನ್‌ಸ್ಟಾಸ್, ಬುಮ್ರಾ ಅವರ ಬೌಲಿಂಗ್‌ನ್ನು ದಿಟ್ಟವಾಗಿ ಎದುರಿಸುವ ಮೂಲಕ ಮಿಂಚಿದ್ದಾರೆ. ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅತಿ ಕಿರಿಯ ಆರಂಭಿಕ ಬ್ಯಾಟರ್ ಎನಿಸಿಕೊಂಡಿರುವ ಸ್ಯಾಮ್ ಕೊನ್‌ಸ್ಟಾಸ್, ಬುಮ್ರಾ ಒಂದೇ ಓವರ್‌ನಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. ಇದರೊಂದಿಗೆ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಬರೋಬ್ಬರಿ 4,483 ಎಸೆತಗಳ ಬಳಿಕ ಮೊದಲ ಬಾರಿಗೆ ಸಿಕ್ಸರ್ ಚಚ್ಚಿಸಿಕೊಂಡಿದ್ದಾರೆ.
undefined
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೊಹ್ಲಿ ಭುಜಕ್ಕೆ ಭುಜ ತಾಗಿಸಿದ 19ರ ಪೋರ ಸ್ಯಾಮ್ ಕೊನ್‌ಸ್ಟಾಸ್! ವಿಡಿಯೋ ವೈರಲ್
ಹೌದು, ಜಸ್ಪ್ರೀತ್ ಬುಮ್ರಾ ಮೂರು ವರ್ಷಗಳ ಹಿಂದೆ ಅಂದರೆ 2021ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಸಿಕ್ಸರ್ ಸಿಡಿಸಿದ್ದರು. ಇದಾದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೂ ಯಾವೊಬ್ಬ ಬ್ಯಾಟರ್ ಸಹ ಬುಮ್ರಾಗೆ ಸಿಕ್ಸರ್ ಸಿಡಿಸಲು ಯಶಸ್ವಿಯಾಗಿರಲಿಲ್ಲ. ಆದರೆ ಸ್ಯಾಮ್ ಕೊನ್‌ಸ್ಟಾಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಾವೆದುರಿಸಿದ 23ನೇ ಎಸೆತದಲ್ಲೇ ರಿವರ್ಸ್ ರ್ಯಾಂಪ್ ಮೂಲಕ ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.
ಒಂದೇ ಓವರ್‌ನಲ್ಲಿ ಅತಿಹೆಚ್ಚು ರನ್ ಚಚ್ಚಿಸಿಕೊಂಡ ಬುಮ್ರಾ:
ಇನ್ನು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಬರೋಬ್ಬರಿ 18 ರನ್ ಚಚ್ಚಿಸಿಕೊಂಡರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬಿಟ್ಟುಕೊಟ್ಟ ಗರಿಷ್ಠ ರನ್ ಎನಿಸಿಕೊಂಡಿತು. ಬುಮ್ರಾ ಎಸೆದ ಈ ಓವರ್‌ನಲ್ಲಿ ಸ್ಯಾಮ್ ಕೊನ್‌ಸ್ಟಾಸ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಚಚ್ಚಿದರು.
ಆಸೀಸ್ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ 19 ವರ್ಷದ ಸ್ಯಾಮ್ ಕೊನ್‌ಸ್ಟಾಸ್ ತಾವಾಡಿದ ಮೊದಲ ಇನ್ನಿಂಗ್ಸ್‌ನಲ್ಲೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಯಾಮ್ ಕೊನ್‌ಸ್ಟಾಸ್ ಕೇವಲ 52 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಪೂರೈಸಿದರು. ಅಂತಿಮವಾಗಿ ಸ್ಯಾಮ್ ಕೊನ್‌ಸ್ಟಾಸ್ 65 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 60 ರನ್ ಬಾರಿಸಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲಗೆ ಬಿದ್ದರು.