ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಚೊಚ್ಚಲ ಆಟಗಾರ ಸ್ಯಾಮ್ ಕೊನ್‌ಸ್ಟಾಸ್ ನಡುವೆ ಮಾತಿನ ಚಕಮಕಿ ನಡೆಯಿತು. ಪಿಚ್ ಮೇಲೆ ಭುಜ ತಾಗಿಸಿಕೊಂಡ ಘಟನೆಯಲ್ಲಿ ಕೊಹ್ಲಿ 19 ವರ್ಷದ ಕೊನ್‌ಸ್ಟಾಸ್‌ರನ್ನು ಕೆಣಕಿದರು. ಕೊನ್‌ಸ್ಟಾಸ್ ಪ್ರತ್ಯುತ್ತರ ನೀಡಿದ್ದು, ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಮನಗೊಳಿಸಿದರು. ಕೊನ್‌ಸ್ಟಾಸ್ ಚೊಚ್ಚಲ ಪಂದ್ಯದಲ್ಲೇ 60 ರನ್ ಗಳಿಸಿ ಗಮನ ಸೆಳೆದರು.
ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಅಂದರೆ ಹಾಗೆ ಅಲ್ಲಿ ಸ್ಲೆಡ್ಜಿಂಗ್‌ಗೆ ಕೊರತೆ ಇರುವುದಿಲ್ಲ. ಮೈದಾನದಲ್ಲಿ ಉಭಯ ತಂಡಗಳ ಆಟಗಾರರ ಪಂದ್ಯದ ವೇಳೆಯಲ್ಲಿಯೇ ಒಬ್ಬರನ್ನೊಬ್ಬರು ಕೆಣಕುವುದು ಸಾಮಾನ್ಯ. ಇದೀಗ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಆಸೀಸ್ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ 19 ವರ್ಷದ ಪೋರ ಸ್ಯಾಮ್ ಕೊನ್‌ಸ್ಟಾಸ್ ನಡುವೆ ಭುಜಕ್ಕೆ ಭುಜ ತಾಗಿಸಿಕೊಂಡ ಘಟನೆ ನಡೆದಿದೆ.
ಹೌದು, ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ 19 ವರ್ಷದ ಸ್ಯಾಮ್ ಕೊನ್‌ಸ್ಟಾಸ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಚೊಚ್ಚಲ ಪಂದ್ಯದಲ್ಲೇ ಜಸ್ಪ್ರೀತ್ ಬುಮ್ರಾ ಅವರಂತಹ ಮಾರಕ ವೇಗಿಯ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಗಮನ ಸೆಳೆದಿದ್ದಾರೆ. ಸ್ಯಾಮ್ ಕೊನ್‌ಸ್ಟಾಸ್ ಅವರ ಬ್ಯಾಟಿಂಗ್ ಹೇಗಿತ್ತು ಎಂದರೆ ಟೀಂ ಇಂಡಿಯಾ ಬೌಲರ್‌ಗಳನ್ನು ಆತನನ್ನು ಕಟ್ಟಿಹಾಕಲು ಪರದಾಡುವಂತಹ ಪರಿಸ್ಥಿತಿ ನಿರ್ಮಿಸಿದ್ದರು. ಈ ಸಂದರ್ಭದಲ್ಲಿಯೇ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್‌ಸ್ಟಾಸ್ ಅವರ ಭುಜಕ್ಕೆ ಭುಜ ತಾಗಿಸಿಕೊಂಡು ಮಾತಿನ ಚಕಮಕಿ ಘಟನೆಯೂ ನಡೆದು ಹೋಯಿತು.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಆರಂಭ!
ಪಿಚ್‌ನ ಎದುರು ಬದುರಾಗಿ ಸ್ಯಾಮ್ ಕೊನ್‌ಸ್ಟಾಸ್ ಹಾಗೂ ವಿರಾಟ್ ಕೊಹ್ಲಿ ಬರುತ್ತಿದ್ದರು. ಈ ವೇಳೆ ಉದ್ದೇಶಪೂರ್ವಕವಾಗಿಯೇ ಈ ಇಬ್ಬರು ಆಟಗಾರರು ಭುಜಕ್ಕೆ ಭುಜ ತಾಗಿಸಿಕೊಂಡರು. ಆಗ ಕೊಹ್ಲಿಯೇ 19 ವರ್ಷದ ಪೋರನನ್ನು ಮಾತಿಗೆಳೆದರು. ಆಗ ಸ್ಯಾಮ್ ಕೊನ್‌ಸ್ಟಾಸ್ ಕೂಡಾ ಸುಮ್ಮನಾಗದೇ ಕೊಹ್ಲಿಗೆ ಪ್ರತಿ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಕೆಲಕಾಲ ಆಟಗಾರರ ನಡುವೆ ಉದ್ವಿಘ್ನದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಅಂಪೈರ್ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.
ಹೀಗಿತ್ತು ನೋಡಿ ಆ ವಿಡಿಯೋ:
ಮೊದಲ ಪಂದ್ಯದಲ್ಲೇ ಗಮನ ಸೆಳೆದ ಸ್ಯಾಮ್ ಕೊನ್‌ಸ್ಟಾಸ್:
ಆಸೀಸ್ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ 19 ವರ್ಷದ ಸ್ಯಾಮ್ ಕೊನ್‌ಸ್ಟಾಸ್ ತಾವಾಡಿದ ಮೊದಲ ಇನ್ನಿಂಗ್ಸ್‌ನಲ್ಲೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಯಾಮ್ ಕೊನ್‌ಸ್ಟಾಸ್ ಕೇವಲ 52 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಪೂರೈಸಿದರು. ಅಂತಿಮವಾಗಿ ಸ್ಯಾಮ್ ಕೊನ್‌ಸ್ಟಾಸ್ 65 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 60 ರನ್ ಬಾರಿಸಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲಗೆ ಬಿದ್ದರು.
