
ಅಹಮದಾಬಾದ್(ಮಾ.06): ತಮ್ಮ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಪ್ಯಾಟ್ ಕಮಿನ್ಸ್, ಸದ್ಯ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಭಾರತ ಎದರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4ನೇ ಟೆಸ್ಟ್ ಪಂದ್ಯವು ಮಾರ್ಚ್ 09ರಿಂದ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಡೆಲ್ಲಿಯಲ್ಲಿ ಭಾರತ ಎದುರಿನ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯದ ಬೆನ್ನಲ್ಲೇ ಪ್ಯಾಟ್ ಕಮಿನ್ಸ್, ಕೌಟುಂಬಿಕ ಸಮಸ್ಯೆಯ ಕಾರಣ ನೀಡಿ ಆಸ್ಟ್ರೇಲಿಯಾಗೆ ವಾಪಾಸ್ಸಾಗಿದ್ದರು. ಪ್ಯಾಟ್ ಕಮಿನ್ಸ್ ತಾಯಿ ಮರಿಯಾ, ಗಂಭೀರ ಸ್ತನ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಕಮಿನ್ಸ್, ತವರಿನಲ್ಲೇ ಉಳಿದುಕೊಂಡಿದ್ದು, ಭಾರತ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು, ಭಾರತ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು, ಬಲಿಷ್ಠ ಟೀಂ ಇಂಡಿಯಾಗೆ ಸೋಲಿನ ರುಚಿ ತೋರಿಸಿತ್ತು. ಇದಷ್ಟೇ ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಅರ್ಹತೆಯನ್ನು ಗಿಟ್ಟಿಸಿಕೊಂಡಿತ್ತು. ಇದೀಗ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಕಾಂಗರೂ ಪಡೆ ತಮ್ಮ ಗೆಲುವಿನ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
WPL 2023: ರನ್ ಹೊಳೆ ಹರಿಸಲು ಸಣ್ಣ ಬೌಂಡರಿ..! BCCI ಮಾಸ್ಟರ್ ಪ್ಲಾನ್
ನಾಲ್ಕನೇ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ವಿರುದ್ದ ಆಸ್ಟ್ರೇಲಿಯಾ ತಂಡವು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಆದರೆ ಏಕದಿನ ಸರಣಿಗೆ ಪ್ಯಾಟ್ ಕಮಿನ್ಸ್ ಲಭ್ಯರಾಗುವ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಯಾವುದೇ ಮಾಹಿತಿಯಿಲ್ಲ. ಕಳೆದ ಆರೋನ್ ಫಿಂಚ್ ಆಸ್ಟ್ರೇಲಿಯಾ ಏಕದಿನ ತಂಡದ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದರು. ಹೀಗಾಗಿ ಟೆಸ್ಟ್ ತಂಡದ ನಾಯಕರಾಗಿದ್ದ ಪ್ಯಾಟ್ ಕಮಿನ್ಸ್‌ಗೆ ಏಕದಿನ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿತ್ತು.
ಇನ್ನು ವೇಗದ ಬೌಲರ್ ಜೇ ರಿಚರ್ಡ್‌ಸನ್, ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಭಾರತ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಜೇ ರಿಚರ್ಡ್‌ಸನ್ ಬದಲಿಗೆ ನೇಥನ್ ಎಲ್ಲಿಸ್ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.