ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯ ಸಾಧಿಸಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಗೆದ್ದುಕೊಂಡಿತು. ಈ ಸೋಲಿನೊಂದಿಗೆ ಭಾರತ ದಶಕದ ಬಳಿಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಸೋತಿದೆ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಸಿಡ್ನಿ: ಭಾರತ ಹಾಗೂ ಅಸ್ಟ್ರೇಲಿಯಾ ನಡುವಿನ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವಾದ ಸಿಡ್ನಿ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 3-1 ಅಂತರದಲ್ಲಿ ಜಯಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅಧಿಕೃತವಾಗಿ ಲಗ್ಗೆಯಿಟ್ಟಿದೆ. ಇನ್ನು ಈ ಸೋಲಿನೊಂದಿಗೆ ಭಾರತ ಕ್ರಿಕೆಟ್ ತಂಡವು ದಶಕದ ಬಳಿಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಸೋತಿದೆ. ಭಾರತ ತಂಡವು 2014ರಲ್ಲಿ ಕೊನೆಯ ಬಾರಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋತಿತ್ತು. ಇದಷ್ಟೇ ಅಲ್ಲದೇ ಈ ಸೋಲು ಭಾರತ ಕ್ರಿಕೆಟ್ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹ್ಯಾಟ್ರಿಕ್ ಫೈನಲ್ ಕನಸನ್ನು ನುಚ್ಚುನೂರು ಮಾಡಿದೆ.
ಗೆಲ್ಲಲು 162 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಸ್ಪೋಟಕ ಆರಂಭವನ್ನು ಪಡೆಯಿತಾದರೂ, ಪ್ರಸಿದ್ದ್ ಕೃಷ್ಣ ಲಂಚ್ ಬ್ರೇಕ್ ವೇಳೆಗೂ ಮೊದಲೇ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಆದರೆ ಒಂದು ತುದಿಯಲ್ಲಿ ಉಸ್ಮಾನ್ ಖವಾಜ ಕೇವಲ 45 ಎಸೆತಗಳಲ್ಲಿ 41 ಸಿಡಿಸುವ ಮೂಲಕ ಆಸೀಸ್‌ಗೆ ಆಸರೆಯಾದರು. ಅಂತಿಮವಾಗಿ ಉಸ್ಮಾನ್ ಖವಾಜ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಸಿರಾಜ್ ಯಶಸ್ವಿಯಾದರು. ಅಂದ ಹಾಗೆ ಇದು ಸಿರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸಿರಾಜ್ ಕಬಳಿಸಿದ ನೂರನೇ ವಿಕೆಟ್ ಎನಿಸಿಕೊಂಡಿತು.
ಇದಾದ ಬಳಿಕ ಐದನೇ ವಿಕೆಟ್‌ಗೆ ಜತೆಯಾದ ಟ್ರ್ಯಾವಿಸ್ ಹೆಡ್ ಹಾಗೂ ವೆಬ್‌ಸ್ಟರ್ ಮುರಿಯದ 50+ ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಯಾವುದೇ ಅಪಾಯವಿಲ್ಲದೇ ಗೆಲುವಿನ ದಡ ಸೇರಿಸಿದರು. ವೆಬ್‌ಸ್ಟರ್ 34 ಎಸೆತಗಳಲ್ಲಿ ಅಜೇಯ 39 ರನ್ ಸಿಡಿಸಿದರೆ, ಟ್ರ್ಯಾವಿಸ್ ಹೆಡ್ 34 ರನ್ ಚಚ್ಚಿ ಅಜೇಯರಾಗುಳಿದರು
ದಶಕದ ಬಳಿಕ ಭಾರತ ವಿರುದ್ಧ ಸರಣಿಯಲ್ಲಿ 3 ಪಂದ್ಯ ಗೆದ್ದ ಆಸ್ಟ್ರೇಲಿಯಾ
ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ದಶಕದ ಬಳಿಕ 2ಕ್ಕಿಂತ ಹೆಚ್ಚು ಪಂದ್ಯದಲ್ಲಿ ಗೆಲುವು ಸಾಧಿಸಿತು. 2014ರಲ್ಲಿ ಆಸ್ಟ್ರೇಲಿಯಾ 2 ಪಂದ್ಯ ಗೆದ್ದಿತ್ತು. ಆ ಬಳಿಕ ಕಳೆದ 4 ಸರಣಿಗಳಲ್ಲೂ ತಲಾ 1 ಪಂದ್ಯದಲ್ಲಿ ಜಯಗಳಿಸಿತ್ತು. ಈ ಬಾರಿ ಸರಣಿಯಲ್ಲಿ 3-1ರಲ್ಲಿ ಗೆಲುವು ಸಾಧಿಸಿದೆ.