Latest Videos

Border Gavaskar Trophy: ಕೆ ಎಲ್ ರಾಹುಲ್ ಸ್ಥಾನದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸುನಿಲ್ ಗವಾಸ್ಕರ್..!

By Naveen KodaseFirst Published Feb 12, 2023, 1:51 PM IST
Highlights

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕೆ ಎಲ್ ರಾಹುಲ್ ಫೇಲ್‌
ಕೆ ಎಲ್ ರಾಹುಲ್ ಪರ ಬ್ಯಾಟ್ ಬೀಸಿದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್
ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 17ರಿಂದ ಆರಂಭ

ನವದೆಹಲಿ(ಫೆ.12): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಟೆಸ್ಟ್‌ ಪಂದ್ಯಕ್ಕೆ ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್‌ ಅವರ ಸ್ಥಾನದ ಬಗ್ಗೆ ಟೀಂ ಮ್ಯಾನೇಜ್‌ಮೆಂಟ್ ಕಠಿಣ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಿದ್ದೂ ಕೆ ಎಲ್ ಅವರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇನಿಂಗ್ಸ್‌ ಹಾಗೂ 132 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹೀಗಿದ್ದೂ ಟೀಂ ಇಂಡಿಯಾ, ತನ್ನ ಅಗ್ರಕ್ರಮಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಕೊಂಚ ಸುಧಾರಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ನಾಯಕ ರೋಹಿತ್ ಶರ್ಮಾ ಆಕರ್ಷಕ 120 ರನ್‌ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನುಳಿದಂತೆ ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು. 

ಅದರಲ್ಲೂ ಹಿರಿಯ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಸ್ಥಾನದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಲಾರಂಭಿಸಿದ್ದಾರೆ. ಭಾರತ ಟೆಸ್ಟ್ ತಂಡದ ಉಪನಾಯಕರೂ ಆಗಿರುವ ಕೆ ಎಲ್ ರಾಹುಲ್, ತಮ್ಮ ಅಸ್ಥಿರ ಪ್ರದರ್ಶನದ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ. ಇನ್ನು ಇದೇ ವೇಳೆ ಯುವ ಪ್ರತಿಭಾನ್ವಿಯ ಬ್ಯಾಟರ್ ಶುಭ್‌ಮನ್ ಗಿಲ್‌, ಮೂರೂ ಮಾದರಿಯ ಕ್ರಿಕೆಟಿಗನಾಗುವತ್ತ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಬಾಂಗ್ಲಾದೇಶ ಪ್ರವಾಸದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ ಎಲ್ ರಾಹುಲ್, ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಆದರೆ ನಾಲ್ಕು ಇನಿಂಗ್ಸ್‌ನಲ್ಲೂ ರಾಹುಲ್ ವೈಫಲ್ಯ ಅನುಭವಿಸಿದ್ದರು. ಇನ್ನೊಂದೆಡೆ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಗಿಲ್ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದಿದ್ದರು.

ಟೀಂ ಇಂಡಿಯಾ ಉಪನಾಯಕ ಕೆ ಎಲ್ ರಾಹುಲ್, ಇದೀಗ ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ 71 ಎಸೆತಗಳನ್ನು ಎದುರಿಸಿ ಕೇವಲ 20 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. 2021-22ನೇ ಸಾಲಿನ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅದ್ಭುತ ಫಾರ್ಮ್‌ ಹೊಂದಿದ್ದ ಕೆ ಎಲ್ ರಾಹುಲ್, ಇದೀಗ ಕಳೆದ 8 ಇನಿಂಗ್ಸ್‌ಗಳಲ್ಲಿ ಒಮ್ಮೆಯೂ 30+ ರನ್ ದಾಖಲಿಸಲು ಸಫಲವಾಗದಿರುವುದು ಕನ್ನಡಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಕೆಎಲ್‌ ರಾಹುಲ್‌ ವಿರುದ್ಧ ವೆಂಕಿ ಗರಂ, 'ಬೇರೆ ಯಾರಿಗಾದ್ರೂ ಚಾನ್ಸ್‌ ನೀಡಿ..' ಎಂದ ಮಾಜಿ ವೇಗಿ!

" ಭರ್ಜರಿ ಲಯದಲ್ಲಿರುವ ಶುಭ್‌ಮನ್ ಗಿಲ್ ಅವರನ್ನು ಹೊರಗಿಟ್ಟು ಕೆ ಎಲ್ ರಾಹುಲ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡುವುದು ನಿಜಕ್ಕೂ ಒಂದು ರೀತಿಯ ಕಠಿಣ ನಿರ್ಧಾರವೇ ಸರಿ. ಅಕ್ಷರ್ ಪಟೇಲ್ ಅವರನ್ನೇ ನೀವೊಮ್ಮೆ ನೋಡಿ, ಅವರೂ ಕೂಡಾ ಅದ್ಭುತ ಬ್ಯಾಟಿಂಗ್ ನಡೆಸಿದ್ದಾರೆ. ಇದು ಭಾರತದ ಬೆಂಚ್‌ ಸ್ಟ್ರೆಂಥ್ ರೆಡಿಯಿದ್ದು, ಅವಕಾಶ ಸಿಕ್ಕಿದರೇ ತಾವೇನು ಮಾಡಬಲ್ಲೆವು ಎನ್ನುವುದನ್ನು ತೋರಿಸಲು ಸಜ್ಜಾಗಿದ್ದಾರೆ" ಎಂದು ಇಂಡಿಯಾ ಟುಡೆ ಕಾರ್ಯಕ್ರಮವೊಂದರಲ್ಲಿ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

"ನನ್ನ ಪ್ರಕಾರ, ಡೆಲ್ಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಕೆ ಎಲ್ ರಾಹುಲ್‌ಗೆ ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ. ಎರಡನೇ ಟೆಸ್ಟ್ ಪಂದ್ಯದ ಬಳಿಕ ಕೆ ಎಲ್ ರಾಹುಲ್ ಅವರ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ಇದೇ ವೇಳೆ ನಿಜಕ್ಕೂ ತಂಡದೊಳಗೆ ಸ್ಥಾನ ಪಡೆಯುವ ಅರ್ಹತೆ ಹೊಂದಿರುವ ಆಟಗಾರರಿಗೆ ಅವಕಾಶ ನೀಡುವುದು ಕೂಡಾ ನ್ಯಾಯಸಮ್ಮತವಾದ ವಿಚಾರವೇ ಆಗಿದೆ" ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ 4 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರಾಹುಲ್, ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದ್ದರೇ, ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನು ತೋರಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ಫೆಬ್ರವರಿ 17ರಿಂದ ಡೆಲ್ಲಿಯಲ್ಲಿ ಆರಂಭವಾಗಲಿದೆ.

click me!