ಬಾಲಿವುಡ್ ನಟ ಗೋವಿಂದ ಅಳಿಯ ಐಪಿಎಲ್ ಹರಾಜಿಗೆ ಎಂಟ್ರಿ; ಮೂಲ ಬೆಲೆ ಒಂದೂವರೆ ಕೋಟಿ ರುಪಾಯಿ!

Published : Nov 10, 2024, 04:06 PM IST
ಬಾಲಿವುಡ್ ನಟ ಗೋವಿಂದ ಅಳಿಯ ಐಪಿಎಲ್ ಹರಾಜಿಗೆ ಎಂಟ್ರಿ; ಮೂಲ ಬೆಲೆ ಒಂದೂವರೆ ಕೋಟಿ ರುಪಾಯಿ!

ಸಾರಾಂಶ

2023ರ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಬಾಲಿವುಡ್ ನಟ ಗೋವಿಂದ ಅವರ ಅಳಿಯ ಇದೀಗ ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 

ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಹರಾಜಿನಲ್ಲಿ ಇನ್ನುಳಿದ ಆಟಗಾರರನ್ನು ಖರೀದಿಸುವ ಲೆಕ್ಕಾಚಾರ ಹಾಕಿಕೊಂಡಿವೆ.

ಇನ್ನು ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಹಲವು ಫ್ರಾಂಚೈಸಿಗಳು ತನ್ನ ತಂಡದ ಕೆಲವು ಸ್ಟಾರ್ ನಾಯಕರನ್ನು ಹಾಗೂ ಸ್ಟಾರ್ ಆಟಗಾರರನ್ನು ರಿಲೀಸ್ ಮಾಡಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಂಟ್ಸ್ ಹಾಗೂ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ತಮ್ಮ ತಂಡದ ನಾಯಕರುಗಳಿಗೆ ಗೇಟ್‌ಪಾಸ್ ಕೊಟ್ಟಿದೆ. ಇನ್ನು ಐಪಿಎಲ್‌ನ ದುಬಾರಿ ಆಟಗಾರ ಎನಿಸಿಕೊಂಡಿರುವ ಆಸೀಸ್ ಮೂಲದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್, ಇಂಗ್ಲೆಂಡ್‌ನ ಟಿ20 ಸ್ಪೆಷಲಿಸ್ಟ್ ಆಟಗಾರರಾದ ಜೋಸ್ ಬಟ್ಲರ್, ಫಿಲ್ ಸಾಲ್ಟ್, ಜೋಫ್ರಾ ಆರ್ಚರ್ ಸೇರಿದಂತೆ ಹಲವು ಆಟಗಾರರು ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. 

ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ!

ಇನ್ನು ಇದೆಲ್ಲದರ ನಡುವೆ ಈ ಬಾರಿಯ ಮೆಗಾ ಹರಾಜಿನಲ್ಲಿ ಬಾಲಿವುಡ್ ಹಿರಿಯ ನಟ ಗೋವಿಂದ ಅವರ ಅಳಿಯ ಕೂಡಾ ಆಟಗಾರರ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಮುಂಬರುವ ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೆ ಬರೋಬ್ಬರಿ 1574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಈ ಪೈಕಿ ಟೀಂ ಇಂಡಿಯಾ ಪರ 2 ಏಕದಿನ ಹಾಗೂ ಒಂದು ಟಿ20 ಪಂದ್ಯವನ್ನಾಡಿರುವ ಬಾಲಿವುಡ್ ನಟ ಗೋವಿಂದ ಅವರ ಅಳಿಯ ನಿತೀಶ್ ರಾಣಾ ಕೂಡಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

ನಿತೀಶ್ ರಾಣಾ ಬಾಲಿವುಡ್ ನಟ ಗೋವಿಂದ ಅವರ ಸಂಬಂಧಿ ಹಾಗೂ ಅಳಿಯ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. 30 ವರ್ಷದ ನಿತೀಶ್ ರಾಣಾ, ಆಲ್ರೌಂಡರ್ ವಿಭಾಗದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದು, ತಮ್ಮ ಮೂಲಬೆಲೆ 1.5 ಕೋಟಿ ರುಪಾಯಿ ನಿಗದಿಪಡಿಸಿದ್ದಾರೆ. ನಿತೀಶ್ ರಾಣಾ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕೋಲ್ಕತಾ ನೈಟ್ ರೈಡರ್ಸ್‌ ಪರ ಕಣಕ್ಕಿಳಿದಿದ್ದರು. ರಾಣಾ ಕೆಕೆಆರ್ ಪರ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಆಡಿದ್ದರು.

ಐಪಿಎಲ್ ಮೆಗಾ ಹರಾಜು: ಇಂಗ್ಲೆಂಡ್‌ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟ ಫ್ರಾಂಚೈಸಿಗಳು!

ನಿತೀಶ್ ರಾಣಾ ಅವರ ಪತ್ನಿ ಸಚಿ ಮಾರವಹ್, ಬಾಲಿವುಡ್ ನಟ ಗೋವಿಂದ ಅವರ ಸೊಸೆಯ ಸಮಾನವಾದ ಸಂಬಂಧ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ನಿತೀಶ್ ರಾಣಾ, ಗೋವಿಂದ ಅವರ ಅಳಿಯ ಎನಿಸಿಕೊಂಡಿದ್ದಾರೆ. ಒಮ್ಮೆ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಗೋವಿಂದ ಅವರ ಸೋದರಳಿಯ ಕೃಷ್ಣ ಅಭಿಷೇಕ್, ಸಚಿ ಗೋವಿಂದ ಅವರ ಚಿಕ್ಕಪ್ಪನ ಮಗಳು ಎಂದು ಹೇಳಿದ್ದರು. ಆ ಕಾರ್ಯಕ್ರಮದಲ್ಲಿ ಸಚಿ ಹಾಗೂ ನಿತೀಶ್ ರಾಣಾ ಕೂಡಾ ಭಾಗವಹಿಸಿ ಸೈ ಎನಿಸಿಕೊಂಡಿದ್ದರು.

2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ, ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು. ನಿತೀಶ್ ರಾಣಾ ನಾಯಕತ್ವದಲ್ಲಿ ಕೆಕೆಆರ್ ತಂಡವು ಆಡಿದ 14 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿತ್ತು. ನಿತೀಶ್ ರಾಣಾ ಇದುವರೆಗೂ ಒಟ್ಟು 107 ಐಪಿಎಲ್ ಪಂದ್ಯಗಳನ್ನಾಡಿದ್ದು, 2636 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 10 ವಿಕೆಟ್ ಕಬಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್