
ಮುಂಡಗೋಡು : ಬದುಕು ಕತ್ತಲಲ್ಲಿದ್ದರೂ ಗುರಿ ಮಾತ್ರ ಬೆಳಕಿನಂತಿರಬೇಕು ಎಂಬ ಮಾತಿಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ವಿದ್ಯಾರ್ಥಿನಿಯೊಬ್ಬಳು ಜೀವಂತ ಸಾಕ್ಷಿಯಾಗಿದ್ದಾರೆ. ಇಲ್ಲಿನ ಜ್ಞಾನ ಪ್ರಜ್ಞಾ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿನಿ ರಂಜಿತಾ ಹಾವೇರಿ ಅಂತಾರಾಷ್ಟ್ರೀಯ ಮಹಿಳಾ ಅಂಧರ ಕ್ರಿಕೆಟ್ ಸರಣಿಗೆ ಆಯ್ಕೆಯಾಗಿದ್ದು, ಪ್ರತಿಷ್ಠಿತ ಭಾರತೀಯ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಸಣ್ಣ ಪಟ್ಟಣದಿಂದ ಅಂತಾರಾಷ್ಟ್ರೀಯ ಮೈದಾನದವರೆಗಿನ ರಂಜಿತಾ ಅವರ ಈ ಪಯಣ ಈಗ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದೆ.
ಸಾಮಾನ್ಯವಾಗಿ ಕ್ರಿಕೆಟ್ ಎಂದರೆ ಕಣ್ಣಿನ ದೃಷ್ಟಿ ಮತ್ತು ವೇಗದ ಚಲನೆಗಳ ಆಟ ಎಂದೇ ಭಾವಿಸಲಾಗುತ್ತದೆ. ದೃಷ್ಟಿಹೀನತೆಯ ಸವಾಲನ್ನು ಮೆಟ್ಟಿ ನಿಂತ ರಂಜಿತಾ ಹಾವೇರಿ, ತಮ್ಮ ಅದಮ್ಯ ಆತ್ಮವಿಶ್ವಾಸ, ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಅಂಧರ ಕ್ರಿಕೆಟ್‌ನಲ್ಲಿ ಆಟಗಾರರು ಬಾಲ್ ಒಳಗೆ ಅಳವಡಿಸಲಾದ ಸಣ್ಣ ಲೋಹದ ಮಣಿಗಳ ಶಬ್ದವನ್ನು ಆಲಿಸಿ ಚೆಂಡಿನ ದಿಕ್ಕು ಮತ್ತು ವೇಗವನ್ನು ಅಂದಾಜಿಸಿ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಮಾಡುತ್ತಾರೆ. ಇಂತಹ ಸವಾಲಿನ ಕ್ರೀಡೆಯಲ್ಲಿ ಪಳಗಲು ನಿರಂತರ ಅಭ್ಯಾಸ ಮತ್ತು ಏಕಾಗ್ರತೆ ಅತ್ಯಗತ್ಯ.
ಮುಂಡಗೋಡಿನ ಜ್ಞಾನ ಪ್ರಜ್ಞಾ ಅಂಧ ಮಕ್ಕಳ ಶಾಲೆಯಲ್ಲಿ ದೊರೆತ ಪ್ರೋತ್ಸಾಹ ಹಾಗೂ ಸಮರ್ಥನಂ ಸಂಸ್ಥೆ ಮತ್ತು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (CABI) ಸಂಸ್ಥೆಗಳು ಕಲ್ಪಿಸಿದ ವೇದಿಕೆಯನ್ನು ರಂಜಿತಾ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ದೃಷ್ಟಿಹೀನತೆ ತಮ್ಮ ಕನಸುಗಳಿಗೆ ಎಂದಿಗೂ ಅಡ್ಡಿಯಾಗಬಾರದು ಎಂದು ನಿರ್ಧರಿಸಿದ ಅವರು, ಹಗಲಿರುಳು ಅಭ್ಯಾಸ ನಡೆಸಿ ತಮ್ಮ ಪ್ರತಿಭೆ ಸಾಬೀತುಪಡಿಸಿದರು. ಇದರ ಫಲವಾಗಿ ಇಂದು ಭಾರತೀಯ ಜೆರ್ಸಿ ತೊಟ್ಟು ಅಂತಾರಾಷ್ಟ್ರೀಯ ಟಿ20 ಪಂದ್ಯವಾಡುವ ಸುವರ್ಣ ಅವಕಾಶವನ್ನು ತಮ್ಮದಾಗಿಸಿಕೊಂಡರು.
ಸಮರ್ಥನಂ ಸಂಸ್ಥೆ ಹಾಗೂ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (CABI) ಸಹಯೋಗದಲ್ಲಿ ಭಾರತ ಮತ್ತು ನೇಪಾಳ ಅಂಧ ಮಹಿಳಾ ತಂಡಗಳ ನಡುವೆ ದ್ವಿಪಕ್ಷೀಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಸರಣಿ ಆಯೋಜಿಸಲಾಗಿದೆ. ಈ ಮಹತ್ವದ ಸರಣಿಯು ಡಿಸೆಂಬರ್ 2 ರಿಂದ 8 ರವರೆಗೆ ಹರಿಯಾಣದ ಗುರುಗ್ರಾಮದಲ್ಲಿರುವ ದಿ ಬಾಲ್ ಪಾರ್ಕ್ (The BallPark) ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಈ ಪ್ರತಿಷ್ಠಿತ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಕರ್ನಾಟಕದಿಂದ ಒಟ್ಟು ನಾಲ್ವರು ಆಟಗಾರ್ತಿಯರು ಆಯ್ಕೆಯಾಗಿರುವುದು ರಾಜ್ಯದ ಕ್ರೀಡಾಭಿಮಾನಿಗಳಿಗೆ ಡಬಲ್ ಖುಷಿ ನೀಡಿದೆ. ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿ ದೀಪಿಕಾ ಟಿ.ಸಿ. ಅನುಭವಿ ಆಟಗಾರ್ತಿ ಸುನಿತಾ ಧೋಂಡವ್ವನವರ್ ಹಾಗೂ ಮುಂಡಗೋಡಿನ ರಂಜಿತಾ ಹಾವೇರಿ ಸೇರಿದಂತೆ ಕರ್ನಾಟಕದ ನಾಲ್ವರು ಪ್ರತಿಭೆಗಳು ಭಾರತದ ಗೆಲುವಿಗಾಗಿ ಶ್ರಮಿಸಲಿದ್ದಾರೆ. ಈ ಸರಣಿಯ ಹಿನ್ನೆಲೆಯಲ್ಲಿ ಭಾರತೀಯ ತಂಡಕ್ಕೆ ನವೆಂಬರ್ 16 ರಿಂದಲೇ ವಿಶೇಷ ಪೂರ್ವ ಸಿದ್ಧತಾ ತರಬೇತಿ ಶಿಬಿರವನ್ನು ಆರಂಭಿಸಲಾಗಿದ್ದು, ರಂಜಿತಾ ಹಾವೇರಿ ಈಗಾಗಲೇ ತರಬೇತಿ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ತಮ್ಮ ಶಾಲೆಯ ವಿದ್ಯಾರ್ಥಿನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದು ಮುಂಡಗೋಡಿನ ಜ್ಞಾನ ಪ್ರಜ್ಞಾ ಅಂಧ ಮಕ್ಕಳ ಶಾಲೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದೆ. ರಂಜಿತಾ ಹಾವೇರಿ ಅವರ ಈ ಐತಿಹಾಸಿಕ ಸಾಧನೆಗೆ ಶಾಲೆಯ ಅಧ್ಯಕ್ಷರಾದ ಶಂಕರ್ ವಿ. ಆಲದಕಟ್ಟಿ ಅವರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ಅಂಧ ಮಕ್ಕಳಿಗೂ ಸರಿಯಾದ ಅವಕಾಶ ಮತ್ತು ಮಾರ್ಗದರ್ಶನ ಸಿಕ್ಕರೆ ವಿಶ್ವಮಟ್ಟದಲ್ಲಿ ಮಿಂಚಬಲ್ಲರು ಎಂಬುದನ್ನು ರಂಜಿತಾ ನಿರೂಪಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸರಣಿಯಲ್ಲಿ ರಂಜಿತಾ ಹಾಗೂ ಭಾರತ ತಂಡ ಭರ್ಜರಿ ಜಯ ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.