* ಇಂಗ್ಲೆಂಡ್ ಎದುರು ಮಾರಕ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್
* ಇಂಗ್ಲೆಂಡ್ ಎದುರು ಮೊದಲ ಮೂರು ದಿನ ಭಾರತ ಮೇಲುಗೈ ಸಾಧಿಸಿದೆ ಎಂದ ಹೈದರಾಬಾದ್ ವೇಗಿ
* ರವೀಂದ್ರ ಜಡೇಜಾ-ರಿಷಭ್ ಪಂತ್ ಜತೆಯಾಟವನ್ನು ಕೊಂಡಾಡಿದ ಸಿರಾಜ್
ಬರ್ಮಿಂಗ್‌ಹ್ಯಾಮ್(ಜು.04): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಮೊದಲ ಮೂರು ದಿನವೂ ಟೀಂ ಇಂಡಿಯಾ ಪ್ರಾಬಲ್ಯ ಮೆರೆದಿದೆ ಎಂದು ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅಭಿಪ್ರಾಯಪಟ್ಟಿದ್ದಾರೆ. ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದುಕೊಂಡು 125 ರನ್ ಬಾರಿಸಿದ್ದು, ಒಟ್ಟಾರೆ 257 ರನ್‌ಗಳ ಮುನ್ನಡೆ ಸಾಧಿಸಿದೆ. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅಜೇಯ 50 ರನ್ ಹಾಗೂ ಮೊದಲ ಇನಿಂಗ್ಸ್‌ನಲ್ಲಿ ಸ್ಪೋಟಕ ಶತಕ ಸಿಡಿಸಿದ್ದ ರಿಷಭ್ ಪಂತ್ 30 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮೂರನೇ ದಿನದಾಟ ಮುಕ್ತಾಯದ ಬಳಿಕ ಮಾತನಾಡಿದ ಮೊಹಮ್ಮದ್ ಸಿರಾಜ್ (Mohammed Siraj), ನಾವು ಮೊದಲ ಮೂರು ದಿನವೂ ಆತಿಥೇಯ ಇಂಗ್ಲೆಂಡ್ ಎದುರು ಪ್ರಾಬಲ್ಯ ಮರೆದಿದ್ದೇವೆ. ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ನಡುವಿನ ಜತೆಯಾಟವು ಅದ್ಭುತವಾಗಿತ್ತು. ಈ ಜತೆಯಾಟದಿಂದಲೇ ನಾವು ಈ ಟೆಸ್ಟ್ ಪಂದ್ಯದಲ್ಲಿ ಉತ್ತಮ ಹಂತದಲ್ಲಿದ್ದೇವೆ ಎಂದು ವೇಗಿ ಸಿರಾಜ್ ಹೇಳಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಒಂದು ಹಂತದಲ್ಲಿ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಆರನೇ ವಿಕೆಟ್‌ಗೆ ಜತೆಯಾಟದ ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ಜೋಡಿ ದಾಖಲೆಯ 222 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರಿಷಭ್ ಪಂತ್ (Rishabh Pant) 146 ರನ್ ಬಾರಿಸಿದರೇ, ರವೀಂದ್ರ ಜಡೇಜಾ 104 ರನ್ ಬಾರಿಸಿ ಮಿಂಚಿದರು. ಇನ್ನು ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು ನಾನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಜಾನಿ ಬೇರ್‌ಸ್ಟೋವ್ ಶತಕದ ಹೊರತಾಗಿಯೂ ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಸಾಧಿಸಿದ ಭಾರತ ಕ್ರಿಕೆಟ್ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 125 ರನ್ ಬಾರಿಸಿದ್ದು, ಒಟ್ಟಾರೆ 257 ರನ್‌ಗಳ ಮುನ್ನಡೆ ಸಾಧಿಸಿದೆ.
ಇನ್ನು ತಮ್ಮ ವೈಯುಕ್ತಿಕ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿರುವ ಮೊಹಮ್ಮದ್ ಸಿರಾಜ್, ರೆಡ್ ಬಾಲ್ ಕ್ರಿಕೆಟ್ ಸರಣಿಯಲ್ಲಿ ಮಾರಕ ಔಟ್‌ಸ್ವಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬು ಮಾಡುತ್ತಿದ್ದ ರೀತಿ ಈಗ ಮಾಯವಾಗಿರುವ ಬಗ್ಗೆಯು ತುಟಿಬಿಚ್ಚಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ (IPL 2022) ಬಳಿಕ ನಾನು ಔಟ್‌ಸ್ವಿಂಗ್ ಮಾಡುವುದನ್ನೇ ಮರೆತು ಹೋಗಿದ್ದೇನೆ. ಹೀಗಾಗಿ ಸ್ವಿಂಗ್ ಬೌಲಿಂಗ್ ಮಾಡಲು ನಾನು ಸಾಕಷ್ಟು ಪರಿಶ್ರಮ ಪಡುತ್ತಿದ್ದೇನೆ. ನಾನು ಔಟ್‌ಸ್ವಿಂಗ್ ಬೌಲಿಂಗ್ ಮಾಡಿದ್ದರೇ ಸಾಕಷ್ಟು ಚೆನ್ನಾಗಿ ಇರುತ್ತಿತ್ತು. ಆದರೆ ಔಟ್‌ಸ್ವಿಂಗ್‌ನಿಂದ ನನಗೆ ಹೆಚ್ಚು ವಿಕೆಟ್ ಸಿಗುತ್ತಿಲ್ಲ. ಹೀಗಾಗಿ ನಾನು ಇನ್‌ಸ್ವಿಂಗ್ ಬೌಲಿಂಗ್‌ನತ್ತ ಗಮನ ಹರಿಸುತ್ತಿದ್ದೇನೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
'ಪೂಜಾರ ರೀತಿ ಆಡುತ್ತಿದ್ದ ಬೇರ್‌ಸ್ಟೋವ್‌ರನ್ನು, ಕೊಹ್ಲಿ ಪಂತ್‌ರನ್ನಾಗಿ ಮಾಡಿದ್ರು..!'
ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರ ದಿಟ್ಟ ಹೋರಾಟದ ಬಗ್ಗೆಯೂ ಮೊಹಮ್ಮದ್ ಸಿರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಎದುರಿನ ಎರಡನೇ ಇನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 139 ಎಸೆತಗಳನ್ನು ಎದುರಿಸಿ ಅಜೇಯ 50 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಚೇತೇಶ್ವರ್ ಪೂಜಾರ ಅವರೊಬ್ಬ ಅತ್ಯುತ್ತಮ ಹೋರಾಟಗಾರ. ಅದರಲ್ಲೂ ವಿದೇಶಿ ನೆಲದಲ್ಲಿ ಭಾರತ ಟೆಸ್ಟ್ ಪಂದ್ಯಗಳನ್ನು ಗೆಲ್ಲುವಲ್ಲಿ ಪೂಜಾರ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಸಿರಾಜ್ ಹೇಳಿದ್ದಾರೆ.
ಇಂಗ್ಲೆಂಡ್ ಎದುರಿನ ಮೊದಲ ಇನಿಂಗ್ಸ್‌ನಲ್ಲಿ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಕೇವಲ 66 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವಲ್ಲಿ ಸಿರಾಜ್ ಮಹತ್ತರ ಪಾತ್ರವಹಿಸಿದ್ದರು. ಅದರಲ್ಲೂ ಜೂ ರೂಟ್ ವಿಕೆಟ್ ಕಬಳಿಸಿದ್ದು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿಯುವಂತೆ ಮಾಡಿತ್ತು.