
ನವದೆಹಲಿ(ಜು.04): ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬರುವ ಮಹಿಳಾ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಮತ್ತೊಮ್ಮೆ ಮೆಲ್ಬೊರ್ನ್ ರೆನೆಗೇಡ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಮೆಲ್ಬೊರ್ನ್ ರೆನೆಗೇಡ್ಸ್ ತಂಡದೊಂದಿಗೆ ಆಡಲು ಕ್ಲಬ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ರೆನೆಗೇಡ್ಸ್ ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಖಚಿತಪಡಿಸಿದೆ.
ಕಳೆದ ಆವೃತ್ತಿಯ ಮಹಿಳಾ ಬಿಗ್‌ಬ್ಯಾಶ್ ಲೀಗ್ (Women's Big Bash League) ಟೂರ್ನಿಯಲ್ಲಿ ಮೆಲ್ಬೊರ್ನ್ ರೆನೆಗೇಡ್ಸ್ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿಯುತ್ತಿದ್ದ ಹರ್ಮನ್‌ಪ್ರೀತ್ ಕೌರ್, ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಮೆಲ್ಬೊರ್ನ್ ರೆನೆಗೇಡ್ಸ್ ತಂಡದ ಪರ ಹರ್ಮನ್‌ಪ್ರೀತ್ ಕೌರ್, 130.96ರ ಸ್ಟ್ರೈಕ್‌ರೇಟ್‌ನಲ್ಲಿ 3 ಅರ್ಧಶತಕ ಸಹಿತ 406 ರನ್ ಚಚ್ಚಿದ್ದರು. ಇದಷ್ಟೇ ಅಲ್ಲದೇ ಆಫ್‌ಸ್ಪಿನ್ ಬೌಲಿಂಗ್ ಮಾಡುವ ಹರ್ಮನ್‌ಪ್ರೀತ್ ಕೌರ್ (Harmanpreet Kaur) 15 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಹರ್ಮನ್‌ಪ್ರೀತ್ ಕೌರ್ ಅವರ ಅಮೋಘ ಪ್ರದರ್ಶನದಿಂದಾಗಿ ಮೆಲ್ಬೊರ್ನ್ ರೆನೆಗೇಡ್ಸ್ ತಂಡವು ಫೈನಲ್‌ಗೇರುವಲ್ಲಿ ಯಶಸ್ವಿಯಾಗಿತ್ತು.
ಇನ್ನು ಮತ್ತೊಮ್ಮೆ ಮೆಲ್ಬೊರ್ನ್ ರೆನೆಗೇಡ್ಸ್ (Melbourne Renegades) ತಂಡದೊಂದಿಗೆ ಮತ್ತೊಮ್ಮೆ ಒಪ್ಪಂದಕ್ಕೆ ಸಹಿಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರ್ಮನ್‌ಪ್ರೀತ್ ಕೌರ್, ನಾನು ಮತ್ತೊಮ್ಮೆ ಮೆಲ್ಬೊರ್ನ್ ರೆನೆಗೇಡ್ಸ್ ತಂಡಕ್ಕೆ ಸೇರ್ಪಡೆಗೊಂಡಿರುವುದಕ್ಕೆ ಸಂತೋಷವಾಗುತ್ತಿದೆ. ನಾನು ಮೆಲ್ಬೊರ್ನ್ ತಂಡ ಕೂಡಿಕೊಳ್ಳಲು ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದಾರೆಂದು ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಈ ತಂಡದೊಟ್ಟಿಗೆ ಕ್ರಿಕೆಟ್‌ನ್ನು ನಾನು ಎಂಜಾಯ್ ಮಾಡಿದ್ದೇನೆ. ಈ ತಂಡದಲ್ಲಿನ ವಾತಾವರಣವು ನನ್ನಿಂದ ಉತ್ತಮವಾದ ಆಟ ಹೊರಹೊಮ್ಮಲು ಸಾಧ್ಯವಾಯಿತು. ಈ ತಂಡದಲ್ಲಿ ನಾನು ಸ್ವತಂತ್ರವಾಗಿ ನನ್ನ ಪಾತ್ರವನ್ನು ನಾನು ನಿಭಾಯಿಸುತ್ತಿದ್ದೇನೆ. ಇದೀಗ ಮತ್ತೊಮ್ಮೆ ಮೆಲ್ಬೊರ್ನ್ ರೆನೆಗೇಡ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹರ್ಮನ್‌ಪ್ರೀತ್ ಕೌರ್ ತಿಳಿಸಿದ್ದಾರೆ.
'ಪೂಜಾರ ರೀತಿ ಆಡುತ್ತಿದ್ದ ಬೇರ್‌ಸ್ಟೋವ್‌ರನ್ನು, ಕೊಹ್ಲಿ ಪಂತ್‌ರನ್ನಾಗಿ ಮಾಡಿದ್ರು..!'
ಕಳೆದ ವರ್ಷ ನಾವು ನಮ್ಮ ತಂಡದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವ ಮೂಲಕ ಒಂದು ತಂಡವಾಗಿ ಉತ್ತಮ ಫಲಿತಾಂಶ ಹೊರಬರಲು ಸಾಧ್ಯವಾಯಿತು. ಹೀಗಿದ್ದೂ ನಾವು ಮತ್ತಷ್ಟು ವಿಭಾಗಗಳಲ್ಲಿ ನಮ್ಮ ಆಟವನ್ನು ಸುಧಾರಿಸಿಕೊಳ್ಳಬೇಕಿದೆ. ಈ ಬಾರಿ ನಮ್ಮೆಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ವಿಶ್ವಾಸವಿದೆ. ಈ ಮೂಲಕ ಮತ್ತೊಮ್ಮೆ ಫೈನಲ್ ಪ್ರವೇಶಿಸಿ ಪ್ರಶಸ್ತಿಗೆ ಮುತ್ತಿಕ್ಕಲಿದ್ದೇವೆ ಎಂದು ಹರ್ಮನ್‌ಪ್ರೀತ್ ಕೌರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರ್ಮನ್‌ಪ್ರೀತ್ ಕೌರ್, ಕಳೆದ ವರ್ಷ ಮೆಲ್ಬೊರ್ನ್ ರೆನೆಗೇಡ್ಸ್ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯುವ ಮೂಲಕ ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಮತ್ತೊಮ್ಮೆ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಹರ್ಮನ್‌ಪ್ರೀತ್ ಕೌರ್ ಜಗತ್ತಿನ ಅತ್ಯುತ್ತಮ ಆಟಗಾರ್ತಿಯಾಗಿದ್ದಾರೆ, ಅವರ ದಾಖಲೆಯೇ ಅವರು ಎಂತಹ ಆಟಗಾರ್ತಿ ಎನ್ನುವುದನ್ನು ತೋರಿಸುತ್ತದೆ ಎಂದು ಮೆಲ್ಬೊರ್ನ್ ರೆನೆಗೇಡ್ಸ್ ತಂಡದ ಜನರಲ್ ಮ್ಯಾನೇಜರ್ ಜೇಮ್ಸ್ ರೋಸೆನ್‌ಗಾರ್ಟನ್ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.