ಬೆಂಗಳೂರು ಟೆಸ್ಟ್‌ನಲ್ಲಿ ಕಿವೀಸ್‌ಗೆ ಬೃಹತ್ ಮುನ್ನಡೆ; ಟೀಂ ಇಂಡಿಯಾಗೆ ವಿಲನ್ ಆದ ಬೆಂಗಳೂರು ಹುಡುಗ!

By Naveen KodaseFirst Published Oct 18, 2024, 1:21 PM IST
Highlights

ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲೇ ಬೃಹತ್ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ

ಬೆಂಗಳೂರು: ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾಗೆ, ಬೆಂಗಳೂರು ಮೂಲದ ನ್ಯೂಜಿಲೆಂಡ್ ಕ್ರಿಕೆಟರ್ ರಚಿನ್ ರವೀಂದ್ರ ವಿಲನ್ ಆಗಿ ಕಾಡಿದ್ದಾರೆ. ರಚಿನ್ ರವೀಂದ್ರ ಬಾರಿಸಿದ ಆಕರ್ಷಕ ಶತಕ(134)ದ ನೆರವಿನಿಂದ ನ್ಯೂಜಿಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 402 ರನ್‌ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಟಾಮ್ ಲೇಥಮ್ ನೇತೃತ್ವದ ನ್ಯೂಜಿಲೆಂಡ್ ತಂಡವು 356 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ.

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ ತಂಡವು 3 ವಿಕೆಟ್ ಕಳೆದುಕೊಂಡು 180 ರನ್ ಬಾರಿಸಿತ್ತು. ಈ ಮೂಲಕ 134 ರನ್‌ಗಳ ಮುನ್ನಡೆ ಗಳಿಸಿತ್ತು. ಇನ್ನು ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಆರಂಭದಲ್ಲೇ ಮಾರಕ ದಾಳಿ ನಡೆಸುವ ಮೂಲಕ ಡೇರಲ್ ಮಿಚೆಲ್(18), ಟಾಮ್ ಬ್ಲಂಡೆಲ್(5), ಗ್ಲೆನ್ ಫಿಲಿಫ್ಸ್(14) ಹಾಗೂ ಮ್ಯಾಟ್ ಹೆನ್ರಿ(8) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ ಕಿವೀಸ್ ತಂಡವು 233 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು.

Latest Videos

ಟೀಂ ಇಂಡಿಯಾ ಕಾಡಿದ ರಚಿನ್-ಸೌಥಿ: ಈ ವೇಳೆ 8 ವಿಕೆಟ್‌ಗೆ ಜತೆಯಾದ ರಚಿನ್ ರವೀಂದ್ರ ಹಾಗೂ ಟಿಮ್ ಸೌಥಿ ಶತಕದ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.  ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಕೇವಲ 132 ಎಸೆತಗಳನ್ನು ಎದುರಿಸಿ 137 ರನ್‌ಗಳ ಜತೆಯಾಟವಾಡಿದರು. ಈ ಮೂಲಕ ತಂಡದ ಮೊತ್ತವನ್ನು 370ರ ಗಡಿ ದಾಟಿಸಿದರು. ಸೌಥಿ 73 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 65 ರನ್ ಸಿಡಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಬೆಂಗಳೂರು ಮೂಲದ ಕಿವೀಸ್ ಎಡಗೈ ಬ್ಯಾಟರ್ ರಚಿನ್ ರವೀಂದ್ರ, ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ರವೀಂದ್ರ 157 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 134 ರನ್ ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ರಚಿನ್ ವಿಕೆಟ್ ಒಪ್ಪಿಸುವ ಮುನ್ನ ತಂಡದ ಮೊತ್ತವನ್ನು 400ರ ಗಡಿ ಡಾಟಿಸುವ ಮೂಲಕ ಟೀಂ ಇಂಡಿಯಾ ಪಾಲಿಗೆ ವಿಲನ್ ಆಗಿ ಕಾಡಿದರು.
 

click me!