ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಐಸಿಸಿ ಸಭೆ ಸೇರಿದೆ. ಇದೀಗ ಬಿಸಿಸಿಐ ಈ ಸಭೆಯತ್ತ ಚಿತ್ತ ಹರಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ ತಾತ್ಕಾಲಿಕ ಐಪಿಎಲ್ ವೇಳಾಪಟ್ಟಿಯನ್ನು ರೆಡಿ ಮಾಡಿದೆ. 45 ದಿನದ ವೇಳಾಪಟ್ಟಿ 8 ಫ್ರಾಂಚೈಸಿಗಳು ಸಮ್ಮತಿ ನೀಡಿದೆ. ಆದರೆ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಮುಂಬೈ(ಜು.20): ಕೊರೋನಾ ವೈರಸ್ ಕಾರಣ ಇದೀಗ 2 ಪ್ರಮುಖ ಟೂರ್ನಿಗಳಾದ ಐಸಿಸಿ ಟಿ20 ವಿಶ್ವಕಪ್ ಹಾಗೂ ಐಪಿಎಲ್ 2020 ಆಯೋಜನೆ ಕಂಗ್ಗಾಟಾಗಿ ಪರಿಣಮಿಸಿದೆ. ಟಿ20 ವಿಶ್ವಕಪ್ ಆಯೋಜನೆ ಕುರಿತು ಐಸಿಸಿ ಸಭೆ ಸೇರಿದೆ. ಇದರ ಬೆನ್ನಲ್ಲೇ ಬಿಸಿಸಿಐ ಐಪಿಎಲ್ ಟೂರ್ನಿ ಆಯೋಜನೆಗೆ ವೇಳಾಪಟ್ಟಿ ಸಿದ್ದಪಡಿಸಿದೆ. ಸೆಪ್ಟೆಂಬರ್ 26 ರಿಂದ ನವೆಂಬರ್ 8ರ ವರೆಗೆ ಐಪಿಎಲ್ 2020 ಟೂರ್ನಿ ಆಯೋಜಿಸಲು ಬಿಸಿಸಿಐ ತಾತ್ಕಾಲಿಕ ವೇಳಾಪಟ್ಟಿ ರೆಡಿ ಮಾಡಿದೆ.
ದುಬೈನಲ್ಲೇ ಐಪಿಎಲ್ ಫಿಕ್ಸ್: ಸಕಲ ಸಿದ್ಧತೆಗಳು ಆರಂಭ..!.
ಟಿ20 ವಿಶ್ವಕಪ್ ಆಯೋಜನೆ ರದ್ದಾದರೆ ಮಾತ್ರ ಐಪಿಎಲ್ ಟೂರ್ನಿ ಆಯೋಜನೆಗೆ ಅವಕಾಶ ಸಿಗಲಿದೆ. ವಿಶ್ವಕಪ್ ಆತಿಥ್ಯ ಆಸ್ಟ್ರೇಲಿಯಾ ಸದ್ಯಕ್ಕೆ ಟಿ20 ವಿಶ್ವಕಪ್ ಆಯೋಜನೆ ಸಾಧ್ಯವಿಲ್ಲ ಎಂದಿರುವ ಕಾರಣದಿಂದ ರದ್ದಾಗುವ ಸಾಧ್ಯತೆ ಹೆಚ್ಚು. ಇದೇ ಕಾರಣದಿಂದ ಬಿಸಿಸಿಐ ಕೂಡ ಅತೀ ಉತ್ಸಾಹದಿಂದ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿದೆ.
ಬಿಸಿಸಿಐ ರೆಡಿ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ 44 ದಿನದಲ್ಲಿ 60 ಪಂದ್ಯಗಳನ್ನು ಆಡಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 26 ರಿಂದ ನವೆಂಬರ್ 8ರ ವರೆಗೆ ಪಂದ್ಯ ನಡೆಯಲಿದೆ. ಆದರೆ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಇದಕ್ಕೆ ಮುಖ್ಯ ಕಾರಣ ಜಾಹೀರಾತು ಆದಾಯ. ನವೆಂಬರ್ 14 ರಿಂದ ದೀಪಾವಳಿ ಹಬ್ಬ ಆರಂಭಗೊಳ್ಳಲಿದೆ. ಹೀಗಾಗಿ ಬಿಸಿಸಿಐ ಐಪಿಎಲ್ ಪಂದ್ಯವನ್ನು ದೀಪಾವಳಿ ವರೆಗೆ ಹಬ್ಬದ ದಿನದವರೆಗೆ ಇರುವಂತೆ ವೇಳಾಪಟ್ಟಿ ಸಿದ್ದಪಡಿಸಲು ಮನವಿ ಮಾಡಿದೆ.
ದೀಪಾವಳಿ ಹಬ್ಬದ ವೇಳೆ ಜಾಹೀರಾತುಗಳಿಗೆ ಭಾರಿ ಬೇಡಿಕೆ ಇರುವುದರಿಂದ ನಷ್ಟ ಸರಿದೂಗಿಸಬಹುದು ಎಂಬುದು ಸ್ಟಾರ್ ಸ್ಪೋರ್ಟ್ಸ್ ಲೆಕ್ಕಾಚಾರ. ಇದಕ್ಕಾಗಿ ಬಿಸಿಸಿಐ ತಾತ್ಕಾಲಿಕ ವೇಳಾಪಟ್ಟಿಗೆ ಸ್ಟಾರ್ ಅಸಮಾಧಾನ ಹೊರಹಾಕಿದೆ. ಇತ್ತ ಬಿಸಿಸಿಐಗೆ ಐಪಿಎಲ್ ಟೂರ್ನಿಯನ್ನು ನವೆಂಬರ್ 8ರೊಳಗೆ ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಕಾರಣ ಡಿಸೆಂಬರ್ 3 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
ಆಸೀಸ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ನಿಯಮದ ಪ್ರಕಾರ 14 ದಿನ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಆದರೆ ಈ ಅವದಿಯನ್ನು ಕಡಿತಗೊಳಿಸಲು ಬಿಸಿಸಿಐ ಮನವಿ ಮಾಡಿದೆ. ಐಪಿಎಲ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗರು ಆಸಿಸ್ ಪ್ರವಾಸ, ಕ್ವಾರಂಟೈನ್ ಹಾಗೂ ಟೆಸ್ಟ್ ಸರಣಿಗೆ ತಯಾರಿ ನಡೆಸಬೇಕಿದೆ. ಹೀಗಾಗಿ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ. ಈ ಕಾರಣಗಳಿಂದ ಬಿಸಿಸಿಐ ನವೆಂಬರ್ 8ರೊಳಗೆ ಐಪಿಎಲ್ ಟೂರ್ನಿ ಮುಗಿಸಲು ತಾತ್ಕಾಲಿಕ ವೇಳಾಪಟ್ಟಿ ರೆಡಿ ಮಾಡಿದೆ.