
BCCI Selection Panel Shake Up ಭಾರತ ಕಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಭಾರತದ ಮಾಜಿ ವೇಗಿ, ಕರ್ನಾಟಕದ ದೊಡ್ಡ ಗಣೇಶ್ ನೇಮಕಗೊಳ್ಳುವುದು ಬಹುತೇಕ ಖಚಿತ ಎನಿಸಿದೆ. ಸದ್ಯದಲ್ಲೇ ಬಿಸಿಸಿಐ ಅಧಿಕೃತ ಘೋಷಣೆ ಮಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಗಣೇಶ್ ಭಾರತ ಪರ 4 ಟೆಸ್ಟ್, 1 ಏಕದಿನ ಪಂದ್ಯವನ್ನಾಡಿದ್ದಾರೆ. ಕರ್ನಾಟಕ ಪರ ಹಲವು ವರ್ಷಗಳ ಕಾಲ ಆಡಿದ್ದ ಗಣೇಶ್, ರಾಜ್ಯ ತಂಡದ ಆಯ್ಕೆಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಸಹ ಹೊಂದಿದ್ದಾರೆ.
ಇದೇ ವೇಳೆ ಹಿರಿಯರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಅಜಿತ್ ಅಗರ್ಕರ್ರ ಅವಧಿ ಮುಕ್ತಾಯಗೊಂಡ ಬಳಿಕ ತೆರವುಗೊಂಡಿರುವ ಸ್ಥಾನಕ್ಕೆ ಭಾರತದ ಮಾಜಿ ಸ್ಪಿನ್ನರ್, ಮುಂಬೈನ ರಮೇಶ್ ಪೊವಾರ್ರನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಪೊವಾರ್, ವಾಸಿಂ ಜಾಫರ್, ಸಲೀಂ ಅಂಕೋಲಾ, ಜೇಕಬ್ ಮಾರ್ಟಿನ್ ಹಾಗೂ ಕಾನರ್ ವಿಲಿಯಮ್ಸ್ರನ್ನು ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಿತ್ತು. ಆದರೆ ಅಂತಿಮವಾಗಿ ಪೊವಾರ್ರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಅಯ್ಕೆ ಸಮಿತಿಯ ಮುಖ್ಯಸ್ಥರಾಗಿ ಪ್ರಜ್ಞಾನ್ ಓಝಾ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು: ಈ ಋತುವಿನ ರಣಜಿ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಎದುರಾಗಲಿದೆ. ಭಾನುವಾರದಿಂದ ನಗರದ ಹೊರವಲಯದ ಆಲೂರು ಕೆಎಸ್ಸಿಎ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಆಂಧ್ರ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟು ಡ್ರಾಗೆ ತೃಪ್ತಿಪಟ್ಟಿದ್ದ ಕರ್ನಾಟಕ, ಕೇವಲ 1 ಅಂಕ ಗಳಿಸಿತ್ತು. ಈ ಪಂದ್ಯದಲ್ಲಿ ಜಯಿಸಿ, ಈ ಋತುವಿನಲ್ಲಿ ಮೊದಲ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಸೌರಾಷ್ಟ್ರ ವಿರುದ್ಧ ಕರ್ನಾಟಕದ ದಾಖಲೆ ಕಳಪೆಯಾಗಿದೆ. ಉಭಯ ತಂಡಗಳು ರಣಜಿಯಲ್ಲಿ 2007ರಿಂದ 2025ರ ವರೆಗೆ 12 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ರಾಜ್ಯ ತಂಡ ಗೆದ್ದಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ. 5 ಪಂದ್ಯ ಡ್ರಾಗೊಂಡಿದ್ದರೆ, ಸೌರಾಷ್ಟ್ರ 6ರಲ್ಲಿ ಜಯಗಳಿಸಿದೆ. 2009ರಲ್ಲಿ ಗೆದ್ದಿದ್ದ ರಾಜ್ಯ ಬಳಿಕ ಈಗ 17 ವರ್ಷಗಳ ಬಳಿಕ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ದೇವದತ್ ಪಡಿಕ್ಕಲ್, ಆರ್.ಸ್ಮರಣ್ ಅನುಪಸ್ಥಿತಿಯಲ್ಲಿ ರಾಜ್ಯ ತಂಡವನ್ನು ಅನುಭವಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಮುನ್ನಡೆಸಲಿದ್ದಾರೆ. ಅನುಭವಿ ವೇಗಿಗಳಾದ ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್ಕುಮಾರ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ತಂಡದ ಬಲ ಹೆಚ್ಚಿಸಲಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಪ್ರಸಾರ: ಸ್ಟಾರ್ಸ್ಪೋರ್ಟ್ಸ್
ರಾಯ್ಪುರ: ಭಾರತ ಹಾಗೂ ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯ ಭಾನುವಾರ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದ ಸ್ಮೃತಿ ಮಂಧನಾ ಪಡೆ ಈಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ರಾಯ್ಪುರದಲ್ಲೇ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ಬೌಲಿಂಗ್ನಲ್ಲಿ ಎಂದಿನಂತೆ ಉತ್ತಮ ಪ್ರದರ್ಶನ ನೀಡಿತ್ತು. ಪ್ರವಾಸಿ ತಂಡವನ್ನು 114 ರನ್ಗೆ ನಿಯಂತ್ರಿಸಿತ್ತು. ಆದರೆ ಬ್ಯಾಟಿಂಗ್ನಲ್ಲಿ ಎಡವಿದ್ದ ತಂಡ ಸೋಲಿನತ್ತ ಮುಖಮಾಡಿತ್ತು. ಕೇವಲ 19 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದರೂ, ಬಳಿಕ ದೀಪ್ತಿ ಶರ್ಮಾ-ನಿಕಿ ಪ್ರಸಾದ್ ಹೋರಾಟದಿಂದಾಗಿ ಗೆದ್ದಿತ್ತು. ಹೀಗಾಗಿ 2ನೇ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಪಡೆ ಮೇಲೆ ಒತ್ತಡವಿದೆ. ಸ್ಮೃತಿ, ಶಫಾಲಿ, ಹರ್ಮನ್ಪ್ರೀತ್, ಅನುಷ್ಕಾ ಶರ್ಮಾ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಾದ ಅಗತ್ಯವಿದೆ.
ಪಂದ್ಯ ಆರಂಭ: ಸಂಜೆ 7 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.