
ಬೆಂಗಳೂರು (ಅ.17) ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 5ನೇ ಹಾಗೂ ಕೊನೆಯ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸಂಜೆಯಿಂದಲೇ ಮಳೆ ಸುರಿಯುತ್ತಿದೆ. ಇಂದು ಕೂಡ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ತಡವಾಗಿ ಆರಂಭಗೊಂಡ ಪಂದ್ಯವನ್ನು 9 ಓವರ್ಗೆ ಸೀಮಿತಗೊಳಿಸಲಾಗಿತ್ತು. ಟೀಂ ಇಂಡಿಯಾ 118 ರನ್ ಸಿಡಿಸುತ್ತಿದ್ದಂತೆ ಮತ್ತೆ ಮಳೆ ವಕ್ಕರಿಸಿದ ಕಾರಣ ಪಂದ್ಯ ರದ್ದುಗೊಳಿಸಲಾಯಿತು.
ಸಂಜೆ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಬಿಡದೆ ಸುರಿದ ಮಳೆಯಿಂದ ಪಂದ್ಯ ಆರಂಭ ವಿಳಂಭವಾಗಿತ್ತು. ಮಳೆ ಬಿಡುವು ನೀಡಿದ ಬೆನ್ನಲ್ಲೇ ರಾತ್ರಿ 9.15ಕ್ಕೆ ಪಂದ್ಯ ಆರಂಭಗೊಂಡಿತ್ತು. ಆದರೆ ಪಂದ್ಯದ ಓವರ್ ಕಡಿತ ಮಾಡಲಾಗಿತ್ತು. 9 ಓವರ್ ಪಂದ್ಯ ಆಡಿಸಲಾಗಿತ್ತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮಳೆಗೆ ತಕ್ಕಂತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಮೊದಲು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ ಮೂಲಕ ಮಿಂಚಿತ್ತು. ಸಂಜು ಸ್ಯಾಮ್ಸನ್ 16, ಅಭಿಷೇಕ್ ಶರ್ಮಾ 6, ಇಶಾನ್ ಕಿಶನ್ 30, ನಾಯಕ ಶ್ರೇಯಸ್ ಅಯ್ಯರ್ 22 ರನ್ ತಿಲಕ್ ವರ್ಮಾ 7 ಹಾಗೂ ನಮನ್ ಧಿರ್ ಅಜೇಯ 24 ರನ್ ಸಿಡಿಸಿದ್ದರು. 7.4 ಓವರ್ಗಳಲ್ಲಿ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 118 ರನ್ ಸಿಡಿಸಿತ್ತು. ಈ ವೇಳೆ ಮತ್ತೆ ಮಳೆ ವಕ್ಕರಿಸಿತ್ತು. ಹೀಗಾಗಿ ಡಕ್ವರ್ಕ್ ನಿಯಮದ ಪ್ರಕಾರ ವೆಸ್ಟ್ ಇಂಡೀಸ್ ತಂಡಕ್ಕೆ 5 ಓವರ್ನಲ್ಲಿ 85 ರನ್ ಟಾರ್ಗೆಟ್ ನೀಡಲಾಗಿತ್ತು.
ಮತ್ತೆ ಮಳೆ ಆರಂಭಗೊಂಡು ಬಿಡದೆ ಸುರಿಯಲು ಆರಂಭಗೊಂಡಿತ್ತು. ಹೀಗಾಗಿ ಪಂದ್ಯ ರದ್ದುಗೊಳಿಸಲಾಯಿತು. 5 ಪಂದ್ಯಗಳ ಸರಣಿ 2-2 ಅಂತರದಲ್ಲಿ ಸಮಬಲಗೊಂಡಿದೆ. ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ಟ್ರೋಫಿ ಹಂಚಿಕೊಂಡಿತು. ಇತ್ತ ಭುವನೇಶ್ವರ್ ಕುಮಾರ್ ಕಮ್ಬ್ಯಾಕ್ ಪಂದ್ಯ ವೀಕ್ಷಿಸಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.