
ನವದೆಹಲಿ(ಫೆ.01): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಗೆ ಸತತ 3ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಎಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಯ್ ಶಾ ಅವರ ಅಧಿಕಾರ ಅವಧಿ ವಿಸ್ತರಣೆಯನ್ನು ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಪ್ರಸ್ತಾಪಿಸಿದ್ದು, ಅದನ್ನು ಎಲ್ಲಾ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದ್ದಾರೆ. ಅವರು ಇನ್ನೊಂದು ವರ್ಷ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಜಯ್ ಶಾ 2021ರ ಜನವರಿಯಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಆ ಬಳಿಕ ಸತತ 2ನೇ ಬಾರಿಯೂ ಅವಿರೋಧವಾಗಿ ಹುದ್ದೆಗೆ ಮರು ಆಯ್ಕೆಯಾಗಿದ್ದಾರೆ. ಶಾ ಅಧಿಕಾರಾವಧಿಯಲ್ಲಿ ಎಸಿಸಿ 2022 ಹಾಗೂ 2023ರಲ್ಲಿ ಏಷ್ಯಾ ಕಪ್ ಟೂರ್ನಿಗಳನ್ನು ಆಯೋಜಿಸಿತ್ತು. ಜಯ್ ಶಾ ಅವರು 2019ರಿಂದಲೂ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ಅಶ್ವಿನ್ ಅಗ್ರಸ್ಥಾನ ಭದ್ರ
ದುಬೈ: ಐಸಿಸಿ ಟೆಸ್ಟ್ ಬೌಲರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಮೂವರು ಬೌಲರ್‌ಗಳು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದು, ಆರ್.ಅಶ್ವಿನ್ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಶ್ವಿನ್ 853 ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇನ್ನು, ಜಸ್‌ಪ್ರೀತ್ ಬೂಮ್ರಾ ಒಂದು ಸ್ಥಾನ ಏರಿಕೆ ಕಂಡು 4ನೇ ಸ್ಥಾನಕ್ಕೇರಿದ್ದು, ರವೀಂದ್ರ ಜಡೇಜಾ 6ನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಅಗ್ರ ಹತ್ತರಲ್ಲಿ ಸ್ಥಾನ ಪಡೆದ ಏಕೈಕ ಭಾರತಿಯ ಎನಿಸಿಕೊಂಡಿದ್ದಾರೆ. ಸದ್ಯ ವಿರಾಟ್ 6ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಆರ್.ಅಶ್ವಿನ್ 2ನೇ ಸ್ಥಾನದಲ್ಲಿದ್ದು, ಅಕ್ಷರ್ ಪಟೇಲ್ 1 ಸ್ಥಾನ ಕುಸಿತ ಕಂಡು 6ನೇ ಸ್ಥಾನದಲ್ಲಿದ್ದಾರೆ.
ಮಯಾಂಕ್ ಆರೋಗ್ಯ ಸ್ಥಿರ: ಬೆಂಗಳೂರು ಆಸ್ಪತ್ರೆಗೆ ಶಿಫ್ಟ್
ಅರ್ಗತಾಲಾ: ವಿಮಾನದಲ್ಲಿ ನೀರು ಎಂದು ಭಾವಿಸಿ ದ್ರವ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್‌ವಾಲ್ ಆರೋಗ್ಯ ಚೇತರಿಸಿದೆ. ಸದ್ಯ ಅವರು ಬಹುತೇಕ ಗುಣಮುಖರಾಗಿದ್ದು, ಅರ್ಗತಾಲಾದ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ಕರೆತರಲಾಗಿದೆ.
ಮಂಗಳವಾರ ಮಧ್ಯಾಹ್ನ ಕರ್ನಾಟಕ ತಂಡ ತನ್ನ ಮುಂದಿನ ರಣಜಿ ಪಂದ್ಯವಾಡಲು ನವದೆಹಲಿ ಮಾರ್ಗವಾಗಿ ಸೂರತ್‌ಗೆ ತೆರಳುತ್ತಿತ್ತು. ಈ ವೇಳೆ ಇಂಡಿಗೋ ವಿಮಾನದಲ್ಲಿ ತಮ್ಮ ಆಸನದ ಮುಂದಿದ್ದ ದ್ರವ ಪದಾರ್ಥವನ್ನು ಮಯಾಂಕ್ ಸೇವಿಸಿದ್ದು, ತಕ್ಷಣ ಅವರಿಗೆ ಹೊಟ್ಟೆ ನೋವು, ಗಂಟಲು ಹಾಗೂ ಬಾಯಿ ಉರಿ ಶುರುವಾಗಿದೆ. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆ ತರಲಾಗಿದೆ. ಇನ್ನು, ಘಟನೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.