
ಮುಂಬೈ(ನ.18): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಹೀನಾಯ ಸೋಲಿಗೆ ಬಿಸಿಸಿಐ ಪೋಸ್ಟ್ ಮಾರ್ಟಮ್ ಆರಂಭಗೊಂಡಿದೆ. ಈ ಸೋಲಿಗೆ ಮೊದಲ ತಲೆದಂಡವಾಗಿದೆ. ಟೀಂ ಇಂಡಿಯಾ ಸೋಲಿಗೆ ಅಸಮರ್ಪಕ ಆಯ್ಕೆ ಕೂಡ ಕಾರಣ ಅನ್ನೋ ಆರೋಪ ಬಲವಾಗಿ ಕೇಳಿಬಂದಿತ್ತು. ಇಂದು ಮಹತ್ವದ ಸಭೆ ನಡೆಸಿದ ಬಿಸಿಸಿಐ, ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಸೇರಿದಂತೆ ಸಂಪೂರ್ಣ ಸಮಿತಿಯನ್ನೇ ವಜಾ ಮಾಡಿದೆ. ಇದೀಗ ಹೊಸ ಆಯ್ಕೆ ಸಮಿತಿ ರಚಿಸಲು ಅರ್ಜಿ ಅಹ್ವಾನಿಸಿದೆ.
ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತ್ತು. 2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸು ಮತ್ತೆ ನುಚ್ಚು ನೂರಾಗಿತ್ತು. ಇದರಿಂದ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಎಲ್ಲಾ ಆಟಗಾರರನ್ನು ಕಿತ್ತೆಸೆದು ಯುವ ಕ್ರಿಕೆಟಿಗರಿಗೆ ಮಣೆಹಾಕಲು ಅಭಿಮಾನಿಗಳು ಸೂಚಿಸಿದ್ದರು. ಇತ್ತ ಬಿಸಿಸಿಐ ಸೋಲಿಗೆ ಕಾರಣ ಹೇಳುವಂತೆ ನಾಯಕ, ಕೋಚ್, ಆಯ್ಕೆ ಸಮಿತಿಗೆ ಸೂಚಿಸಿತ್ತು. ಅಸಮರ್ಪಕ ಆಯ್ಕೆ ಕೂಡ ಸೋಲಿಗೆ ಪ್ರಮುಖ ಕಾರಣ ಅನ್ನೋ ಮಾತು ಕೇಳಿಬಂದಿತ್ತು. ಇದೀಗ ಸಭೆ ಸೇರಿದ ಬಿಸಿಸಿಐ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನೇ ವಜಾ ಮಾಡಿದೆ.
ಇದೀಗ ಹೊಸ ಆಯ್ಕೆ ಸಮಿತಿ ರಚಿಸಲು ಬಿಸಿಸಿಐ ಸೂಕ್ತರಿಂದ ಅರ್ಜಿ ಅಹ್ವಾನಿಸಿದೆ. ಇಷ್ಟೇ ಅಲ್ಲ ಅರ್ಹತೆಗಳೇನು ಅನ್ನೋದನ್ನೂ ಸೂಚಿಸಿದೆ. ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿಗೆ ಸದಸ್ಯ ಹಾಗೂ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಹಾಕುವ ಅಭ್ಯರ್ಥಿಗಳು ಕನಿಷ್ಠ 7 ಟೆಸ್ಟ್ ಪಂದ್ಯ ಅಥವಾ, 30 ಪ್ರಥಮ ದರ್ಜೆ ಕ್ರಿಕೆಟ್ ಅಥವಾ 10 ಏಕದಿನ ಹಾಗೂ 20 ಪ್ರಥಮ ದರ್ಜೆ ಪಂದ್ಯ ಆಡಿರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಅರ್ಜಿ ಹಾಕುವ ಅಭ್ಯರ್ಥಿಗಳ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಕನಿಷ್ಠ 5 ವರ್ಷಗಳಾಗಿರಬೇಕು. ಕ್ರಿಕೆಟ್‌ನ ಯಾವುದೇ ಕಮಿಟಿಯಲ್ಲಿ ಸ್ಥಾನ ಹೊಂದಿರಬಾರದು ಎಂದು ಬಿಸಿಸಿಐ ಹೇಳಿದೆ. ಇನ್ನು 60 ವರ್ಷ ಮೀರಿರಬಾರದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.