RCB ಒಂದು ಕಪ್‌ ಗೆದ್ದರೇ, ಆಮೇಲೆ ಚುರುಕಾಗಿ ಮೂರ್ನಾಲ್ಕು ಟ್ರೋಫಿ ಗೆಲ್ಲಲಿದೆ: ಎಬಿ ಡಿವಿಲಿಯರ್ಸ್ ವಿಶ್ವಾಸ

By Naveen KodaseFirst Published Nov 18, 2022, 4:18 PM IST
Highlights

ಆರ್‌ಸಿಬಿ ಮುಂಬರುವ ದಿನಗಳಲ್ಲಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಎಬಿಡಿ
ಕಳೆದ 14 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ
ಮೂರು ಬಾರಿ ಫೈನಲ್‌ನಲ್ಲಿ ಮುಗ್ಗರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬೆಂಗಳೂರು(ನ.18): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಮ್ಮೆ ಪ್ರಶಸ್ತಿ ಬರ ನೀಗಿಸಿಕೊಂಡರೇ, ಆ ಬಳಿಕ ಚುರುಕಾಗಿಯೇ ಮೂರ್ನಾಲ್ಕು ಟ್ರೋಫಿ ಗೆಲ್ಲುವ ಸಾಮರ್ಥ್ಯ ಆರ್‌ಸಿಬಿ ತಂಡಕ್ಕಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಗೂ ಆರ್‌ಸಿಬಿ ತಂಡದ ಆಪತ್ಬಾಂದವ ಎನಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್‌ ಅಭಿಪ್ರಾಯಪಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆಯಾದರೂ, ಕಪ್‌ ಗೆಲ್ಲಲು ಇನ್ನೂ ಸಾಧ್ಯವಾಗಿಲ್ಲ. 

ಇನ್ನು 2022ರ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಿನಿ ಹರಾಜಿಗೂ ಮುನ್ನ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು ತಂಡ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇನ್ನೂ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಾಗಲೇ ಎಬಿ ಡಿವಿಲಿಯರ್ಸ್‌, ಆರ್‌ಸಿಬಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

It is no secret who will be cheering for this year! fans, are you ready to chant Ee Sala Cup Namde with him?🤩 pic.twitter.com/sf5fCYJmju

— Star Sports (@StarSportsIndia)

ಸ್ಟಾರ್ ಸ್ಪೋರ್ಟ್ಸ್‌ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಇನ್ನು ಎಷ್ಟು ಆವೃತ್ತಿಗಳು ಮುಗಿದಿರಬಹುದು ಹೇಳಿ?, ಹದಿನಾಲ್ಕೊ, ಹದಿನೈದೋ ಅಥವಾ ಎಷ್ಟೋ ಆಗಿರಬಹುದು. ಆದರೆ ಅವರು ಈ ಸಂಕೋಲೆಯಿಂದ ಹೊರಬರಲು ಇಷ್ಟಪಡುತ್ತಿದ್ದಾರೆ. ಒಂದು ವೇಳೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಒಂದು ಕಪ್ ಗೆದ್ದರೇ, ಇದಾದ ಬಳಿಕ ಎರಡು, ಮೂರು, ನಾಲ್ಕು ಟ್ರೋಫಿಗಳನ್ನು ಚುರುಕಾಗಿ ಗೆಲ್ಲಲಿದೆ. ಕಾದು ನೋಡೋಣ ಏನಾಗುತ್ತದೆ ಎಂದು. ಟಿ20 ಕ್ರಿಕೆಟ್ ಒಂದು ರೀತಿ ಗ್ಯಾಂಬಲ್ ಎನಿಸುತ್ತದೆ. ಇಲ್ಲಿ ಏನು ಬೇಕಾದರೂ ಆಗಬಹುದು. ಅದರಲ್ಲೂ ನಾಕೌಟ್ ಪಂದ್ಯಗಳಲ್ಲಿ, ಆದರೆ ಈ ಬಾರಿ ಆರ್‌ಸಿಬಿ ಒಳ್ಳೆಯ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ 19 ವಕ್ರದೃಷ್ಟಿಯಿಂದಾಗಿ ಕಳೆದೆರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆದಿರಲಿಲ್ಲ. ಆದರೆ ಇದೀಗ ಐಪಿಎಲ್ ಆಡಳಿತ ಮಂಡಳಿಯು 2023ನೇ ಐಪಿಎಲ್ ಟೂರ್ನಿಯನ್ನು ತವರಿನಲ್ಲಿ ಹಾಗೂ ತವರಿನಾಚೆ ಆಯೋಜಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಮುಂದಿನ ವರ್ಷ ಆರ್‌ಸಿಬಿ ಅಭಿಮಾನಿಗಳು ಇಲ್ಲಿನ ಎಂ ಚಿನ್ನಸ್ವಾಮಿ ಮೈದಾನಕ್ಕೆ ತೆರಳಿ ಐಪಿಎಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

IPL Auction ಆಟಗಾರರ ರಿಲೀಸ್ ಬಳಿಕ ಮಿನಿ ಐಪಿಎಲ್ ಹರಾಜಿಗೆ 10 ಫ್ರಾಂಚೈಸಿ ಬಳಿ ಉಳಿದಿರುವ ಹಣವೆಷ್ಟು..?

ಇನ್ನು ಆರ್‌ಸಿಬಿ ಜತೆಗಿನ ಒಡನಾಟದ ಬಗ್ಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್‌, ನಾನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮನಸಾರೆ ಇಷ್ಟಪಡುತ್ತೇನೆ. ಆರ್‌ಸಿಬಿಯೇ ನನಗೆ ಒಂದು ಜಗತ್ತು, ಇದು ನನ್ನ ಬದುಕನ್ನೇ ಬದಲಿಸಿದೆ. ನಾನು 2011ರಿಂದ ಆರ್‌ಸಿಬಿ ಜತೆಗಿನ ಪಯಣ ಆರಂಭಿಸಿದೆ. ಇಲ್ಲಿ ನನ್ನ ಜೀವನದ ಅಮೂಲ್ಯ ಸ್ನೇಹಿತರನ್ನು ಪಡೆದೆ. ಇದು ನನ್ನ ಒಂದು ಭಾಗ, ನನ್ನ ಕುಟುಂಬ. ಅದಕ್ಕಾಗಿಯೇ ನಾವು ಹೇಳುವುದು ನಾವೆಲ್ಲಾ ಆರ್‌ಸಿಬಿಯನ್ಸ್‌ ಎಂದು ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ.

ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಬ್ಯಾಟರ್ ಎಬಿ ಡಿವಿಲಿಯರ್ಸ್‌, 2011ರಿಂದ 2021ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಕಳೆದೊಂದು ದಶಕದಲ್ಲಿ ಆರ್‌ಸಿಬಿ ಅಭಿಮಾನಿಗಳನ್ನು ಎಬಿಡಿ ಹಲವಾರು ಬಾರಿ ತಮ್ಮ ಅಮೋಘ ಆಟದ ಮೂಲಕ ರಂಜಿಸಿದ್ದಾರೆ.

click me!