ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊರೋನಾ ಪಾಸಿಟಿವ್!

By Suvarna NewsFirst Published Dec 28, 2021, 10:14 AM IST
Highlights

*ಬಿಸಿಸಿಐ ಅಧ್ಯಕ್ಷ  ಸೌರವ್ ಗಂಗೂಲಿಗೆಗೆ ಕೋವಿಡ್-19 ಪಾಸಿಟಿವ್
*ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ದಾಖಲು
*ಗಂಗೂಲಿ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳ ಮಾಹಿತಿ

ನವದೆಹಲಿ(ಡಿ. 28): ಭಾರತ ಕ್ರಿಕೆಟ್‌ ತಂಡದ (Team India) ಮಾಜಿ ನಾಯಕ ಮತ್ತು ಬಿಸಿಸಿಐನ ಪ್ರಸ್ತುತ ಅಧ್ಯಕ್ಷ ಸೌರವ್ ಗಂಗೂಲಿಗೆ (Sourav Ganguly)  ಕೋವಿಡ್ -19 ದೃಡಪಟ್ಟಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ ವೈರಸ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದ ಬೆನ್ನಲ್ಲೇ ಸೌರವ್ ಗಂಗೂಲಿ ಕೋವಿಡ್‌ 19 ಪರೀಕ್ಷೆಗೆ ಒಳಪಟ್ಟಿದ್ದರು. ಭಾರತ ತಂಡದ ಮಾಜಿ ನಾಯಕ ಸೌಮ್ಯ ರೋಗಲಕ್ಷಣಗಳೊಂದಿಗೆ ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ (Woodlands hospital) ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

"ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕೋವಿಡ್ -19 ಗೆ  ಪರೀಕ್ಷೆ ನಡೆಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ" ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ (PTI) ವರದಿ ಮಾಡಿದೆ. ಈ ವರ್ಷ ಜನವರಿಯ ನಂತರ ಗಂಗೂಲಿ ಅವರು ಎದೆಯ ಅಸ್ವಸ್ಥತೆಯಿಂದ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದು ಇದು ಮೂರನೇ ಬಾರಿಯಾಗಿದೆ. ಗಂಗೂಲಿ ಅವರು ತಮ್ಮ ಕೋಲ್ಕತ್ತಾದ ಮನೆಯಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ (Heart Attack) ಒಳಗಾಗಿದ್ದರು ಮತ್ತು ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು.

 

BCCI President and former India captain Sourav Ganguly admitted to hospital after testing positive for COVID-19, say BCCI sources

— Press Trust of India (@PTI_News)

 

20 ದಿನಗಳ ನಂತರ, ಗಂಗೂಲಿಗೆ ಇದೇ ರೀತಿಯ ಎದೆನೋವು ಕಾಣಿಸಿಕೊಂಡಿತ್ತು, ಇದು ಜನವರಿ 28 ರಂದು ಎರಡನೇ ಸುತ್ತಿನ ಆಂಜಿಯೋಪ್ಲ್ಯಾಸ್ಟಿಗೆ ಕಾರಣವಾಗಿತ್ತು. ಈ ವೇಳೆ ಎರಡು ಸ್ಟೆಂಟ್‌ಗಳನ್ನು ಎರಡು ಅಪಧಮನಿಗಳಲ್ಲಿ ಇರಿಸಲಾಗಿತ್ತು. ಗಂಗೂಲಿ ಅವರು ಮಾರ್ಚ್‌ನಲ್ಲಿ ಕೆಲಸವನ್ನು ಪುನರಾರಂಭಿಸಿದ್ದರು ಹಾಗೂ ಕೋವಿಡ್ -19 ವಿರುದ್ಧ ಸೌರವ್ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ.‌

ಸೋಮವಾರ ದಾಖಲೆಯ 156 ಹೊಸ ಕೇಸ್‌!

ಭಾರತದಲ್ಲೂ ದಿನೇ ದಿನೇ ಒಮಿಕ್ರೋನ್‌ ಸೋಂಕಿತರ (Omicron Cases)ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದ್ದು, ಸೋಮವಾರ ಒಂದೇ ದಿನ 156 ಜನರಲ್ಲಿ ಹೊಸ ರೂಪಾಂತರಿ ವೈರಸ್‌ (Covid 19 Variant) ಪತ್ತೆಯಾಗಿದೆ. ಇದು, ಇದುವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸೋಂಕಿನ ಪ್ರಮಾಣವಾಗಿದೆ.ಇದರೊಂದಿಗೆ ದೇಶದಲ್ಲಿ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 578ಕ್ಕೆ ತಲುಪಿದೆ. ಡಿ.24ರಂದು 122 ಕೇಸ್‌ ಪತ್ತೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು.

ಹೊಸ ಕೊರೋನಾ ಕೇಸು:

ಈ ನಡುವೆ ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 6,531 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 315 ಸೋಂಕಿತರು ಸಾವಿಗೀಡಾಗಿದ್ದಾರೆ. ತನ್ಮೂಲಕ ಒಟ್ಟು ಪ್ರಕರಣ 3.47 ಕೋಟಿಗೆ ಹಾಗೂ ಒಟ್ಟು ಸಾವು 4.79 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಕೇಸು 75,841ಕ್ಕೆ ಇಳಿಕೆ ಕಂಡಿದೆ.

click me!