ನ್ಯೂಜಿಲೆಂಡ್ 'ಎ' ವಿರುದ್ದದ ಸರಣಿಗೆ ಭಾರತ 'ಎ' ತಂಡ ಪ್ರಕಟ; ಶುಭ್‌ಮನ್‌ ಗಿಲ್‌ಗೆ ನಾಯಕ ಪಟ್ಟ

By Naveen KodaseFirst Published Aug 21, 2022, 12:40 PM IST
Highlights

ನ್ಯೂಜಿಲೆಂಡ್ 'ಎ' ವಿರುದ್ದದ ಸರಣಿಗೆ ಭಾರತ 'ಎ' ತಂಡ ಪ್ರಕಟ
4 ದಿನಗಳ 3 ಪಂದ್ಯಗಳ ಸರಣಿಗೆ 16 ಆಟಗಾರರ ತಂಡ ಪ್ರಕಟ
ಸೆಪ್ಟೆಂಬರ್ 01ರಿಂದ ಭಾರತ 'ಎ' ಹಾಗೂ ನ್ಯೂಜಿಲೆಂಡ್ 'ಎ' ತಂಡಗಳ ಸೆಣಸಾಟ

ಮುಂಬೈ(ಆ.21): ಮುಂಬರುವ ನ್ಯೂಜಿಲೆಂಡ್ 'ಎ' ತಂಡದ ವಿರುದ್ದ ನಡೆಯಲಿರುವ 4 ದಿನಗಳ 3 ಪಂದ್ಯಗಳ ಸರಣಿಗೆ, ಬಿಸಿಸಿಐ ಆಯ್ಕೆ ಸಮಿತಿಯು ಭಾರತ 'ಎ' ತಂಡವನ್ನು ಪ್ರಕಟಿಸಿದ್ದು, ಪ್ರತಿಭಾನ್ವಿತ ಬ್ಯಾಟರ್‌ ಶುಭ್‌ಮನ್‌ ಗಿಲ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಭಾರತ ಟೆಸ್ಟ್‌ ತಂಡವನ್ನು ಪ್ರತಿನಿಧಿಸುವ ಕೆಲ ಆಟಗಾರರು ಹಾಗೂ ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರರಿಗೆ ಭಾರತ 'ಎ' ತಂಡದಲ್ಲಿ ಮಣೆ ಹಾಕಲಾಗಿದೆ.

ಟೀಂ ಇಂಡಿಯಾ ಕ್ರಿಕೆಟಿಗರಾದ ಹನುಮ ವಿಹಾರಿ, ವಾಷಿಂಗ್ಟನ್ ಸುಂದರ್, ಕೆ ಎಸ್ ಭರತ್, ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮದ್ ಸಿರಾಜ್‌ಗೆ ನ್ಯೂಜಿಲೆಂಡ್ 'ಎ' ವಿರುದ್ದದ ಸರಣಿಗೆ ಮಣೆ ಹಾಕಲಾಗಿದೆ. ಇನ್ನು 2021-22ರ ಸೀಸನ್‌ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಗಮನಾರ್ಹ ಪ್ರದರ್ಶನ ತೋರಿದ್ದ ಯಶಸ್ವಿ ಜೈಸ್ವಾಲ್, ಶಮ್ಸ್‌ ಮುಲಾನಿ, ಮಧ್ಯ ಪ್ರದೇಶ ತಂಡದ ಪರ ಮಿಂಚಿದ್ದ ಯಶ್ ದುಬೆ, ರಜತ್ ಪಾಟೀದಾರ್ ಹಾಗೂ ಶುಭಂ ಶರ್ಮಾ ಕೂಡಾ ಭಾರತ 'ಎ' ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಇನ್ನು ಇತ್ತೀಚೆಗಷ್ಟೇ ಜಿಂಬಾಬ್ವೆ ಎದುರಿನ ಸರಣಿಗೆ ಭಾರತ ತಂಡ ಕೂಡಿಕೊಂಡಿರುವ ಆಲ್ರೌಂಡರ್ ಶಾಬಾಜ್ ಅಹಮ್ಮದ್ ಕೂಡಾ ಭಾರತ 'ಎ' ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ದೇಶಿ ಕ್ರಿಕೆಟ್‌ನಲ್ಲಿ ಸಾಕಷ್ಟು ವರ್ಷಗಳಿಂದ ಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವ ಜಲಜಾ ಸಕ್ಸೆನಾ ಕೂಡಾ ಭಾರತ 'ಎ' ತಂಡದಲ್ಲಿ ಪಡೆದುಕೊಂಡಿದ್ದಾರೆ. 

ದ್ವಿತೀಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 5 ವಿಕೆಟ್ ಗೆಲುವು, ಸರಣಿ ಗೆದ್ದ ಭಾರತ!

ಭಾರತ 'ಎ' ಹಾಗೂ ನ್ಯೂಜಿಲೆಂಡ್ 'ಎ' ತಂಡಗಳ ನಡುವಿನ ಪಂದ್ಯಾವಳಿಗಳು ಸೆಪ್ಟೆಂಬರ್ 01ರಿಂದ ಆರಂಭವಾಗಲಿದೆ. ಇನ್ನು ಕೊನೆಯ ಪಂದ್ಯ ಸೆಪ್ಟೆಂವರ್ 15ರಿಂದ ಆರಂಭವಾಗಲಿದೆ. ಎಲ್ಲಾ ಮೂರು ಪಂದ್ಯಗಳು ತಲಾ 3 ದಿನಗಳ ಅಂತರದಲ್ಲಿ ನಡೆಯಲಿವೆ. ಈ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿ ಜರುಗಲಿವೆ. ಇದಾದ ಬಳಿಕ ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 27ರ ವರೆಗೆ ಮೂರು ಲಿಸ್ಟ್‌ 'ಎ' ಪಂದ್ಯಗಳು ನಡೆಯಲಿವೆ.

ನ್ಯೂಜಿಲೆಂಡ್ 'ಎ' ವಿರುದ್ದದ ಸರಣಿಗೆ ಭಾರತ 'ಎ' ತಂಡ ಹೀಗಿದೆ ನೋಡಿ: 

ಶುಭ್‌ಮನ್ ಗಿಲ್‌(ನಾಯಕ), ಯಶ್ ದುಬೆ, ಹನುಮ ವಿಹಾರಿ, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕೆ ಎಸ್ ಭರತ್(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಜಲಜಾ ಸಕ್ಸೆನಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ಶುಭಂ ಶರ್ಮಾ, ಅಕ್ಷಯ್ ವಾಡ್ಕರ್, ಶಹಬಾಜ್ ಅಹಮದ್, ಮಣಿಶಂಕರ್ ಮುರಾಸಿಂಗ್.

click me!