IPL 2022 ಟೂರ್ನಿಗೆ ಬಹುತೇಕ ಆಟಗಾರರು ಅದಲು ಬದಲು; ರಿಟೈನ್‌ ಅವಕಾಶ ಮೂವರಿಗೆ ಮಾತ್ರ!

By Suvarna NewsFirst Published Aug 10, 2021, 7:03 PM IST
Highlights
  • IPL 2021 ಭಾಗ 2 ಮುಂದುವರಿಸಲು ಬಿಸಿಸಿಐ ಸಕಲ ಸಿದ್ಧತೆ
  • ಇದರ ಜೊತೆಗೆ 2022ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭ
  • 202ರ ಟೂರ್ನಿಯಲ್ಲಿ 10 ತಂಡ, 8 ತಂಡದ ಆಟಗಾರರು ಅದಲು ಬದಲು

ಮುಂಬೈ(ಆ.10): ಕೊರೋನಾ ಕಾರಣ ಸ್ಥಗಿತಗೊಂಡಿರುವ ಐಪಿಎಲ್ 2021 2ನೇ ಭಾಗ ದುಬೈನಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇದರ ನಡುವೆ ಬಿಸಿಸಿಐ 2022ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿದೆ. ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ ಮತ್ತೆರಡು ತಂಡಗಳು ಸೇರಿಕೊಳ್ಳುತ್ತಿದೆ. ಹೀಗಾಗಿ ಈ ವರ್ಷದ ಅಂತ್ಯದಲ್ಲಿ ಹರಾಜು ನಡೆಯಲಿದೆ.

2022ರ ಐಪಿಎಲ್ ಟೂರ್ನಿ ವೇಳೆ ಆಟಗಾರರು ಬಹುತೇಕ ಅದಲು ಬದಲಾಗಲಿದ್ದಾರೆ. ಕಾರಣ ಈ ವರ್ಷದ ಅಂತ್ಯದಲ್ಲಿ 10 ತಂಡಗಳಿಗೆ ಹರಾಜು ನಡೆಯಲಿದೆ. ಇನ್ನು ಸದ್ಯ ಅಖಾಡದಲ್ಲಿರುವ 8 ತಂಡಗಳು ಗರಿಷ್ಠ ಮೂವರು ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಲು ಅವಕಾಶ ನೀಡುವ ಕುರಿತು ಬಿಸಿಸಿಐ ಚಿಂತಿಸುತ್ತಿದೆ.

ಈ ಹಿಂದೇ ಐವರನ್ನು ರಿಟೈನ್ ಮಾಡಿಕೊಳ್ಳುವ ಅವಕಾಶವಿತ್ತು. ಹೀಗಾಗಿ 8 ಫ್ರಾಂಚೈಸಿಗಳಲ್ಲಿ ಕೆಲ ಫ್ರಾಂಚೈಸಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲರು ಕೋರ್ ತಂಡವನ್ನು ಉಳಿಸಿಕೊಂಡಿತ್ತು. ಆದರೆ ಈ ಬಾರಿಯ ಹರಾಜಿನಲ್ಲಿ ಮೂವರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ಇನ್ನುಳಿದ ಎಲ್ಲಾ ಆಟಗಾರರು ಮತ್ತೆ ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ. ಇದು ಬಿಸಿಸಿಐ ಲೆಕ್ಕಾಚಾರವಾಗಿದೆ. ಇದರ ಹಿಂದೆ ಕೆಲ ಕಾರಣಗಳೂ ಇವೆ.

ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ಮೂರಕ್ಕೆ ಇಳಿಸಿದರೆ ಹೊಸ ಎರಡು ತಂಡಗಳಿಗೆ ಟಾಪ್ ಆಟಗಾರರ ಖರೀದಿ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಸದ್ಯ ಇರುವ 8 ತಂಡದಲ್ಲಿ ಟಾಪ್ ಆಟಗಾರರು ಉಳಿದುಕೊಳ್ಳಲಿದ್ದಾರೆ. ಹೊಸ ತಂಡ ದುರ್ಬಲವಾಗಲಿದೆ ಅನ್ನೋದು ಕ್ರಿಕೆಟ್ ತಜ್ಞರ ಅಭಿಪ್ರಾಯವಾಗಿದೆ.

ಹೊಸ ತಂಡಗಳ ಸೇರ್ಪಡೆಗೆ ಬಿಸಿಸಿಐ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಹಲವು ಕಂಪನಿಗಳು, ಉದ್ಯಮಿಗಳು ಐಪಿಎಲ್ ತಂಡ ಖರೀದಿಗೆ ಆಸಕ್ತಿ ತೋರಿದ್ದಾರೆ. ಅದಾನಿ ಗ್ರೂಪ್ ಕೂಡ ಹೊಸ ತಂಡ ಖರೀದಿಯತ್ತ ಮನಸ್ಸು ಮಾಡಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.

click me!