
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 9742 ಕೋಟಿ ರು. ಲಾಭ ಗಳಿಸಿದೆ. ಈ ಪೈಕಿ ₹5761 ಕೋಟಿ ಆದಾಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಿಂದಲೇ ಲಭಿಸಿದೆ ಎಂದು ರೆಡಿಫ್ಯೂಷನ್ ಸಂಸ್ಥೆ ವರದಿ ಮಾಡಿದೆ. ಅಲ್ಲದೆ, ಸದ್ಯ ಬಿಸಿಸಿಐ ಬಳಿ ಬರೋಬ್ಬರಿ 30 ಸಾವಿರ ಕೋಟಿ ರು. ಮೀಸಲು ನಿಧಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2008ರಲ್ಲಿ ಆರಂಭಗೊಂಡ ಐಪಿಎಲ್ ಟೂರ್ನಿಯು ಬಿಸಿಸಿಐನ ಪ್ರಮುಖ ಆದಾಯ ಮೂಲವಾಗಿದೆ. 2023-24ರ ಬಿಸಿಸಿಐನ ಒಟ್ಟು ಆದಾಯದಲ್ಲಿ ಶೇ.59ರಷ್ಟು ಐಪಿಎಲ್‌ನಿಂದಲೇ ಹರಿದುಬಂದಿದೆ. ಉಳಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನಿಂದ ಬಿಸಿಸಿಐಗೆ ಸುಮಾರು ₹1000 ಕೋಟಿ ಆದಾಯ ಹಂಚಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಐಪಿಎಲ್ ಅಲ್ಲದ ಟೂರ್ನಿಗಳ ಮಾಧ್ಯಮ ಪ್ರಾಯೋಜಕತ್ವದಲ್ಲಿ ಬಿಸಿಸಿಐ ₹361 ಕೋಟಿ ಗಳಿಸಿದೆ. ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಿಂದ ₹378 ಕೋಟಿ ಆದಾಯ ಲಭಿಸಿದ್ದು, ಭಾರತದ ಪುರುಷರ ಕ್ರಿಕೆಟ್ ತಂಡದ ಸರಣಿಗಳ ಮೂಲಕ ₹350 ಕೋಟಿಗೂ ಹೆಚ್ಚು ಲಾಭವಾಗಿದೆ. ಬಡ್ಡಿ ಮೂಲಕ ₹987 ಕೋಟಿ, ಇತರ ಮೂಲಗಳಿಂದ ₹400 ಕೋಟಿ ಆದಾಯ 2023-24ರಲ್ಲಿ ಬಿಸಿಸಿಐಗೆ ಲಭಿಸಿದೆ ಎಂದು ವರದಿಯಾಗಿದೆ.
ಬಡ್ಡಿಯಿಂದಲೇ ಬಿಸಿಸಿಐಗೆ ಬರುತ್ತೆ ಸಾವಿರ ಕೋಟಿ!
ಐಪಿಎಲ್ ಅಲ್ಲದೆ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಅಥವಾ ಸಿಕೆ ನಾಯ್ಡು ಟ್ರೋಫಿಯಂತಹ ದೇಸಿ ಟೂರ್ನಿಗಳನ್ನು ವಾಣಿಜ್ಯೀಕರಿಸುವ ಮೂಲಕ ಬಿಸಿಸಿಐ ಅಪಾರ ಆದಾಯ ಗಳಿಸುವ ಸಾಮರ್ಥ್ಯ ಹೊಂದಿದೆ ಎಂದು ರೆಡಿಫ್ಯೂಷನ್ ಮುಖ್ಯಸ್ಥ ಸಂದೀಪ್ ಗೋಯಲ್ ತಿಳಿಸಿದ್ದಾರೆ. ಮಂಡಳಿಯು ಸುಮಾರು ₹30,000 ಕೋಟಿ ಮೀಸಲು ಹಣವನ್ನು ಹೊಂದಿದೆ. ಇದರಿಂದಲೇ ಬಿಸಿಸಿಐಗೆ ವರ್ಷಕ್ಕೆ ಸುಮಾರು ₹1000 ಕೋಟಿ ಬಡ್ಡಿ ಮೊತ್ತ ಬರುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ
ಬುಧವಾರದ ಅಭ್ಯಾಸ ಶಿಬಿರಕ್ಕೂ ಮುನ್ನ ಭಾರತೀಯ ಆಟಗಾರರ ಡ್ರೆಸ್ಸಿಂಗ್ ಕೋಣೆಯಿಂದ ಭಗವಾನ್ ಹನುಮಂತನನ್ನು ಸ್ಮರಿಸುವ ಹನುಮಾನ್ ಚಾಲೀಸಾ ಸೇರಿದಂತೆ ವಿವಿಧ ಹಾಡುಗಳು ಕೇಳಿಬಂದವು. ಇಂಗ್ಲಿಷ್, ಪಂಜಾಬಿ ಹಾಡುಗಳು ಕೇಳಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.
ಬಂಗಾಳ ಅಂ-23 ಕೋಚ್ ಸ್ಥಾನದ ರೇಸ್‌ನಲ್ಲಿ ಸಾಹ
ನವದೆಹಲಿ: 6 ತಿಂಗಳ ಹಿಂದೆಯಷ್ಟೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೃದ್ಧಿಮಾನ್ ಸಾಹ ಬಂಗಾಳ ಅಂಡರ್- 23 ಕೋಚ್ ಸ್ಥಾನದ ರೇಸ್‌ನಲ್ಲಿದ್ದಾರೆ.
ಸಾಹ ಈ ವರ್ಷದ ಜನವರಿಯಲ್ಲಿ ರಣಜಿ ಟ್ರೋಫಿಯಲ್ಲಿ ಕೊನೆಯ ಬಾರಿ ಆಡಿ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಈ ನಡುವೆ ಬಂಗಾಳ ಕ್ರಿಕೆಟ್ ಮಂಡಳಿಯು ವಿವಿಧ ವಯೋಮಾನದ ಕ್ರಿಕೆಟ್ ತಂಡಗಳಿಗೆ ಮುಂದಿನ ವಾರದಲ್ಲಿ ಕೋಚ್‌ಗಳ ನೇಮಕ ಮಾಡಲಿದ್ದು, ಅಂಡರ್-23 ತಂಡದ ಕೋಚ್ ಹುದ್ದೆಗೆ ಸಾಹ ಹೆಸರು ಕೇಳಿ ಬಂದಿದೆ. ಅವರು ಸೌರವ್ ಗಂಗೂಲಿ ಮತ್ತು ಪಂಕಜ್ ಗಂಗೂಲಿ ಹೊರತುಪಡಿಸಿ ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನು ಆಡಿರುವ ಬಂಗಾಳದ ಆಟಗಾರ ಎನಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.