
ಬೆಂಗಳೂರು: ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡು, ತಂಡದಿಂದ ಖರೀದಿಸಲ್ಪಟ್ಟ ಬಳಿಕ ಟೂರ್ನಿಗೆ ಆರಂಭಗೊಳ್ಳುವ ಮುನ್ನ ವೈಯಕ್ತಿಕ ಕಾರಣ ನೀಡಿ ಗೈರಾದರೆ ಅಂತಹ ಆಟಗಾರನನ್ನು 2 ವರ್ಷ ಕಾಲ ನಿಷೇಧಗೊಳಿಸುವುದಾಗಿ ಬಿಸಿಸಿಐ ತಿಳಿಸಿದೆ. ಶನಿವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕೆಲ ವಿದೇಶಿ ಆಟಗಾರರು ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಬಿಕರಿಯಾದ ಬಳಿಕ ವೈಯಕ್ತಿಕ ಕಾರಣ ನೀಡಿ ಟೂರ್ನಿಗೆ ಗೈರಾದ ಉದಾಹರಣೆಗಳು ಇವೆ. ಈ ಕಳ್ಳಾಟಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಕುತೂಹಲಕ್ಕೆ ತೆರೆ ಎಳೆದ ಬಿಸಿಸಿಐ: ಐಪಿಎಲ್ ಮೆಗಾ ಹರಾಜಿಗೂ ಮುನ್ನ 6 ಆಟಗಾರರ ರೀಟೈನ್‌ಗೆ ಅವಕಾಶ!
ಇದೇ ವೇಳೆ ವಿದೇಶಿ ಆಟಗಾರರು ಮೆಗಾ ಹರಾಜು ಪ್ರಕ್ರಿಯೆಗೆ ನೋಂದಣಿ ಮಾಡಿಕೊಳ್ಳುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಮೆಗಾ ಹರಾಜಿಗೆ ನೋಂದಣಿ ಮಾಡಿಕೊಳ್ಳದ ಆಟಗಾರರು ಮುಂದಿನ ವರ್ಷ ಹರಾಜು ಪ್ರಕ್ರಿಯೆಯಿಂದಲೂ ಹೊರಗುಳಿಯಬೇಕಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಇಂದು ಬೆಂಗಳೂರಲ್ಲಿ ಬಿಸಿಸಿಐ ವಾರ್ಷಿಕ ಸಭೆ
ಬೆಂಗಳೂರು: ಬಿಸಿಸಿಐನ 93ನೇ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಇಲ್ಲಿನ ಪಂಚ ತಾರಾ ಹೋಟೆಲ್‌ವೊಂದರಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸಭೆಗಳಲ್ಲಿ ಬಿಸಿಸಿಐ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲು ಸದಸ್ಯರ ಆಯ್ಕೆ ಸೇರಿ ಒಟ್ಟು 18 ವಿಷಯಗಳನ್ನು ಚರ್ಚೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಮುಂದಿನ ಐಪಿಎಲ್‌ನಲ್ಲೂ 74 ಪಂದ್ಯ: 10 ಪಂದ್ಯ ಹೆಚ್ಚಿಸುವ ನಿರ್ಧಾರ ಕೈಬಿಟ್ಟ ಬಿಸಿಸಿಐ!
ಆದರೆ, ಜಯ್ ಶಾರಿಂದ ತೆರವಾಗಲಿರುವ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಷಯದ ಚರ್ಚೆ ಅಜೆಂಡಾದಲ್ಲಿ ಇಲ್ಲ ಎಂದು ತಿಳಿದುಬಂದಿದೆ. ಈವರೆಗೂ, ಐಸಿಸಿ ಸಭೆಗಳಲ್ಲಿ ಜಯ್ ಶಾ ಬಿಸಿಸಿಐ ಅನ್ನು ಪ್ರತಿನಿಧಿಸುತ್ತಿದ್ದರು. ಅವರೀಗ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾರಣ, ಹೊಸಬರನ್ನು ಆಯ್ಕೆ ಮಾಡಬೇಕಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿಗೆ ಆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.