Asianet Suvarna News Asianet Suvarna News

ಕುತೂಹಲಕ್ಕೆ ತೆರೆ ಎಳೆದ ಬಿಸಿಸಿಐ: ಐಪಿಎಲ್‌ ಮೆಗಾ ಹರಾಜಿಗೂ ಮುನ್ನ 6 ಆಟಗಾರರ ರೀಟೈನ್‌ಗೆ ಅವಕಾಶ!

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಪ್ರತಿ ಫ್ರಾಂಚೈಸಿಗೆ ಗರಿಷ್ಠ 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

From Salary Cap To RTM All IPL 2025 Retention Rules Explained Cricket fans need to know kvn
Author
First Published Sep 29, 2024, 9:32 AM IST | Last Updated Sep 29, 2024, 9:32 AM IST

ಬೆಂಗಳೂರು: 2025ರ ಐಪಿಎಲ್‌ಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದಕ್ಕೂ ಮೊದಲು ಫ್ರಾಂಚೈಸಿಗಳು ಗರಿಷ್ಠ 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಅಲ್ಲದೇ, ಹರಾಜಿನಲ್ಲಿ ರೈಟ್‌ ಟು ಮ್ಯಾಚ್‌ (ಆರ್‌ಟಿಎಂ) ಕಾರ್ಡ್‌ ಬಳಕೆ ಮಾಡಲು ಸಹ ಬಿಸಿಸಿಐ ಅವಕಾಶ ನೀಡಿದೆ ಎಂದು ತಿಳಿದುಬಂದಿದೆ.

ಶನಿವಾರ ನಡೆದ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಆಟಗಾರರ ರೀಟೆನ್ಷನ್‌ ನಿಯಮವನ್ನು ನಿರ್ಧರಿಸಲಾಯಿತು. ಇದೇ ವೇಳೆ, ಆಟಗಾರರ ಖರೀದಿಗೆ (ಹರಾಜಿಗೂ ಮುನ್ನ ಹಾಗೂ ಹರಾಜಿನಲ್ಲಿ) ಫ್ರಾಂಚೈಸಿಗಳು ಗರಿಷ್ಠ 120 ಕೋಟಿ ರು. ವರೆಗೂ ಖರ್ಚು ಮಾಡಬಹುದಾಗಿದೆ. ಕಳೆದ ಆವೃತ್ತಿಗೆ ಹೋಲಿಸಿದರೆ 20 ಕೋಟಿ ರು. ಹೆಚ್ಚಳ ಮಾಡಲಾಗಿದೆ.

ಯಾವುದೇ ತಂಡ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ, ಅದರಲ್ಲಿ ಅಂ.ರಾ. ಕ್ರಿಕೆಟ್‌ ಆಡದ ಭಾರತೀಯ ಆಟಗಾರ (ಅನ್‌ಕ್ಯಾಪ್ಡ್‌) ಒಬ್ಬ ಇರಲೇಬೇಕು ಎನ್ನುವ ನಿಯಮ ಪರಿಚಯಿಸಲಾಗಿದೆ.

ಭಾರತ-ಬಾಂಗ್ಲಾ ಕಾನ್ಪುರ ಟೆಸ್ಟ್: ಎರಡನೇ ದಿನದಾಟ ಸಂಪೂರ್ಣ ಮಳೆಗೆ ಬಲಿ, 3ನೇ ದಿನದಾಟಕ್ಕೂ ಮಳೆ ಭೀತಿ!

ಎಲ್ಲಾ 6 ಆಟಗಾರರನ್ನು ಹರಾಜಿಗೆ ಮುನ್ನವೇ ಉಳಿಸಿಕೊಳ್ಳಬಹುದು ಅಥವಾ ರೀಟೈನ್‌ ಹಾಗೂ ಆರ್‌ಟಿಎಂ ಕಾರ್ಡ್‌ ಬಳಕೆ ಮೂಲಕ ಉಳಿಸಿಕೊಳ್ಳಬಹುದು. ಆರ್‌ಟಿಎಂ ಕಾರ್ಡ್‌ಗಳನ್ನು ಬಳಸಿಯೇ ಎಲ್ಲಾ 6 ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಯನ್ನೂ ಬಿಸಿಸಿಐ ನೀಡಿದೆ.

ಧೋನಿ ‘ಅನ್‌ಕ್ಯಾಪ್ಡ್‌’ ಆಟಗಾರ?

ಚೆನ್ನೈ ಸೂಪರ್‌ ಕಿಂಗ್ಸ್‌ ತಮ್ಮ ಮಾಜಿ ನಾಯಕ ಎಂ.ಎಸ್‌.ಧೋನಿಯನ್ನು ಅನ್‌ಕ್ಯಾಪ್ಡ್‌ ಆಟಗಾರ ಎಂದು ತೋರಿಸಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಅಂ.ರಾ.ಕ್ರಿಕೆಟ್‌ನಿಂದ ನಿವೃತ್ತಿಯಾಗಿ 5 ವರ್ಷ ಕಳೆದಿದ್ದರೆ ಅಂಥ ಆಟಗಾರರನ್ನು ಅನ್‌ಕ್ಯಾಪ್ಡ್‌ ಆಟಗಾರ ಎಂದು ಪರಿಗಣಿಸುವ ನಿಯಮವನ್ನು ಬಿಸಿಸಿಐ 2008ರಲ್ಲಿ ಪರಿಚಯಿಸಿತ್ತು. ಆದರೆ, ಈ ಅವಕಾಶವನ್ನು ಈ ವರೆಗೂ ಯಾವ ತಂಡವೂ ಬಳಕೆ ಮಾಡಿಕೊಂಡಿಲ್ಲ. 2021ರಲ್ಲಿ ಈ ನಿಯಮವನ್ನು ಕೈಬಿಡಲಾಗಿತ್ತು.

2022ರ ಮೆಗಾ ಹರಾಜಿಗೂ ಮುನ್ನ ಧೋನಿಯನ್ನು ₹12 ಕೋಟಿ ಕೊಟ್ಟು ಸಿಎಸ್‌ಕೆ ಉಳಿಸಿಕೊಂಡಿತ್ತು. 2020ರಲ್ಲಿ ನಿವೃತ್ತಿ ಪ್ರಕಟಿಸಿದ್ದ ಧೋನಿಯನ್ನು ಈಗ ಸಿಎಸ್‌ಕೆ ₹4 ಕೋಟಿಗೆ ಅನ್‌ಕ್ಯಾಪ್ಡ್‌ ಆಟಗಾರ ವಿಭಾಗದಲ್ಲಿ ಉಳಿಸಿಕೊಳ್ಳಬಹುದಾಗಿದೆ.

ಮುಂದಿನ ಐಪಿಎಲ್‌ನಲ್ಲೂ 74 ಪಂದ್ಯ: 10 ಪಂದ್ಯ ಹೆಚ್ಚಿಸುವ ನಿರ್ಧಾರ ಕೈಬಿಟ್ಟ ಬಿಸಿಸಿಐ!

ಆಟಗಾರರಿಗೆ ಪ್ರತಿ ಪಂದ್ಯಕ್ಕೆ ಸಿಗಲಿದೆ ಹೆಚ್ಚುವರಿ ₹7.5 ಲಕ್ಷ!

2025ರ ಐಪಿಎಲ್‌ನಲ್ಲಿ ಆಡಲಿರುವ ಆಟಗಾರರಿಗೆ ಹೆಚ್ಚುವರಿ ವೇತನ ಸಿಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಘೋಷಿಸಿದ್ದಾರೆ. ಆಟಗಾರರು ಹರಾಜಾಗುವ ಮೊತ್ತವನ್ನು ಹೊರತುಪಡಿಸಿ, ತಾವು ಆಡುವ ಪ್ರತಿ ಪಂದ್ಯಕ್ಕೆ ₹7.5 ಲಕ್ಷ ಪಡೆಯಲಿದ್ದಾರೆ. ಇದಕ್ಕಾಗೇ ಫ್ರಾಂಚೈಸಿಗಳು ₹120 ಕೋಟಿ ಜೊತೆ ಹೆಚ್ಚುವರಿಯಾಗಿ ₹12.6 ಕೋಟಿ ಎತ್ತಿಡಲಿವೆ ಎಂದು ಶಾ ತಿಳಿಸಿದ್ದಾರೆ.

ಉದಾಹರಣೆಗೆ ಒಬ್ಬ ಆಟಗಾರ ಆವೃತ್ತಿಯ ಎಲ್ಲ 14 ಲೀಗ್‌ ಪಂದ್ಯಗಳನ್ನು ಆಡಿದರೆ ಆತನಿಗೆ ಒಟ್ಟು ₹1.05 ಕೋಟಿ ಹೆಚ್ಚುವರಿ ವೇತನ ಸಿಗಲಿದೆ. ಕಡಿಮೆ ಮೊತ್ತಕ್ಕೆ ಹರಾಜಾಗಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಈ ನಿಯಮದಿಂದ ಅನುಕೂಲವಾಗಿದೆ.

ಹುಸಿ ಬಾಂಬ್‌ ಇ-ಮೇಲ್‌: ಐಪಿಎಲ್‌ ಸಭೆ ವಿಳಂಬ!

ಶನಿವಾರ ಬೆಳಗ್ಗೆ ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಐಪಿಎಲ್‌ ಆಡಳಿತ ಮಂಡಳಿ ಸಭೆ ನಿಗದಿಯಾಗಿತ್ತು. ಆದರೆ ನಗರದ ಮತ್ತೊಂದು ಪ್ರತಿಷ್ಠಿತ ಹೋಟೆಲ್‌ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿದೆ ಎಂದು ಸುದ್ದಿಯಾಗುತ್ತಲೇ, ಐಪಿಎಲ್‌ ಆಡಳಿತ ಮಂಡಳಿ ತನ್ನ ಸಭೆಯನ್ನು ಸಂಜೆಗೆ ಮುಂದೂಡಿತು. ಪೊಲೀಸರು ತಪಾಸಣೆ ನಡೆಸಿದ ಬಳಿಕ ಇದು ಹುಸಿ ಬಾಂಬ್‌ ಕರೆ ಎಂದು ಸ್ಪಷ್ಟಪಡಿಸಿದರು. ಶನಿವಾರ ಸಂಜೆ ಐಪಿಎಲ್‌ ಆಡಳಿತ ಮಂಡಳಿ ಸಭೆ ನಡೆಯಿತು.

Latest Videos
Follow Us:
Download App:
  • android
  • ios