
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪಾಲಿಗೆ ಒಂದು ಕೆಟ್ಟ ಕನಸಿನಂತೆ ಭಾಸವಾಗುತ್ತಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದ ಆಡಿದ 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಗೆದ್ದು, 10 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ 9ನೇ ಸ್ಥಾನಿಯಾಗಿ ತನ್ನ ಅಭಿಯಾನವನ್ನು ಮುಗಿಸಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, 19ನೇ ಸೀಸನ್ ಐಪಿಎಲ್ ಮಧ್ಯದಲ್ಲಿಯೇ ತಂಡ ತೊರೆಯಲು ಮುಂದಾಗಿದ್ದರು ಎನ್ನುವ ಆಘಾತಕಾರಿ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಷ್ಟಕ್ಕೂ ಪಾಂಡ್ಯ ಮಧ್ಯದಲ್ಲೇ ದಿಢೀರ್ ತಂಡ ತೊರೆಯಲು ಮುಂದಾಗಿದ್ದೇಕೆ ಎನ್ನುವ ವಿಚಾರವೂ ಇದೀಗ ಬಯಲಾಗಿದೆ.
ಪಿಟಿಐ ಮಾಧ್ಯಮ ವರದಿಯ ಪ್ರಕಾರ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ಮುಂದಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ಬೆನ್ನಲ್ಲೇ ಮುಂಬೈ ಫ್ರಾಂಚೈಸಿ ಹಾಗೂ ಪಾಂಡ್ಯ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಹಾರ್ದಿಕ್ ಪಾಂಡ್ಯ ಸ್ವಯಂ ಪ್ರೇರಿತರಾಗಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಹೋಗಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ತಂಡದ ಹೀನಾಯ ಪ್ರದರ್ಶನದಿಂದ ನಿರಾಸೆಗೊಳಗಾಗಿದ್ದರು. ಇದಷ್ಟೇ ಅಲ್ಲದೇ ತಂಡ ಹಾಗೂ ವೈಯುಕ್ತಿಕ ಫಾರ್ಮ್ ಸಮಸ್ಯೆಯಿಂದ ಹಾರ್ದಿಕ್ ಪಾಂಡ್ಯ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು. ಇದು ಡ್ರೆಸ್ಸಿಂಗ್ ರೂಮ್‌ನಲ್ಲೂ ಪ್ರತಿಫಲಿಸುತ್ತಿತ್ತು. ಇನ್ನು ಮಧ್ಯ ಭಾಗದಲ್ಲಿ ಹಾರ್ದಿಕ್ ಪಾಂಡ್ಯಗೆ ಸೊಂಟದ ನೋವು ಕಾಣಿಸಿಕೊಂಡಿತ್ತು. ಪಿಟಿಐ ಮೂಲಗಳ ಪ್ರಕಾರ, 'ಹಾರ್ದಿಕ್ ಪಾಂಡ್ಯ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು. ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ ಪ್ಲೇ ಆಫ್ ರೇಸ್‌ನಿಂದ ಹೊರಬೀಳುತ್ತಿದ್ದಂತೆಯೇ ತಾವು ಮುಂದಿನ ಸೀಸನ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವುದಾಗಿ ಫ್ರಾಂಚೈಸಿಗೆ ತಿಳಿಸಿದ್ದಾಗಿ' ವರದಿಯಾಗಿದೆ.
2022ರಲ್ಲಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಾಯಕರಾದ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದರು. ಮರು ವರ್ಷ ಕೂಡಾ ಗುಜರಾತ್ ಟೈಟಾನ್ಸ್ ಪಾಂಡ್ಯ ನಾಯಕತ್ವದಲ್ಲಿ ಐಪಿಎಲ್ ಫೈನಲ್‌ಗೇರಿತ್ತು. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಐದು ಬಾರಿ ತಂಡಕ್ಕೆ ಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯ ಅವರನ್ನು ಕರೆತಂದು ಮುಂಬೈ ತಂಡದ ನಾಯಕ ಪಟ್ಟ ಕಟ್ಟಿತು. ಅಲ್ಲಿಂದ ಮುಂಬೈ ಇಂಡಿಯನ್ಸ್ ತಂಡದ ಅದಃಪತನ ಶುರುವಾಯಿತು. 2024ರಲ್ಲಿ ಮುಂಬೈ ಇಂಡಿಯನ್ಸ್ ಕೇವಲ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಇನ್ನು ಕಳೆದ ಸೀಸನ್‌ನಲ್ಲಿ ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತಾದರೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಮತ್ತೊಮ್ಮೆ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದಲ್ಲೇ ಹೊರಬಿದ್ದಿದೆ. ಹೀಗಾಗಿ ಮುಂಬೈ ಫ್ರಾಂಚೈಸಿಯು ಪಾಂಡ್ಯ ಮೇಲೆ ಇಟ್ಟಿದ್ದ ವಿಶ್ವಾಸ ಮಣ್ಣುಪಾಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.