ಬ್ಯಾಟಿಂಗ್‌ನಲ್ಲಿ ರೋಹಿತ್ ಪಡೆಗೆ ಹಿನ್ನಡೆ; ಬಾಂಗ್ಲಾಗೆ ಸುಲಭ ಗುರಿ!

By Web DeskFirst Published Nov 3, 2019, 8:43 PM IST
Highlights

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಭಾರತ ಅಬ್ಬರಿಸಲು ವಿಫಲವಾಗಿದೆ. ಈ ಮೂಲಕ ಬಾಂಗ್ಲಾಗೆ ಸುಲಭ ಗುರಿ ನೀಡಿದೆ. 

ನವದೆಹಲಿ(ನ.03): ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಶಿಖರ್ ಧವನ್ ಹೊರತು ಪಡಿಸಿದರೆ, ಇನ್ಯಾರೂ ಕೂಡ ಚುಟುಕು ಕ್ರಿಕೆಟ್ ಆಟ ಪ್ರದರ್ಶಿಸಲಿಲ್ಲ. ಹೀಗಾಗಿ ನಿಗಧಿತ 20 ಓವರ್‌ಗಳಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 148 ರನ್ ಸಿಡಿಸಿದೆ.

ಇದನ್ನೂ ಓದಿ: ಕೊಹ್ಲಿ ದಾಖಲೆ ಮುರಿದು ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ!

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ ಕೇವಲ 9 ರನ್ ಸಿಡಿಸಿ ಔಟಾದರು. ತಂಡದಲ್ಲಿರುವ ಏಕೈಕ ಕನ್ನಡಿಗ ಕೆಎಲ್ ರಾಹುಲ್ 15 ರನ್ ಸಿಡಿಸಿ ನಿರ್ಗಮಿಸಿದರು. ಈ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಹೋರಾಟದಿಂದ ಟೀಂ ಇಂಡಿಯಾ ಚೇತರಿಕೆ ಕಂಡಿದೆ. ಆದರೆ ಶ್ರೇಯಸ್ 22 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಧವನ್ 42 ಎಸೆತದಲ್ಲಿ 41 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಚೊಚ್ಚಲ ಅಂತರಾಷ್ಟ್ರೀಯ ಪಂದ್ಯ ಆಡಿದ ಶಿವಂ ದುಬೆಗೆ ಆಘಾತವಾಗಿದೆ. ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು.

ರಿಷಬ್ ಪಂತ್ ಬಿರುಸಿನ ಹೊಡೆತಕ್ಕೆ ಮುಂದಾದರು. ಆದರೆ ಪಂತ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ಪಂತ್ 27 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ 15 ಅಜೇಯ ಹಾಗೂ ವಾಶಿಂಗ್ಟನ್ ಸುಂದರ್  ಅಜೇಯ 14 ರನ್ ಸಿಡಿಸಿದರು.  ಇದರೊಂದಿಗೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ಸಿಡಿಸಿತು. 

click me!