
ಚಿತ್ತಗಾಂಗ್(ಮಾ.10): ಹಾಲಿ ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಇದು ಟಿ20 ಮಾದರಿಯಲ್ಲಿ ಇಂಗ್ಲೆಂಡ್ ವಿರುದ್ಧ ಬಾಂಗ್ಲಾಗೆ ಮೊದಲ ಗೆಲುವು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 6 ವಿಕೆಟ್ಗೆ 156 ರನ್ ಕಲೆಹಾಕಿತು. ಬಟ್ಲರ್ 67 ರನ್ ಸಿಡಿಸಿದರು. ಕೊನೆ 4 ಓವರಲ್ಲಿ ಕೇವಲ 21 ರನ್ ಗಳಿಸಿದ್ದು ಇಂಗ್ಲೆಂಡ್‌ಗೆ ಮುಳುವಾಯಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾ ನಜ್ಮುಲ್ ಹೊಸೈನ್(30 ಎಸೆತಗಳಲ್ಲಿ 51) ಅಬ್ಬರದಿಂದಾಗಿ 2 ಓವರ್ ಬಾಕಿ ಇರುವಂತೆ ಗೆಲುವು ಸಾಧಿಸಿತು.
ಇತ್ತೀಚೆಗಷ್ಟೇ ಬಾಂಗ್ಲಾದೇಶ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇಂಗ್ಲೆಂಡ್ ತಂಡವು 2-1 ಅಂತರದಲ್ಲಿ ಜಯಿಸಿತ್ತು. ಆದರೆ ಇದೀಗ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ವಿರುದ್ದ ಬಾಂಗ್ಲಾದೇಶ ತಂಡವು ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.
2ನೇ ಟೆಸ್ಟ್: ವಿಂಡೀಸ್ ವಿರುದ್ಧ ಆಫ್ರಿಕಾಕ್ಕೆ ಲೀಡ್
ಜೋಹಾನ್ಸ್ಬರ್ಗ್: ವೆಸ್ಟ್ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 69 ರನ್ ಮುನ್ನಡೆ ಪಡೆದಿದೆ. ದಕ್ಷಿಣ ಆಫ್ರಿಕಾದ 320 ರನ್ ಉತ್ತರವಾಗಿ ಬ್ಯಾಟ್ ಮಾಡಿದ ವಿಂಡೀಸ್ ಜೇಸನ್ ಹೋಲ್ಡರ್(ಔಟಾಗದೆ 81) ಹೋರಾಟದ ಹೊರತಾಗಿಯೂ 251ಕ್ಕೆ ಆಲೌಟ್ ಆಯಿತು.
PL 2023 ಮುಂಬೈ ಅಬ್ಬರಕ್ಕೆ ಡೆಲ್ಲಿ ಗಲಿಬಿಲಿ, ಕೌರ್ ಪಡೆದ ಹ್ಯಾಟ್ರಿಕ್ ಜಯ!
162ಕ್ಕೆ 8 ವಿಕೆಟ್ ಕಳೆದುಕೊಂಡರೂ ಕೆಳಕ್ರಮಾಂಕದ ಬ್ಯಾಟರ್ಗಳ ಜೊತೆಗೂಡಿ ಹೋಲ್ಡರ್ ಅತ್ಯಮೂಲ್ಯ ರನ್ ಸೇರಿಸಿದರು. ಬಳಿಕ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ 2ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 4 ರನ್ ಗಳಿಸಿದ್ದು, ಒಟ್ಟು 73 ರನ್ ಮುನ್ನಡೆಯಲ್ಲಿದೆ.
ಟೆಸ್ಟ್: ಕಿವೀಸ್ ವಿರುದ್ಧ ಮೊದಲ ದಿನ ಲಂಕಾ 305/6
ಕ್ರೈಸ್ಟ್ಚರ್ಚ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ಮೊದಲ ದಿನ ಮೇಲುಗೈ ಸಾಧಿಸಿದೆ. ಮಂದ ಬೆಳಕಿನ ಕಾರಣ ದಿನದಾಟ 75 ಓವರ್ಗೆ ಮುಕ್ತಾಯಗೊಂಡಿದ್ದು, ಲಂಕಾ 6 ವಿಕೆಟ್ಗೆ 305 ರನ್ ಗಳಿಸಿದೆ.
14ಕ್ಕೆ 1 ವಿಕೆಟ್ ಕಳೆದುಕೊಂಡ ಬಳಿಕ ನಾಯಕ ದಿಮುತ್ ಕರುಣಾರತ್ನೆ(50) ಹಾಗೂ ಕುಸಾಲ್ ಮೆಂಡಿಸ್(87) 2ನೇ ವಿಕೆಟ್ಗೆ 137 ರನ್ ಜೊತೆಯಾಟವಾಡಿದರು. ಮ್ಯಾಥ್ಯೂಸ್ 47, ದಿನೇಶ್ ಚಾಂಡಿಮಲ್ 39 ರನ್ ಗಳಿಸಿದ್ದು, ಧನಂಜಯ ಡಿ ಸಿಲ್ವ(ಔಟಾಗದೆ 39) ಹಾಗೂ ರಜಿತಾ(ಔಟಾಗದೆ 16) ಕ್ರೀಸ್ನಲ್ಲಿದ್ದಾರೆ. ಟಿಮ್ ಸೌಥಿ 3 ವಿಕೆಟ್ ಕಿತ್ತರು.
ಡಬ್ಲ್ಯುಪಿಎಲ್: ಗಾಯಾಳು ಬೆಥ್ ಮೂನಿ ಹೊರಕ್ಕೆ
ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದ ವೇಳೆ ಮೀನಖಂಡ ಸೆಳೆತಕ್ಕೆ ತುತ್ತಾದ ಗುಜರಾತ್ ಜೈಂಟ್ಸ್ ನಾಯಕಿ ಬೆಥ್ ಮೂನಿ ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಅವರ ಬದಲು ಕಳೆದೆರಡು ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ಭಾರತದ ಆಲ್ರೌಂಡರ್ ಸ್ನೇಹ ರಾಣಾ ಟೂರ್ನಿಯ ಉಳಿದ ಪಂದ್ಯಗಳಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. ಆಶ್ಲೆ ಗಾಡ್ರ್ನರ್ ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೂನಿ ಬದಲಿಗೆ ಫ್ರಾಂಚೈಸಿಯು ದ.ಆಫ್ರಿಕಾದ ಲಾರಾ ವೂಲ್ವಾರ್ಚ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.