
ಛಟ್ಟೋಗ್ರಾಮ(ಡಿ.10): ಲಯ ಕಂಡುಕೊಳ್ಳಲು ಒದ್ದಾಡುತ್ತಿರುವ ಟೀಂ ಇಂಡಿಯಾಗೆ ಮತ್ತೊಂದು ಕಡೆ ಗಾಯಾಳುಗಳ ಸಮಸ್ಯೆ ಹೆಚ್ಚಾಗಿದ್ದು, ಬಾಂಗ್ಲಾದೇಶ ವಿರುದ್ಧ ಶನಿವಾರ ನಡೆಯಲಿರುವ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲು ಕೆ.ಎಲ್.ರಾಹುಲ್ ತಂಡ ಮುನ್ನಡೆಸಲಿದ್ದಾರೆ. ರಾಹುಲ್ ತಾವು ಸ್ಥಿರ ಆಟವಾಡಬೇಕಾದ ಒತ್ತಡದಲ್ಲಿರುವುದರ ಜೊತೆಗೆ ತಂಡವನ್ನು ವೈಟ್‌ವಾಶ್‌ನಿಂದ ಪಾರು ಮಾಡಬೇಕಾದ ಅನಿವಾರ್ಯತೆಗೂ ಸಿಲುಕಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಮೆಹಿದಿ ಹಸನ್‌ರ ಅಬ್ಬರದ ಆಟಕ್ಕೆ ಶರಣಾಗಿದ್ದ ಭಾರತ, ಈ ಪಂದ್ಯದಲ್ಲಿ ಅವರನ್ನು ನಿಯಂತ್ರಿಸಲು ಹೊಸ ದಾರಿಗಳನ್ನು ಹುಡುಕಬೇಕಿದೆ. ದೀಪಕ್ ಚಹರ್ ಹಾಗೂ ಕುಲ್ದೀಪ್ ಸೇನ್ ಸಹ ಗಾಯಗೊಂಡು ಹೊರಬಿದ್ದಿದ್ದು ಅವರ ಬದಲಿಗೆ ಸೂಕ್ತ ಆಟಗಾರರನ್ನು ಕಣಕ್ಕಿಳಿಸಬೇಕಿದೆ. ತರಾತುರಿಯಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್‌ರನ್ನು ಬಾಂಗ್ಲಾದೇಶಕ್ಕೆ ಕರೆಸಿಕೊಂಡಿರುವ ಟೀಂ ಇಂಡಿಯಾ, ಈ ಪಂದ್ಯದಲ್ಲಿ ಅವರನ್ನು ಪ್ರಮುಖ ಅಸ್ತ್ರವಾಗಿ ಉಪಯೋಗಿಸಬಹುದು. ಮತ್ತೊಂದಡೆ ಬಾಂಗ್ಲಾದೇಶ ಈ ಪಂದ್ಯವನ್ನೂ ಗೆದ್ದು ಹೊಸ ದಾಖಲೆ ಬರೆಯಲು ಕಾತರಿಸುತ್ತಿದೆ.
ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ದೊಡ್ಡ ಮೊತ್ತ ಗಳಿಸಲು ವಿಫಲವಾಗುತ್ತಿದ್ದಾರೆ. ಇನ್ನು ಆರಂಭದಲ್ಲಿ ಮಾರಕ ದಾಳಿ ನಡೆಸುವ ಟೀಂ ಇಂಡಿಯಾ ಬೌಲರ್‌ಗಳು ಕೊನೆಯ ಹಂತದಲ್ಲಿ ರನ್ ಬಿಟ್ಟುಕೊಡುತ್ತಿರುವುದು ಭಾರತ ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ. ಇದೆಲ್ಲದರ ನಡುವೆ ರೋಹಿತ್ ಶರ್ಮಾ, ದೀಪಕ್ ಚಹರ್ ಭಾರತ ತಂಡದಿಂದ ಹೊರಬಿದ್ದಿರುವುದರಿಂದ ಕೊನೆಯ ಪಂದ್ಯದಲ್ಲಿ ಭಾರತ ಮತ್ತಷ್ಟು ಸಿಲುಕಿದೆ.
Ind vs Ban: ಬಾಂಗ್ಲಾ ಎದುರಿನ 3ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಕೂಡಿಕೊಂಡ ಸ್ಟಾರ್ ಬೌಲರ್..!
ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಒಂದು ವಿಕೆಟ್ ರೋಚಕ ಜಯ ಸಾಧಿಸಿದರೆ, ಎರಡನೇ ಏಕದಿನ ಪಂದ್ಯದಲ್ಲಿ 5 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಬಾಂಗ್ಲಾದೇಶ ತಂಡವು ಇದುವರೆಗೂ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಎದುರು ಸರಣಿ ಕ್ಲೀನ್ ಸ್ವೀಪ್ ಸಾಧಿಸಿಲ್ಲ. ಹೀಗಾಗಿ ಭಾರತ ಎದುರು ಮೂರನೇ ಪಂದ್ಯ ಗೆದ್ದು ಸರಣಿ ವೈಟ್‌ವಾಷ್ ಮಾಡುವ ಲೆಕ್ಕಾಚಾರದಲ್ಲಿದೆ. ಇನ್ನೊಂದೆಡೆ ಟೀಂ ಇಂಡಿಯಾ ಕೊನೆಯ ಪಂದ್ಯದಲ್ಲಿ ಗೆದ್ದು ನೆಮ್ಮದಿಯ ನಿಟ್ಟುಸಿರು ಬಿಡಲು ಎದುರು ನೋಡುತ್ತಿದೆ.
ಸಂಭಾವ್ಯ ತಂಡಗಳು
ಭಾರತ: ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್/ರಾಹುಲ್ ತ್ರಿಪಾಠಿ, ಕೆ ಎಲ್ ರಾಹುಲ್(ನಾಯಕ&ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೋ, ಲಿಟನ್ ದಾಸ್(ನಾಯಕ), ಅನ್ಮುಲ್ ಹಕ್, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ(ವಿಕೆಟ್ ಕೀಪರ್), ಮೊಹಮದುಲ್ಲಾ, ಅಫಿಫ್ ಹೊಸೈನ್, ಮೆಹದಿ ಹಸನ್ ಮಿರಜ್, ನಸುಮ್ ಅಹಮನ್, ಎಬೊದತ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್.
ಪಂದ್ಯ: ಬೆಳಗ್ಗೆ 11.30ಕ್ಕೆ
ಪ್ರಸಾರ: ಸೋನಿ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.