Mushfiqur Rahim Retires ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಮುಷ್ಫಿಕುರ್ ..!

By Naveen KodaseFirst Published Sep 4, 2022, 12:55 PM IST
Highlights

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಮುಷ್ಫಿಕುರ್ ರಹೀಂ
ಏಷ್ಯಾಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ವಿಕೆಟ್ ಕೀಪರ್ ಬ್ಯಾಟರ್
ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗಮನ ಹರಿಸುವ ಉದ್ದೇಶದಿಂದ ಈ ನಿರ್ಧಾರ

ಢಾಕಾ(ಸೆ.04): ಬಾಂಗ್ಲಾದೇಶ ವಿಕೆಟ್ ಕೀಪರ್ ಬ್ಯಾಟರ್ ಮುಷ್ಫಿಕುರ್ ರಹೀಂ, ಭಾನುವಾರವಾದ ಇಂದು(ಸೆ.04) ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಮುಷ್ಫಿಕುರ್ ರಹೀಂ, ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ ಟೂರ್ನಿಯಲ್ಲಿ ಬಾಂಗ್ಲಾದೇಶ ಪರ ಎರಡು ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು. ಆದರೆ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್‌ ತಂಡವು ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಸೂಪರ್ 4 ಹಂತಕ್ಕೇರಲು ವಿಫಲವಾಗಿತ್ತು. ಇದರ ಬೆನ್ನಲ್ಲೇ ಮುಷ್ಫಿಕುರ್ ರಹೀಂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ.

2022ನೇ ಸಾಲಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ಎದುರು ಹೀನಾಯ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ಇಂದು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಮುಷ್ಫಿಕುರ್ ರಹೀಂ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದೇ ವೇಳೆ ತಾವು ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.

ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚು ಗಮನ ಕೇಂದ್ರೀಕರಿಸುವ ಉದ್ದೇಶದಿಂದ ನಾನಿಂದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನನ್ನ ವಿದಾಯವನ್ನು ಘೋಷಿಸುತ್ತಿದ್ದೇನೆ. ಅವಕಾಶ ಒದಗಿ ಬಂದರೆ ನಾನು ಫ್ರಾಂಚೈಸಿ ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಲಭ್ಯವಿದ್ದೇನೆ. ಮುಂಬರುವ ದಿನಗಳಲ್ಲಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ನನ್ನ ದೇಶವನ್ನು ಪ್ರತಿನಿಧಿಸಲು ಹೆಮ್ಮೆ ಪಡುತ್ತೇನೆ ಎಂದು ಮುಷ್ಫಿಕುರ್ ರಹೀಂ ಟ್ವೀಟ್ ಮಾಡಿದ್ದಾರೆ.

I would like to announce my retirement from T20 INTERNATIONALS and focus on Test and ODI formats of the game. I will be available to play franchise leagues when the opportunity arrives. Looking forward to proudly represent my nation in the two formats-MR15

— Mushfiqur Rahim (@mushfiqur15)

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮುಷ್ಫಿಕುರ್ ರಹೀಂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಬಾಂಗ್ಲಾದೇಶ ಕ್ರಿಕೆಟ್ ತಂಡದ ಪಾಲಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ. ಕಳೆದ ಜುಲೈ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಾಂಗ್ಲಾದೇಶದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ಮುಷ್ಫಿಕುರ್ ರಹೀಂ. ಈ ಮೊದಲು ಕಳೆದ ಜುಲೈನಲ್ಲಿ ಆರಂಭಿಕ ಎಡಗೈ ಬ್ಯಾಟರ್ ತಮೀಮ್ ಇಕ್ಬಾಲ್ ಕೂಡಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

ICC T20 World Cup ಟೂರ್ನಿಗೂ ಮುನ್ನ ಇಂಗ್ಲೆಂಡ್‌ಗೆ ಬಿಗ್ ಶಾಕ್..! ಸ್ಟಾರ್ ಆಟಗಾರ ಔಟ್

ಇನ್ನು ಮುಷ್ಫಿಕುರ್ ರಹೀಂ, ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆಫ್ಘಾನಿಸ್ತಾನ ಎದುರು ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ರಹೀಂ, ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಮುಷ್ಫಿಕುರ್ ರಹೀಂ, ಬಾಂಗ್ಲಾದೇಶ ಪರ 102 ಟಿ20 ಪಂದ್ಯಗಳನ್ನಾಡಿ 19.48ರ ಬ್ಯಾಟಿಂಗ್ ಸರಾಸರಿಯಲ್ಲಿ 1,500 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಮುಷ್ಫಿಕುರ್ ರಹೀಂ ಅವರ ಗರಿಷ್ಠ ವೈಯುಕ್ತಿಕ ಸ್ಕೋರ್ 72 ರನ್‌ಗಳೆನಿಸಿದೆ.

click me!