
ಢಾಕಾ(ಸೆ.14): ಮುಂಬರುವ ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಜರುಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರನ್ನೊಳಗೊಂಡ ಬಲಿಷ್ಠ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ನಿರೀಕ್ಷೆಯಂತೆಯೇ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಶಕೀಬ್ ಅಲ್ ಹಸನ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಇನ್ನು ಅಚ್ಚರಿಯ ಬೆಳವಣಿಗೆ ಎನ್ನುವಂತೆ ಮೊಹಮದುಲ್ಲಾ ರಿಯಾದ್, ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
ಈ ಮೊದಲು ಮೊಹಮದುಲ್ಲಾ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಸ್ಟಾರ್ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದ ಮೊಹಮದುಲ್ಲಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶಕೀಬ್ ಅಲ್ ಹಸನ್‌ಗೆ ನಾಯಕ ಪಟ್ಟ ಕಟ್ಟಲಾಗಿತ್ತು. ಮೊಹಮದುಲ್ಲಾ ಅವರು ಸದ್ಯ ಒಳ್ಳೆಯ ಫಾರ್ಮ್‌ನಲ್ಲಿಲ್ಲ. ಕಳೆದ ಕೆಲ ತಿಂಗಳುಗಳಲ್ಲಿ ಆಲ್ರೌಂಡರ್ ಮೊಹಮದುಲ್ಲಾ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ ಹೀಗಾಗಿ ಅವರು ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಡೈರೆಕ್ಟರ್ ಖಾಲೀದ್ ಮೊಹಮುದ್ ಸುಜೋನ್ ಹೇಳಿದ್ದಾರೆ.
ಇನ್ನು ಬರೋಬ್ಬರಿ 3 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿ, ಏಷ್ಯಾಕಪ್ ಟೂರ್ನಿಯಲ್ಲಿ ಏಕೈಕ ಪಂದ್ಯವನ್ನಾಡಿದ ಶಬ್ಬೀರ್ ರೆಹಮಾನ್, ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೇ ಗಾಯದಿಂದ ಚೇತರಿಸಿಕೊಂಡಿರುವ ನುರುಲ್ ಹಸನ್ ಸೋಹಾನ್ ಹಾಗೂ ಲಿಟನ್ ದಾಸ್ ಕೂಡಾ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಆಲ್ರೌಂಡರ್ ಮೆಹದಿ ಹಸನ್, ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲವಾಗಿದ್ದಾರೆ. ಇದೀಗ ಮೆಹದಿ ಹಸನ್, ಎಡಗೈ ಬ್ಯಾಟರ್ ಸೌಮ್ಯ ಸರ್ಕಾರ್, ಲೆಗ್ ಸ್ಪಿನ್ನರ್ ರಿಶಾದ್ ಹೊಸೈನ್ ಹಾಗೂ ಶೌರಿಫುಲ್ಲಾ ಇಸ್ಲಾಂ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.
ICC T20 World Cup Squad: ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ
ಇತ್ತೀಚೆಗಷ್ಟೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಪಪೊನ್, ನಾವು ಈ ವಿಶ್ವಕಪ್ ಅನ್ನು ಗಮದಲ್ಲಿಟ್ಟುಕೊಂಡಿಲ್ಲ, ಬದಲಾಗಿ ಮುಂದಿನ ವರ್ಷದ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಿದ್ದೇವೆ ಎಂದು ಹೇಳಿದ್ದರು. ಇನ್ನು ಬಾಂಗ್ಲಾದೇಶ ತಂಡದ ನಾಯಕರಾಗಿ ನಾಯಕತ್ವ ವಹಿಸಿಕೊಂಡ ಶಕೀಬ್ ಅಲ್ ಹಸನ್, ರಾತ್ರಿ ಬೆಳಗಾಗುವಷ್ಟರಲ್ಲಿ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಹೀಗಿದೆ ನೋಡಿ
ಶಕೀಬ್ ಅಲ್ ಹಸನ್(ನಾಯಕ), ಶಬ್ಬೀರ್ ರೆಹಮಾನ್, ಮೆಹದಿ ಹಸನ್ ಮಿರಾಜ್, ಅಫಿಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಸೈಕತ್, ಲಿಟನ್ ದಾನ್, ಯಾಸಿರ್ ಅಲಿ ಚೌಧರಿ, ನುರುಲ್ ಹಸನ್ ಶೊಹಾನ್, ಮುಷ್ತಾಫಿಜುರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹಮ್ಮದ್, ಹಸನ್ ಮೊಹಮುದ್, ನಜ್ಮುಲ್ ಹೊಸೈನ್ ಶಾಂಟೋ, ಎಬೊದತ್ ಹೊಸೈನ್, ಟಸ್ಕಿನ್ ಅಹಮ್ಮದ್.
ಮೀಸಲು ಆಟಗಾರರು:
ಸೌಮ್ಯ ಸರ್ಕಾರ್, ಮೆಹದಿ ಹಸನ್, ರಿಶಾದ್ ಹೊಸೈನ್, ಶೌರಿಫುಲ್ಲಾ ಇಸ್ಲಾಂ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.