'ನನ್ನ ಬದುಕನ್ನೇ ಬದಲಿಸಿದರು..' ಕೊಹ್ಲಿ ಬಗ್ಗೆ ಮುತ್ತಿನಂಥ ಮಾತು ಹೇಳಿದ ಪಿವಿ ಸಿಂಧು

Published : Aug 19, 2026, 07:49 PM IST
virat kohli pv sindhu

ಸಾರಾಂಶ

ಆರ್‍‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಕಿಂಗ್ ವಿರಾಟ್ ಕೊಹ್ಲಿಯ ಸಹಾಯವನ್ನು ನೆನೆದಿದ್ದಾರೆ. ಕೊಹ್ಲಿ ಬಗ್ಗೆ ಅದೆಂಥ ಗೌರವ ಇಟ್ಟುಕೊಂಡಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಬೆಂಗಳೂರು: ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಕೇವಲ ತಮ್ಮ ಕ್ರೀಡಾ ಸಾಧನೆಯಿಂದ ಮಾತ್ರವಲ್ಲ, ಪರಸ್ಪರ ಹೊಂದಿರುವ ಗೌರವ ಮತ್ತು ಬಾಂಧವ್ಯದಿಂದಲೂ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಆರ್‌ಸಿಬಿ ಪಾಡ್‌ಕಾಸ್ಟ್ ನಲ್ಲಿ (RCB Podcast) ಭಾಗವಹಿಸಿದ್ದ ಸಿಂಧು, ವಿರಾಟ್ ಕೊಹ್ಲಿ ಅವರನ್ನು ತಮ್ಮ 'ಸಹೋದರ' ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಹಂತದಲ್ಲಿದ್ದಾಗ ವಿರಾಟ್ ನೀಡಿದ ಒಂದು ಅಮೂಲ್ಯ ಸಲಹೆ ಹೇಗೆ ತಮ್ಮ ದೃಷ್ಟಿಕೋನವನ್ನೇ ಬದಲಿಸಿತು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಪಿವಿ ಸಿಂಧು ಹೇಳಿದ್ದು ಹೀಗಿದೆ..

ನನ್ನ ವೃತ್ತಿಜೀವನದ ಅತ್ಯಂತ ಕೆಟ್ಟ ದಿನಗಳನ್ನ ಎದುರಿಸುತ್ತಿದ್ದಾಗ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿದ್ದೆ. ಆಗ ನಾನು ಅವರಿಗೆ ತುಂಬಾ ಬೇಸರದಿಂದಲೇ ಹೇಳಿದ್ದೆ - ವಿರಾಟ್, ನನ್ನ ಪಾಲಿಗೆ ಯಾವುದೂ ಸರಿಯಾಗಿ ನಡೆಯುತ್ತಿಲ್ಲ, ನಾನು ತುಂಬಾ ಕಷ್ಟಪಡುತ್ತಿದ್ದೇನೆ ಅಂತಾ. ಆಗ ಅವರು ನನಗೆ ಯಾವುದೇ ಉದ್ದನೆಯ ಭಾಷಣ ಮಾಡಲಿಲ್ಲ ಅಥವಾ ಸಂಕೀರ್ಣವಾದ ಸಲಹೆಗಳನ್ನು ನೀಡಲಿಲ್ಲ. ಬದಲಾಗಿ ಅವರು ಹೇಳಿದ್ದು ಒಂದೇ ಮಾತು..

ಬರಿ ಮೈದಾನಕ್ಕೆ ಇಳಿ (Show up), ನಿನ್ನ ಆಟ ಆಡು ಮತ್ತು ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ' ಎಂದಿದ್ದರು. ಕೊಹ್ಲಿ ಅಂದು ಹೀಗೆ ವಿವರಿಸಿದ್ದರು - ನೀನು ಇದುವರೆಗೆ ಎಷ್ಟು ಕಠಿಣ ಪರಿಶ್ರಮ ಪಟ್ಟಿದ್ದೀಯೋ ಆ ಶ್ರಮದ ಮೇಲೆ ನಿನಗೆ ವಿಶ್ವಾಸವಿರಲಿ. ನೀನು ನಿಜವಾಗಿ ಯಾರು ಮತ್ತು ನಿನ್ನ ಸಾಮರ್ಥ್ಯವೇನು ಎಂಬುದನ್ನು ಜಗತ್ತಿಗೆ ತೋರಿಸಿಕೊಡು. ಅವರ ಈ ಚಿಕ್ಕ ಮಾತು ನನ್ನ ಮನಸ್ಸಿನ ಮೇಲೆ ಎಂತಹ ಪ್ರಭಾವ ಬೀರಿತೆಂದರೆ ಅಂದಿನಿಂದ ನಾನು ಪರಿಸ್ಥಿತಿಗಳನ್ನು ನೋಡುವ ರೀತಿಯೇ ಬದಲಾಯಿತು. ನನ್ನ ಆಲೋಚನಾ ಕ್ರಮವೇ ಪೂರ್ತಿ ಬದಲಾಗಿ ನಾನು ಮತ್ತೆ ಪುಟಿದೆದ್ದೆ.

ಅವರು ನನಗೆ ಅಣ್ಣನಿದ್ದಂತೆ

ನಾನು ವಿರಾಟ್ ಅವರನ್ನು ನನ್ನ ಸ್ವಂತ ಅಣ್ಣನಂತೆ ಭಾವಿಸುತ್ತೇನೆ. ನಾವು ಪ್ರತಿದಿನ ಸಿಗದೇ ಇರಬಹುದು, ಆದರೆ ನಾನು ಏನನ್ನಾದರೂ ಸಾಧಿಸಿದಾಗ ಅಥವಾ ನನಗೆ ತುಂಬಾ ಖುಷಿಯಾದಾಗ ಆ ಸಂಭ್ರಮವನ್ನು ವಿರಾಟ್ ಜೊತೆ ಹಂಚಿಕೊಳ್ಳುತ್ತೇನೆ. ಮೈದಾನದಲ್ಲಿ ಅವರು ತೋರುವ ಆಕ್ರಮಣಕಾರಿ ಆಟ, ಅವರ ಗೆಲುವಿನ ಹಸಿವು ಮತ್ತು ಅವರು ಬೆಳೆದು ಬಂದ ಹಾದಿ ನನಗೆ ಯಾವಾಗಲೂ ದೊಡ್ಡ ಸ್ಫೂರ್ತಿ

-ಪಿವಿ ಸಿಂಧು, ಬ್ಯಾಡ್ಮಿಂಟನ್ ತಾರೆ

ಕ್ರೀಡಾಲೋಕದ ಇಬ್ಬರು ಧ್ರುವತಾರೆಗಳು..

ಒಲಿಂಪಿಕ್‌ನಲ್ಲಿ ಎರಡು ಪದಕ ಗೆದ್ದಿರುವ ಪಿವಿ ಸಿಂಧು ಮತ್ತು ಕ್ರಿಕೆಟ್ ಲೋಕದ ದಾಖಲೆ ವಿರಾಟ್ ಕೊಹ್ಲಿ ನಡುವಿನ ಈ ಬಾಂಧವ್ಯ ಕೇವಲ ಕ್ರೀಡಾಪಟುಗಳ ನಡುವಿನ ಗೆಳೆತನವಲ್ಲ, ಬದಲಾಗಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲುವ ಸುಂದರ ಸಂಬಂಧಕ್ಕೆ ಸಾಕ್ಷಿಯಾಗಿದೆ. ಸದ್ಯ ಸಿಂಧು ಅವರು ದೆಹಲಿಯಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದು, ಮೊದಲ ಪಂದ್ಯದಲ್ಲೇ ಐರ್ಲೆಂಡ್‌ನ ಸೋಫಿಯಾ ನೋಬಲ್ ಅವರನ್ನು ಸೋಲಿಸಿ ಶುಭಾರಂಭ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs SL 1st Test: ಮಾನವ್ ಸುತಾರ್ ಅಲ್ಲ, ಈತನಿಂದಲೇ ಗೆಲುವು ಸಿಕ್ತು; ಸ್ವಲ್ಪ ಗಲಿಬಿಲಿ ಆಯ್ತು ಎಂದ ಕ್ಯಾಪ್ಟನ್ ಗಿಲ್
IND vs SL: 10 ವಿಕೆಟ್‌ಗಳ ಬೇಟೆ, ಆದರೂ ಅವಾರ್ಡ್ ಬೇರೊಬ್ಬನಿಗೆ! ಮಾನವ್ ಸುಥಾರ್‌ಗೆ ಯಾಕೆ ಮೋಸ?