
ಪಲ್ಲೆಕೆಲೆ: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಸ್ಟಾರ್ ಆಟಗಾರ ಬಾಬರ್ ಅಜಂ ಒಂದು ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಚುಟುಕು ವಿಶ್ವಕಪ್ ಇತಿಹಾಸದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ, ಅತಿ ಕಡಿಮೆ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಎಂಬ ಕೆಟ್ಟ ದಾಖಲೆ ಈಗ ಬಾಬರ್ ಹೆಸರಿನಲ್ಲಿದೆ. ಮಂಗಳವಾರ ಪಲ್ಲೆಕೆಲೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೂಪರ್ 8 ಪಂದ್ಯದಲ್ಲಿ ಅವರ ನಿಧಾನಗತಿಯ ಆಟವೇ ಈ ದಾಖಲೆಗೆ ಕಾರಣವಾಯಿತು.
ಇಂಗ್ಲೆಂಡ್ ವಿರುದ್ಧದ ಈ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಬಾಬರ್ ಅಜಂ 24 ಎಸೆತಗಳಲ್ಲಿ ಕೇವಲ 25 ರನ್ ಗಳಿಸಲಷ್ಟೇ ಶಕ್ತರಾದರು. ಜೇಮಿ ಓವರ್‌ಟನ್‌ರ ಬೌಲಿಂಗ್‌ನಲ್ಲಿ ಬಾಬರ್ ಬೌಲ್ಡ್ ಆದರು. ಅವರ ಇನಿಂಗ್ಸ್‌ನಲ್ಲಿ ಇದ್ದಿದ್ದು ಕೇವಲ ಎರಡು ಬೌಂಡರಿಗಳು ಮಾತ್ರ. ಈ ಬಾರಿಯ ವಿಶ್ವಕಪ್‌ನ 6 ಪಂದ್ಯಗಳಿಂದ ಬಾಬರ್ ಗಳಿಸಿದ್ದು ಕೇವಲ 91 ರನ್ ಮಾತ್ರ.
ಟಿ20 ವಿಶ್ವಕಪ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಬಾಬರ್ ಅಜಂ ಅವರ ಸ್ಟ್ರೈಕ್ ರೇಟ್ ಕೇವಲ 111.5 ಆಗಿದೆ. ಈ ಮೂಲಕ ಅವರು ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಈ ಹಿಂದೆ, ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ 111.8 ಸ್ಟ್ರೈಕ್ ರೇಟ್‌ನೊಂದಿಗೆ ಈ ಕೆಟ್ಟ ದಾಖಲೆ ಹೊಂದಿದ್ದರು. ಈಗ ಬಾಬರ್ ಅವರನ್ನು ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲ, ಕುಮಾರ್ ಸಂಗಕ್ಕಾರ (112.2), ಕೇನ್ ವಿಲಿಯಮ್ಸನ್ (112.5) ಮತ್ತು ಮೊಹಮ್ಮದ್ ರಿಜ್ವಾನ್ (113.0) ಅವರನ್ನೂ ಬಾಬರ್ ಈ ವಿಚಾರದಲ್ಲಿ ಹಿಂದೆ ಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪವರ್‌ಪ್ಲೇ ವೇಳೆ ನಾಯಕ ಸಲ್ಮಾನ್ ಆಗಾ ಔಟಾದ ನಂತರ ಬಾಬರ್ ಕ್ರೀಸ್‌ಗೆ ಬಂದಿದ್ದರು.
ಜೋಫ್ರಾ ಆರ್ಚರ್ ಎಸೆದ ಐದನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸುವ ಮೂಲಕ ಬಾಬರ್ ಉತ್ತಮ ಆರಂಭವನ್ನೇ ಪಡೆದಿದ್ದರು. ಆಗ 6 ಎಸೆತಗಳಲ್ಲಿ 10 ರನ್ ಗಳಿಸಿ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ, ಆ ನಂತರ ಅವರಿಂದ ಒಂದೇ ಒಂದು ಬೌಂಡರಿ ಗಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ, ಜೇಮಿ ಓವರ್‌ಟನ್ ಎಸೆದ 11ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದರು. ಆಗ ಅವರ ಸ್ಕೋರ್ 24 ಎಸೆತಗಳಲ್ಲಿ 25 ರನ್ ಆಗಿತ್ತು.
ಹಿಂದೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಬಾಬರ್, ಈ ವಿಶ್ವಕಪ್‌ನಲ್ಲಿ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿನ ಈ ಬದಲಾವಣೆಯು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಮ್ಮ ಟಿ20 ವೃತ್ತಿಜೀವನದಲ್ಲಿ 135 ಇನ್ನಿಂಗ್ಸ್‌ಗಳಿಂದ 4571 ರನ್ ಗಳಿಸಿರುವ ಬಾಬರ್, 128.18ರ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದರೆ ವಿಶ್ವಕಪ್‌ನಲ್ಲಿ ಇದು 111.5ಕ್ಕೆ ಕುಸಿದಿರುವುದು ಪಾಕಿಸ್ತಾನ ತಂಡಕ್ಕೆ ದೊಡ್ಡ ತಲೆನೋವಾಗಿದೆ.
ಪಲ್ಲೆಕೆಲ್ಲೆ: ಹ್ಯಾರಿ ಬ್ರೂಕ್‌ರ ಅಮೋಘ ಶತಕದ ನೆರವಿನಿಂದ 2026ರ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಇಂಗ್ಲೆಂಡ್ ಪಾತ್ರವಾಗಿದೆ. ಪಾಕಿಸ್ತಾನ ವಿರುದ್ಧ ಮಂಗಳವಾರ ಇಲ್ಲಿ ನಡೆದ ಸೂಪರ್-8 ಹಂತದ ಪಂದ್ಯದಲ್ಲಿ ಇಂಗ್ಲೆಂಡ್ 2 ವಿಕೆಟ್ ರೋಚಕ ಗೆಲುವು ಸಾಧಿಸಿತು.
ಪಾಕ್‌ನ ಮೊದಲ ಪಂದ್ಯ ಮಳೆಗೆ ಬಲಿಯಾಗಿತ್ತು. ಇದೀಗ ಈ ಪಂದ್ಯದಲ್ಲಿ ಎದುರಾದ ಸೋಲಿನಿಂದಾಗಿ, ಪಾಕಿಸ್ತಾನದ ಸೆಮೀಸ್ ಆಸೆಗೆ ಬಲವಾದ ಪೆಟ್ಟು ಬಿದ್ದಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 9 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಸಾಹಿಬ್‌ಝಾದ ಫರ್ಹಾನ್ 63 ರನ್ ಗಳಿಸಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್, 58 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಾಯಕ ಬ್ರೂಕ್ 50 ಎಸೆತದಲ್ಲಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. 51 ಎಸೆತದಲ್ಲಿ 10 ಬೌಂಡರಿ, 4 ಸಿಕ್ಸರ್‌ನೊಂದಿಗೆ 100 ರನ್ ಗಳಿಸಿ ಔಟಾದರು. ವಿಲ್ ಜ್ಯಾಕ್ಸ್‌ರ 28 ರನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. 19.1 ಓವರಲ್ಲಿ ಇಂಗ್ಲೆಂಡ್ ಜಯಿಸಿತು.
ಸ್ಕೋರ್: ಪಾಕ್ 20 ಓವರಲ್ಲಿ 164/9 (ಫರ್ಹಾನ್ 63, ಡಾಸನ್ 3-24, ಆರ್ಚರ್ 2-32), ಇಂಗ್ಲೆಂಡ್ 19.1 ಓವರಲ್ಲಿ 166/8 (ಬ್ರೂಕ್ 100, ಜ್ಯಾಕ್ಸ್ 28, ಅಫ್ರಿದಿ 4-30)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.