
ಬೆಂಗಳೂರು(ಡಿ.27): ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅನೇಕ ಪ್ರತಿಭಾವಂತರಿಗೆ ಜೀವನ ಕಟ್ಟಿಕೊಟ್ಟಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ವರ್ಷದಿಂದ ವರ್ಷಕ್ಕೆ ಐಪಿಎಲ್‌ನಿಂದಾಗಿ ಅನೇಕರ ಬದುಕು ಬದಲಾಗುತ್ತಿದೆ. ಅಂತಹ ಪ್ರಸಂಗ ಇತ್ತೀಚೆಗೆ ನಡೆದ 16ನೇ ಆವೃತ್ತಿಯ ಮಿನಿ ಹರಾಜಿನಲ್ಲೂ ನಡೆಯಿತು. ಹರಾಜು ಪ್ರಕ್ರಿಯೆ ಅಂತಿಮ ಕ್ಷಣಗಳಲ್ಲಿ ಆರ್‌ಸಿಬಿ, ಕೆಕೆಆರ್ ಜೊತೆ ಪೈಪೋಟಿ ನಡೆಸಿ ಅವಿನಾಶ್ ಸಿಂಗ್ ಎನ್ನುವ ಆಟಗಾರನನ್ನು 60 ಲಕ್ಷ ರು.ಗೆ ಖರೀದಿಸಿತು.
ಯಾರು ಅವಿನಾಶ್ ಸಿಂಗ್?
24 ವರ್ಷದ ಈತ ಜಮ್ಮು-ಕಾಶ್ಮೀರದ ವೇಗದ ಬೌಲರ್. ಹಾಗಂತ ದೇಸಿ ಕ್ರಿಕೆಟ್‌ನಲ್ಲಿ ಗಮನಾರ್ಹ ಆಟವಾಡಿ ಹೆಸರೇನೂ ಸಂಪಾದಿಸಿಲ್ಲ. ಈ ಪ್ರತಿಭೆ ಎಷ್ಟರ ಮಟ್ಟಿಗೆ ಅಪರಿಚಿತ ಎಂದರೆ ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು, ಆಟಗಾರರಿಗೇ ಈತನ ಬಗ್ಗೆ ಗೊತ್ತಿಲ್ಲ. ಅವಿನಾಶ್ ಸಿಂಗ್ ಎನ್ನುವ ಹೆಸರನ್ನೇ ಅನೇಕರೂ ಕೇಳಿರಲಿಲ್ಲ. ಈತ ರಾಜ್ಯ ತಂಡದ ಪರ ಇನ್ನೂ ಒಂದೂ ಪಂದ್ಯ ಆಡಿಲ್ಲ.ಉಮ್ರಾನ್ ಮಲಿಕ್‌ರಂತೆ ಟೆನಿಸ್ ಬಾಲ್ ಕ್ರಿಕೆಟ್ ಆಡಿಕೊಂಡಿದ್ದ ಅವಿನಾಶ್ 10 ತಿಂಗಳ ಹಿಂದಷ್ಟೇ ಲೆದರ್ ಬಾಲ್‌ನಲ್ಲಿ ಬೌಲ್ ಮಾಡಲು ಶುರು ಮಾಡಿದರು. ಇವರನ್ನು ಸ್ಥಳೀಯ ಪಂದ್ಯಾವಳಿಯಲ್ಲಿ ಕಂಡ ಮಯಾಂಕ್ ಗೋಸ್ವಾಮಿ ಎನ್ನುವ ಕೋಚ್ ಲೆದರ್ ಬಾಲ್ ಬೌಲಿಂಗ್‌ಗೆ ಪರಿಚಯಿಸಿದರು.
IPL 2023 ಹರಾಜಿನ ಬಳಿಕ ಆರ್‌ಸಿಬಿ ತಂಡ ಹೀಗಿದೆ, ಈ ಬಾರಿ ಇದೆಯಾ ಟ್ರೋಫಿ ಅವಕಾಶ?
ಅವಿನಾಶ್‌ರ ತಂದೆ ಆಟೋ ಚಾಲಕ. ಮನೆಯಲ್ಲಿ ದುಡಿಯುತ್ತಿರುವ ಏಕೈಕ ವ್ಯಕ್ತಿ. ತಮ್ಮ ಇಬ್ಬರು ಸಹೋದರರು ಇನ್ನೂ ವಿದ್ಯಾಭ್ಯಾಸ ನಡೆಸುತ್ತಿರುವ ಕಾರಣ ಕುಟುಂಬಕ್ಕೆ ಸಹಾಯ ಮಾಡಲು ಕೆಲಸ ಅರಸಿ ಕೆನಡಾಕ್ಕಾಗಿ ವಲಸೆ ಹೊರಟ್ಟಿದ್ದರು. ಈ ನಡುವೆ ಕೋಚ್ ಗೋಸ್ವಾಮಿಗೆ ಅವಿನಾಶ್‌ರ ಪ್ರತಿಭೆ ಹಾಳಾಗುವುದು ಇಷ್ಟವಿರಲಿಲ್ಲ. ಒಂದೇ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿ, ಅವಿನಾಶ್‌ರ ತಂದೆಯ ಮನವೊಲಿಸಿದರು. ಬಳಿಕ ಅವಿನಾಶ್‌ರನ್ನು 3 ತಿಂಗಳ ಕಾಲ ಪುಣೆಗೆ ಅಶೋಕ್ ಗಾಯಕ್ವಾಡ್ ಬಳಿ ತರಬೇತಿಗೆ ಕಳುಹಿಸಿದರು.
ಪುಣೆಯಲ್ಲಿ ಬದಲಾದ ಬದುಕು
ಅವಿನಾಶ್ ಬಳಿ ಸ್ಪೈಕ್ ಶೂ, ಕ್ರಿಕೆಟ್ ಕಿಟ್ ಖರೀದಿಸಲು ಹಣವಿರಲಿಲ್ಲ. ಕೋಚ್ ಗೋಸ್ವಾಮಿ ಹಾಗೂ ಇನ್ನಿತರ ಸ್ನೇಹಿತರು ಸೇರಿ ಕಿಟ್ ಕೊಡಿಸಿದರಂತೆ. ಪುಣೆಯಲ್ಲಿ ಪಳಗಿದ ಅವಿನಾಶ್, ಆರ್‌ಸಿಬಿ ತಂಡ ಜಮ್ಮುವಿನಲ್ಲಿ ಆಯ್ಕೆ ಟ್ರಯಲ್ಸ್ ನಡೆಸುವ ವೇಳೆಗೆ ಲೆದರ್ ಬಾಲ್‌ನಲ್ಲಿ ಬೌಲ್ ಮಾಡಲು ಕಲಿತಿದ್ದರು. ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲ್ ಮಾಡುವ ಮೂಲಕ ಆರ್‌ಸಿಬಿ ತರಬೇತುದಾರರ ಗಮನ ಸೆಳೆದ ಅವಿನಾಶ್‌ರನ್ನು ಕೆಕೆಆರ್, ಲಖನೌ ಸೇರಿ ಇನ್ನೂ ಕೆಲ ತಂಡಗಳು ಟ್ರಯಲ್ಸ್‌ಗೆ ಕರೆದು 2023ರ ಆವೃತ್ತಿಯಲ್ಲಿ ನೆಟ್ ಬೌಲರ್ ಆಗಿ ಕೆಲಸ ಮಾಡುವಂತೆ ಕೇಳಿದವಂತೆ. ಆದರೆ ಆರ್‌ಸಿಬಿ ಹಠಕ್ಕೆ ಬಿದ್ದು, ಈ ವರ್ಷವೇ ಅವರನ್ನು ಐಪಿಎಲ್‌ಗೆ ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಹರಾಜಿಗೆ ನೋಂದಣಿ ಮಾಡುವಂತೆ ಸೂಚಿಸಿತು ಎಂದು ಮಾಧ್ಯಮವೊಂದು ತಿಳಿಸಿದೆ. ಅಂದಹಾಗೆ, ಅವಿನಾಶ್ ಆರ್‌ಸಿಬಿ ಟ್ರಯಲ್ಸ್ ವೇಳೆ 154.3 ಕಿ.ಮೀ. ವೇಗದ ಎಸೆತವೊಂದನ್ನು ಬೌಲ್ ಮಾಡಿದರು ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.