ಭಾರತ ವಿರುದ್ದದ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಕೂಡಿಕೊಳ್ಳಲಿದ್ದಾರೆ ಮಾರಕ ವೇಗಿ. ಗಾಯದ ಸಮಸ್ಯೆಯಿಂದ ತತ್ತರಿಸಿಹೋಗಿದ್ದ ಕಾಂಗರೂ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದ ಎಡಗೈ ವೇಗಿ. ಯಾರು ಆ ಬೌಲರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಸಿಡ್ನಿ(ಡಿ.13): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ತಂಡ ಕೂಡಿಕೊಂಡಿದ್ದಾರೆ. ಎಡಗೈ ವೇಗಿಯ ಆಗಮನ ಅಸೀಸ್ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಗಾಯದ ಸಮಸ್ಯೆ ಹಾಗೂ ವೈಯುಕ್ತಿಕ ಕಾರಣಗಳಿಂದ ಭಾರತ ವಿರುದ್ದದ ಕೊನೆಯ ಏಕದಿನ ಹಾಗೂ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಪಿಂಕ್ ಬಾಲ್ ಟೆಸ್ಟ್‌ಗೆ ತಾವು ಲಭ್ಯವಿರುವುದಾಗಿ ಮಿಚೆಲ್ ಸ್ಟಾರ್ಕ್ ತಿಳಿಸಿದ್ದಾರೆಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲ ಟೆಸ್ಟ್: ಆಸೀಸ್‌ಗೆ ಆರಂಭಿಕರ ಕೊರತೆ..!
ಮಿಚೆಲ್ ಸ್ಟಾರ್ಕ್ ತಂಡ ಕೂಡಿಕೊಳ್ಳುತ್ತಿರುವುದಕ್ಕೆ ಸಹ ಆಟಗಾರ ಜೋಸ್ ಹ್ಯಾಜಲ್‌ವುಡ್ ಸಂತಸ ವ್ಯಕ್ತಪಡಿಸಿದ್ದಾರೆ. ಸ್ಟಾರ್ಕ್ ಆಸೀಸ್ ತಂಡ ಸೇರಿಕೊಳ್ಳುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಪಿಂಕ್ ಬಾಲ್ ಪಂದ್ಯಗಳಲ್ಲಿ ಸ್ಟಾರ್ಕ್ ಎಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಅಂಕಿ-ಅಂಶಗಳೇ ಹೇಳುತ್ತವೆ. ಸ್ಟಾರ್ಕ್ ತಂಡ ಕೂಡಿಕೊಳ್ಳುತ್ತಿರುವುದನ್ನು ನಾವು ಮುಕ್ತಾವಾಗಿ ಆಹ್ವಾನಿಸುತ್ತಿದ್ದೇವೆ ಎಂದು ಜೋಸ್ ಹ್ಯಾಜಲ್‌ವುಡ್ ಹೇಳಿದ್ದಾರೆ.
ಈಗಾಗಲೇ ಆಸ್ಟ್ರೇಲಿಯಾ ತಂಡ ಪ್ರಮುಖ ಆಟಗಾರ ಡೇವಿಡ್ ವಾರ್ನರ್, ವಿಲ್ ಪುಕೊವಿಸ್ಕಿ ಗಾಯಕ್ಕೆ ತುತ್ತಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಇದೀಗ ಸ್ಟಾರ್ಕ್ ತಂಡ ಕೂಡಿಕೊಳ್ಳುತ್ತಿರುವುದು ಆಸ್ಟ್ರೇಲಿಯಾ ತಂಡಕ್ಕೆ ಇನ್ನಷ್ಟು ಬಲ ಬಂದಂತೆ ಆಗಿದೆ.