Australia Ball Tampering: ಎಷ್ಟು ವಿಶ್ವಕಪ್’ಗಳನ್ನು ಗೆದ್ದರೇನು..? ನೀವು ಎಂದೆಂದಿಗೂ ಮೋಸಗಾರರೇ..!

Published : Nov 21, 2026, 10:09 AM IST
ball tampering

ಸಾರಾಂಶ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ 2018ರ 'ಬಾಲ್ ಟ್ಯಾಂಪರಿಂಗ್' ಹಗರಣದ ಹಿಂದಿನ ಸತ್ಯವನ್ನು ಈಗ ಆಟಗಾರರು ಬಾಯಿಬಿಡುತ್ತಿದ್ದಾರೆ. ಉಸ್ಮಾನ್ ಖವಾಜ, ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾಂಕ್ರಾಫ್ಟ್ ಇಡೀ ತಂಡದ ಶಾಮೀಲುವಿಕೆಯನ್ನು ದೃಢಪಡಿಸಿದ್ದಾರೆ. ಸ್ಟಾರ್ಕ್, ಕಮಿನ್ಸ್ ಮುಂತಾದವರ ಪಾತ್ರವೂ ಈಗ ಜಗತ್ತಿನ ಮುಂದೆ ಬೆತ್ತಲಾಗಿದೆ.

  • ಸುದರ್ಶನ್, ಏಷ್ಯಾನೆಟ್ ಸುವರ್ಣ ನ್ಯೂಸ್

ಒಬ್ಬ ಸತ್ಯ ಹೇಳಿದ. ಅವನನ್ನು ಹೀಯಾಳಿಸಿದರು. ಹೇಗೆ ಗೊತ್ತೇ..? ‘’ಅಯ್ಯಾ ಪಾಕಿಸ್ತಾನಿ.. ನಿನ್ನ ಮೂಲ ದೇಶದ ಕ್ರಿಕೆಟ್ ತಂಡದಲ್ಲಿ ಅದೆಷ್ಟು ಕ್ರೈಸ್ತರಿಗೆ ಅವಕಾಶ ಕೊಟ್ಟಿದ್ದಾರೆ..? ನಾವು ನೋಡು.. ಒಬ್ಬ ಮುಸ್ಲಿಮನನ್ನು ನಮ್ಮ ತಂಡದಲ್ಲಿ ಆಡಿಸಿದ್ದೇವೆ. ಅದಕ್ಕಾಗಿ ನೀನು ನಮಗೆ ಒಳ್ಳೆಯ ಬಹುಮಾನವನ್ನೇ ಕೊಟ್ಟು ಬಿಟ್ಟೆ..’’

ಮತ್ತೊಬ್ಬನೂ ಅದೇ ಸತ್ಯವನ್ನು ಹೇಳಿದ.. ‘’ಅವನು ಸುಳ್ಳು ಹೇಳುತ್ತಿದ್ದಾನೆ, ಅವನನ್ನು ನಂಬಬೇಡಿ..’’ ಎಂದರು.. ‘’ಇಬ್ಬರು ಹೇಳಿದ್ದು ಸತ್ಯ, ಸತ್ಯ, ಸತ್ಯ..’’ ಎಂದು ಮೂರನೆಯವನೂ ಘಂಟಾಘೋಷವಾಗಿ ಹೇಳಿದ.. ಆದರೂ ಇವರದ್ದು ಮತ್ತದೇ ಭಂಡ ವಾದ.. ಆದರೆ.. ನಾವು ಸತ್ಯ ಹರಿಶ್ಚಂದ್ರರು.. ಅವರು ಸುಳ್ಳುಗಾರರು ಎಂದವರು ಜಗತ್ತಿನ ಮುಂದೆ ಬೆತ್ತಲಾಗಿದ್ದಾರೆ.

2018, ಮಾರ್ಚ್ 24..

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ಕೇಪ್’ಟೌನ್’ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಪಂದ್ಯದ 3ನೇ ದಿನದಾಟ..

ದಕ್ಷಿಣ ಆಫ್ರಿಕಾ 43 ಓವರ್’ಗಳಲ್ಲಿ 2 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿದ್ದ ಸಂದರ್ಭ. ಏಡನ್ ಮಾರ್ಕ್ರಮ್ ಮತ್ತು ಎಬಿ ಡಿವಿಲಿಯರ್ಸ್ ಆಸೀಸ್ ಬೌಲರ್’ಗಳನ್ನು ಇನ್ನಿಲ್ಲದಂತೆ ಕಾಡಿ ಬಿಟ್ಟರು. ಮಿಚೆಲ್ ಸ್ಟಾರ್ಕ್ , ಜೋಶ್ ಹೇಜಲ್’ವುಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಮಾರ್ಷ್, ನೇಥನ್ ಲಯಾನ್.. ಹೀಗೆ ಯಾರಿಗೂ ಹರಿಣಗಳನ್ನು ಅಲುಗಾಡಿಸಲಾಗಲಿಲ್ಲ.. ವಿಕೆಟ್ ಪಡೆಯಲಾಗದ ಹತಾಶೆ.. ಕಾಂಗರೂಗಳು ಮೋಸದಾಟಕ್ಕೆ ಇಳಿದು ಬಿಟ್ಟರು.

ಕ್ಷೇತ್ರರಕ್ಷಣೆ ಮಾಡುತ್ತಿದ್ದ ಆಸ್ಟ್ರೇಲಿಯಾ ಆರಂಭಿಕರಾದ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಪ್ಯಾಂಟ್ ಜೇಬಿನಿಂದ ಸ್ಯಾಂಡ್ ಪೇಪರ್ (ಮರಕ್ಕೆ ಪಾಲಿಶ್ ಮಾಡುವ ದಪ್ಪ ಕಾಗದ) ಹೊರ ತೆಗೆಯುತ್ತಾನೆ. ಚೆಂಡಿನ ಒಂದು ಭಾಗವನ್ನು ಚೆನ್ನಾಗಿ ಉಜ್ಜುತ್ತಾನೆ. ಚೆಂಡು ಇನ್ನೂ ಹಳೆಯದಾಗಿರಲಿಲ್ಲ. ಎರಡೂ ಕಡೆ ಹೊಳಪು ಹಾಗೇ ಇತ್ತು. ಆಸ್ಟ್ರೇಲಿಯಾ ಬೌಲರ್’ಗಳು ರಿವರ್ಸ್ ಸ್ವಿಂಗ್ ಅಸ್ತ್ರವನ್ನು ಪ್ರಯೋಗಿಸಲು ಬಯಸಿದ್ದರು.

ಚೆಂಡು ರಿವರ್ಸ್ ಸ್ವಿಂಗ್ ಆಗಬೇಕೆಂದರೆ ಕ್ರಿಕೆಟ್ ಬಾಲ್’ನ ಒಂದು ಬದಿ ಹೊಳೆಯುತ್ತಿರಬೇಕು, ಮತ್ತೊಂದು ಬದಿ ಹೊಳಪು ಕಳೆದುಕೊಂಡು ಸವೆದಿರಬೇಕು. ಆಗ ಬೌಲರ್ ಎಸೆದ ಚೆಂಡಿನ ಹೊಳಪಿನ ಭಾಗದತ್ತ ಗಾಳಿ ವೇಗವಾಗಿ ನುಗ್ಗುತ್ತದೆ. ನೇರವಾಗಿ ನುಗ್ಗುತ್ತಿರುವ ಚೆಂಡು ಹೊಳಪಿರುವ ಭಾಗದ ಕಡೆ ಇದಕ್ಕಿದ್ದಂತೆ ದಿಕ್ಕು ಬದಲಿಸುತ್ತದೆ. ಅದನ್ನು ರಿವರ್ಸ್ ಸ್ವಿಂಗ್ ಎನ್ನಲಾಗುತ್ತದೆ. ಆ ರಿವರ್ಸ್ ಸ್ವಿಂಗ್’ಗಾಗಿ ಆಸ್ಟ್ರೇಲಿಯಾ ತಂಡ ಚೆಂಡನ್ನೇ ವಿರೂಪಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕಿತು. ಚೆಂಡನ್ನು ಬಟ್ಟೆಯಿಂದ ಉಜ್ಜುತ್ತಿದ್ದ ಕ್ಯಾಮರೂನ್ ಬ್ಯಾಂಕ್ರಾಫ್ಟ್’ಗೆ ಈ ಘನಂಧಾರಿ ಕೆಲಸವನ್ನು ನೀಡಲಾಯಿತು. ಆತ ಸ್ಯಾಂಡ್ ಪೇಪರ್’ನಿಂದ ಚೆಂಡನ್ನು ಉಜ್ಜುತ್ತಿದ್ದಾಗ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದ.

ಜಗತ್ತಿನ ಮುಂದೆ ಸತ್ಯ ಬಿಚ್ಚಿಟ್ಟ ಖವಾಜ

ಬ್ಯಾಂಕ್ರಾಫ್ಟ್ ಜೊತೆಗೆ ಆಗಿನ ಆಸ್ಟ್ರೇಲಿಯಾ ತಂಡದ ನಾಯರ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್’ರನ್ನು ಒಂದು ವರ್ಷ ಕ್ರಿಕೆಟ್’ನಿಂದ ಬ್ಯಾನ್ ಮಾಡಲಾಯಿತು. ಅಪರಾಧದಲ್ಲಿ ಇಡೀ ಆಸ್ಟ್ರೇಲಿಯಾ ತಂಡವೇ ಭಾಗಿಯಾಗಿತ್ತು. ಶಿಕ್ಷೆಯಾದದ್ದು ಮೂವರಿಗೆ. 8 ವರ್ಷಗಳ ಹಿಂದಿನ ಆ ಕಳ್ಳಾಟವನ್ನು ಅಂದು ಮೈದಾನದಲ್ಲಿದ್ದ ಆಸೀಸ್ ಆಟಗಾರ ಉಸ್ಮಾನ್ ಖವಾಜ ಕೆಲ ದಿನಗಳ ಹಿಂದೆ ಜಗತ್ತಿನ ಮುಂದೆ ತೆರೆದಿಟ್ಟಿದ್ದ. ಮೋಸದಾಟದಲ್ಲಿ ಇಡೀ ತಂಡದ ಪಾತ್ರ ಇತ್ತು ಎಂದಾಗ ಆಸ್ಟ್ರೇಲಿಯಾ ತಂಡದ ಈಗಿನ ನಾಯಕ ಪ್ಯಾಟ್ ಕಮಿನ್ಸ್, ವೇಗಿ ಮಿಚೆಲ್ ಸ್ಟಾರ್ಕ್ ‘ಇದೆಲ್ಲಾ ಸುಳ್ಳು’ ಎಂದರು. ಆಸ್ಟ್ರೇಲಿಯಾ ತಂಡದ ಸಮರ್ಥಕರು ಖವಾಜನ ಧರ್ಮವನ್ನು ಮುನ್ನೆಲೆಗೆ ತಂದರು.

ಆಗ ಉಸ್ಮಾನ್ ಬೆನ್ನಿಗೆ ನಿಂತವನು ಅವನ ಬಾಲ್ಯ ಸ್ನೇಹಿತ ಡೇವಿಡ್ ವಾರ್ನರ್ . ‘’ಹೌದು, ಉಸ್ಮಾನ್ ಖವಾಜ ಹೇಳಿದ ಮಾತು 100ಕ್ಕೆ ನೂರು ಸತ್ಯ ಎಂದ ಡೇವಿಡ್.

ಈಗ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಕೂಡ ಸತ್ಯ ಬಾಯಿ ಬಿಟ್ಟಿದ್ದಾನೆ. ಇದು ಇಡೀ ತಂಡ ಸೇರಿ ಹೆಣೆದ ಷಡ್ಯಂತ್ರ ಎಂದಿದ್ದಾನೆ. 'ಚೆಂಡು ನೀವು ಅಂದುಕೊಂಡಂತೆ ರಿವರ್ಸ್ ಸ್ವಿಂಗ್ ಆಗುತ್ತಿದೆಯೇ ಎಂದು ನಾನು ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್’ವುಡ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್ ಬಳಿ ಕೇಳುತ್ತಿದ್ದೆ. ನನ್ನ ಕೈಚಳಕ ಕೆಲಸ ಮಾಡುತ್ತಿದೆಯೇ ಎಂದು ಪ್ರಶ್ನಿಸುತ್ತಿದ್ದೆ. ಇಲ್ಲ ಎಂದಾಗ ಸ್ಯಾಂಡ್ ಪೇಪರ್ ಹೊರ ತೆಗೆದು ಚೆಂಡನ್ನು ಉಜ್ಜಲಾರಂಭಿಸಿದೆ’’ ಎಂದಿದ್ದಾನೆ ಬ್ಯಾಂಕ್ರಾಫ್ಟ್. ಅಲ್ಲಿಗೆ ಆಸ್ಟ್ರೇಲಿಯಾ ತಂಡದ ಕುಯುಕ್ತಿ ಬಟಾಬಯಲು.

ಪ್ಯಾಟ್ ಕಮಿನ್ಸ್..

ನೀನು ಎಷ್ಟೇ ದೊಡ್ಡ ನಾಯಕನಾಗಿರಬಹುದು.. ವಿಶ್ವಕಪ್’ಗಳನ್ನು ಗೆದ್ದಿರಬಹುದು.. ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್, ಜೋಶ್.. ನೀವೆಲ್ಲಾ ಎಷ್ಟೇ ದೊಡ್ಡ ಬೌಲರ್’ಗಳಾಗಿರಬಹುದು. ನೀವು ಎಂದೆಂದಿಗೂ ಮೋಸಗಾರರೇ.. ಆ ಕಳಂಕ ನಿಮಗೆ ಶಾಶ್ವತ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಧರ ಕ್ರಿಕೆಟ್‌ನಲ್ಲೂ ಟ್ರೋಫಿ ಕದ್ದೊಯ್ದ ಪಾಕಿಸ್ತಾನ! ವಿಶ್ವ ಮಂಡಳಿಯನ್ನೇ ಬಹಿಷ್ಕರಿಸಿ ಹೊಸ ಸಂಸ್ಥೆ ಕಟ್ಟಲು ಮುಂದಾದ ಭಾರತ
ಮಾಜಿ ವಿಶ್ವ ಸುಂದರಿ ಮೇಲೆ ಪ್ರೀತಿಯ ಸುರಿಮಳೆ ಸುರಿಸಿದ ಲಲಿತ್ ಮೋದಿ; 'ನೀವು ಇನ್ನೂ ಬಿಟ್ಟಿಲ್ವಾ' ಎಂದ ಫ್ಯಾನ್ಸ್