T20 World Cup: Aus vs Pak ಸೆಮೀಸ್‌ ಹಿಂದಿನ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ರಿಜ್ವಾನ್‌!

By Suvarna NewsFirst Published Nov 12, 2021, 9:03 AM IST
Highlights

* ಟಿ20 ವಿಶ್ವಕಪ್‌ ಸೆಮೀಸ್‌ನಲ್ಲಿ ಸೋಲುಂಡ ಪಾಕಿಸ್ತಾನ

* ಅಸ್ಟ್ರೇಲಿಯಾ ವಿರುದ್ದದ ಪಂದ್ಯಕ್ಕೂ ಮುನ್ನ ಆಸ್ಪತ್ರಗೆ ದಾಖಲಾಗಿದ್ದ ರಿಜ್ವಾನ್

* ಆಸೀಸ್ ಎದುರಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದ ಪಾಕ್ ವಿಕೆಟ್ ಕೀಪರ್

ದುಬೈ(ನ.12): ಆಸ್ಪ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದ ಹಿಂದಿನ ದಿನ ಮೊಹಮದ್‌ ರಿಜ್ವಾನ್‌ (Mohammad Rizwan) ಆಸ್ಪತ್ರೆಯಲ್ಲಿದ್ದರು ಎನ್ನುವ ಅಚ್ಚರಿಯ ವಿಷಯವನ್ನು ಪಾಕಿಸ್ತಾನದ ಕೋಚ್‌ ಮ್ಯಾಥ್ಯೂ ಹೇಡನ್‌ (Matthew Hayden) ಬಹಿರಂಗಪಡಿಸಿದ್ದಾರೆ.  ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ 52 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಆಕರ್ಷಕ 67 ರನ್ ಚಚ್ಚಿದ್ದರು.

ಮೊದಲ ಇನ್ನಿಂಗ್ಸ್‌ ಮುಕ್ತಾಯಗೊಂಡ ಬಳಿಕ ಮಾತನಾಡಿದ ಅವರು, ‘ಶ್ವಾಸನಾಳದೊಳಗೆ ಉರಿಯೂತ ಕಾಣಿಸಿಕೊಂಡ ಕಾರಣ ರಿಜ್ವಾನ್‌ ಬುಧವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರೊಬ್ಬ ಯೋಧನಿದ್ದಂತೆ. ಪಂದ್ಯದ ದಿನ ಉತ್ಸಾಹದಿಂದ ತಂಡ ಕೂಡಿಕೊಂಡರು. ಅವರ ಬ್ಯಾಟಿಂಗ್‌ ನೋಡುವುದು ಖುಷಿ ನೀಡಲಿದೆ’ ಎಂದು ಹೇಳಿದರು.

Can you imagine this guy played for his country today & gave his best.
He was in the hospital last two days.
Massive respect .
Hero. pic.twitter.com/kdpYukcm5I

— Shoaib Akhtar (@shoaib100mph)

ಮೊಹಮ್ಮದ್ ರಿಜ್ವಾನ್(67) ಹಾಗೂ ಫಖರ್ ಜಮಾನ್(55) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವು (Pakistan Cricket Team) ಕೇವಲ 4 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ

ಕ್ಯಾಲೆಂಡರ್‌ ವರ್ಷದಲ್ಲಿ ರಿಜ್ವಾನ್‌ 1000 ಟಿ20 ರನ್‌!

ದುಬೈ: ಪಾಕಿಸ್ತಾನದ ವಿಕೆಟ್‌ ಕೀಪರ್‌ ಬ್ಯಾಟರ್‌ ಮೊಹಮದ್‌ ರಿಜ್ವಾನ್‌ ಅಂತಾರಾಷ್ಟ್ರೀಯ ಟಿ20ಯ ಕ್ಯಾಲೆಂಡರ್‌ ವರ್ಷದಲ್ಲಿ 1000 ರನ್‌ ಗಳಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಗುರುವಾರ ಆಸ್ಪ್ರೇಲಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ರಿಜ್ವಾನ್‌ ಈ ದಾಖಲೆ ಬರೆದರು.

2021ರಲ್ಲಿ ಉತ್ಕೃಷ್ಟ ಲಯದಲ್ಲಿರುವ ರಿಜ್ವಾನ್‌ 23 ಪಂದ್ಯಗಳನ್ನು ಆಡಿದ್ದು 20 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 1033 ರನ್‌ ಕಲೆಹಾಕಿದ್ದಾರೆ. ಅವರ ಬ್ಯಾಟಿಂಗ್‌ ಸರಾಸರಿ 86.08 ಇದ್ದು, 136.45ರ ಸ್ಟ್ರೈಕ್‌ರೇಟ್‌ನಲ್ಲಿ ರಿಜ್ವಾನ್‌ ರನ್‌ ಗಳಿಸಿದ್ದಾರೆ. ಈ ವರ್ಷ ಅವರು 1 ಶತಕ, 10 ಅರ್ಧಶತಕಗಳನ್ನು ಸಿಡಿಸಿದ್ದಾರೆ. 88 ಬೌಂಡರಿ, 37 ಸಿಕ್ಸರ್‌ ಚಚ್ಚಿದ್ದಾರೆ. ವಿಶೇಷ ಎಂದರೆ ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್‌ ಆಜಂ (Babar Azam) 2ನೇ ಸ್ಥಾನದಲ್ಲಿದ್ದಾರೆ. ಬಾಬರ್‌ 2021ರಲ್ಲಿ 23 ಪಂದ್ಯಗಳ 20 ಇನ್ನಿಂಗ್ಸ್‌ಗಳಲ್ಲಿ ಒಟ್ಟು 826 ರನ್‌ ಕಲೆಹಾಕಿದ್ದಾರೆ. ಅವರಿಂದ 1 ಶತಕ, 8 ಅರ್ಧಶತಕ ದಾಖಲಾಗಿದೆ. ಇವರಿಬ್ಬರಿಗೂ ಮೊದಲು ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಐರ್ಲೆಂಡ್‌ನ ಪಾಲ್‌ ಸ್ಟಿರ್ಲಿಂಗ್‌ ಹೆಸರಿನಲ್ಲಿತ್ತು. ಸ್ಟಿರ್ಲಿಂಗ್‌ 2019ರಲ್ಲಿ 748 ರನ್‌ ಗಳಿಸಿದ್ದರು.

T20 World Cup: ರೋಹಿತ್‌, ರಾಹುಲ್, ಕೊಹ್ಲಿಯನ್ನು ಅಣಕಿಸಿದ ಶಾಹೀನ್‌ ಅಫ್ರಿದಿ..!

ಈ ವಿಶ್ವಕಪ್‌ನಲ್ಲೂ ಅಬ್ಬರ: ಈ ಟಿ20 ವಿಶ್ವಕಪ್‌ನಲ್ಲಿ ರಿಜ್ವಾನ್‌ ಹಾಗೂ ಬಾಬರ್‌ ಅತ್ಯುತ್ತಮ ಬ್ಯಾಟಿಂಗ್‌ ನಡೆಸಿದ್ದಾರೆ. ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಬಾಬರ್‌ ಆಡಿರುವ 6 ಪಂದ್ಯಗಳಲ್ಲಿ 303 ರನ್‌ ಕಲೆಹಾಕಿದ್ದು, ಚೊಚ್ಚಲ ವಿಶ್ವಕಪ್‌ನಲ್ಲೇ 300ಕ್ಕಿಂತ ಹೆಚ್ಚು ರನ್‌ ಗಳಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಇನ್ನು ರಿಜ್ವಾನ್‌ ಆಡಿರುವ 6 ಪಂದ್ಯಗಳಲ್ಲಿ 3 ಅರ್ಧಶತಕಗಳ ನೆರವಿನಿಂದ 281 ರನ್‌ ಗಳಿಸಿದ್ದಾರೆ.

400+ ರನ್‌ ಜೊತೆಯಾಟ: ಟಿ20 ವಿಶ್ವಕಪ್‌ನಲ್ಲಿ ಬಾಬರ್‌ ಹಾಗೂ ರಿಜ್ವಾನ್‌ ಮೊದಲ ವಿಕೆಟ್‌ಗೆ 6 ಪಂದ್ಯಗಳಲ್ಲಿ ಒಟ್ಟು 411 ರನ್‌ ಜೊತೆಯಾಟವಾಡಿ ಹೊಸ ದಾಖಲೆ ಬರೆದಿದ್ದಾರೆ. ಯಾವುದೇ ಟಿ20 ಸರಣಿಗಳಲ್ಲಿ ಇದು ಗರಿಷ್ಠ ಜೊತೆಯಾಟ ಎನಿಸಿಕೊಂಡಿದೆ. 2018ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಆ್ಯರೋನ್‌ ಫಿಂಚ್‌ ಹಾಗೂ ಡಾರ್ಚಿ ಶಾರ್ಟ್‌ ತಮ್ಮ ಜೊತೆಯಾಟದಲ್ಲಿ ಒಟ್ಟು 382 ರನ್‌ ಸೇರಿಸಿದ್ದರು. ಆ ದಾಖಲೆಯನ್ನು ಪಾಕಿಸ್ತಾನದ ಆರಂಭಿಕರು ಮುರಿದಿದ್ದಾರೆ. ಈ ವಿಶ್ವಕಪ್‌ನಲ್ಲಿ ರಿಜ್ವಾನ್‌ ಹಾಗೂ ಬಾಬರ್‌ 2 ಶತಕ, 1 ಅರ್ಧಶತಕದ ಜೊತೆಯಾಟವಾಡಿದ್ದಾರೆ.
 

click me!