ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಭಾರತವನ್ನು ಕಾಡಿದ ಕಾಂಗರೂಗಳು, 333 ಬೃಹತ್ ಮುನ್ನಡೆ

Published : Dec 29, 2024, 12:58 PM ISTUpdated : Dec 29, 2024, 01:01 PM IST
ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಭಾರತವನ್ನು ಕಾಡಿದ ಕಾಂಗರೂಗಳು, 333 ಬೃಹತ್ ಮುನ್ನಡೆ

ಸಾರಾಂಶ

ಬುಮ್ರಾ ಮಾರಕ ದಾಳಿ (4 ವಿಕೆಟ್) ನಡುವೆಯೂ ಆಸೀಸ್ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ 228 ರನ್ ಗಳಿಸಿ 333 ರನ್ ಮುನ್ನಡೆ ಸಾಧಿಸಿದೆ. ಲಯನ್ (41*) ಮತ್ತು ಬೊಲೆಂಡ್ (10*) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಲಬುಶೇನ್ 70 ರನ್ ಗಳಿಸಿ ದಾಳಿ ತಡೆದರು. ಸಿರಾಜ್ 3 ವಿಕೆಟ್ ಪಡೆದರು. ಭಾರತಕ್ಕೆ ಗೆಲುವಿಗೆ ಕಠಿಣ ಸವಾಲು ಎದುರಾಗಿದೆ.

ಮೆಲ್ಬರ್ನ್‌: ಜಸ್ಪ್ರೀತ್ ಬುಮ್ರಾ ಮಾರಕ ದಾಳಿಯ ಹೊರತಾಗಿಯೂ ಆಸ್ಟ್ರೇಲಿಯಾ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 4ನೇ ದಿನದಾಟದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 228 ರನ್ ಬಾರಿಸಿದೆ. ಈ ಮೂಲಕ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು 333 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ್ದು, ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ನೇಥನ್ ಲಯನ್ 41 ಹಾಗೂ ಸ್ಕಾಟ್ ಬೊಲೆಂಡ್ 10 ರನ್ ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸಿದರೆ,  ಮೊಹಮ್ಮದ್ ಸಿರಾಜ್ 3 ಹಾಗೂ ರವೀಂದ್ರ ಜಡೇಜಾ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. 

ಇಲ್ಲಿನ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡವನ್ನು 369 ರನ್‌ಗಳಿಗೆ ಆಲೌಟ್ ಮಾಡಿ 105 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಸ್ಯಾಮ್ ಕಾನ್‌ಸ್ಟಾಸ್‌ ಕೇವಲ 8 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ಇನ್ನು ಉಸ್ಮಾನ್ ಖವಾಜಾ(21)ಗೆ ವೇಗಿ ಮೊಹಮ್ಮದ್ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಸ್ಟೀವ್ ಸ್ಮಿತ್ ಕೂಡಾ 13 ರನ್ ಗಳಿಸಿ ಸಿರಾಜ್‌ಗೆ ಎರಡನೇ ಬಲಿಯಾದರು.

ಕೊಹ್ಲಿ ಕೆಣಕಿದ ಸ್ಯಾಮ್ ಕಾನ್‌ಸ್ಟಾಸ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಬುಮ್ರಾ! ವಿಡಿಯೋ ವೈರಲ್

11 ರನ್ ಅಂತರದಲ್ಲಿ 4 ವಿಕೆಟ್ ಪತನ: ಒಂದು ಹಂತದಲ್ಲಿ 80 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಆಸೀಸ್ ತಂಡವು ಸ್ಮಿತ್ ವಿಕೆಟ್ ಪತನವಾಗುತ್ತಿದ್ದಂತೆಯೇ ನಾಟಕೀಯ ಕುಸಿತ ಕಂಡಿತು. ಟ್ರ್ಯಾವಿಸ್ ಹೆಡ್(1), ಮಿಚೆಲ್ ಮಾರ್ಷ್(0) ಹಾಗೂ ಅಲೆಕ್ಸ್ ಕ್ಯಾರಿ(2) ಅವರನ್ನು ಜಸ್ಪ್ರೀತ್ ಬುಮ್ರಾ ಪೆವಿಲಿಯನ್‌ಗಟ್ಟಿದರು. 91 ರನ್‌ಗಳಾಗುವಷ್ಟರಲ್ಲಿ ಆಸೀಸ್ 6 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತು.

ಆಸರೆಯಾದ ಲಬುಶೇನ್-ಕಮಿನ್ಸ್: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ಮಾರ್ನಸ್ ಲಬುಶೇನ್ ತಂಡಕ್ಕೆ ಆಸರೆಯಾದರು. ಸಿಕ್ಕ ಜೀವದಾನವನ್ನು ಎರಡೂ ಕೈಗಳಿಂದ ಬಾಚಿಕೊಂಡ ಲಬುಶೇನ್ 70 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ಲಬುಶೇನ್‌ ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಇನ್ನು ಮತ್ತೊಂದು ತುದಿಯಲ್ಲಿ ನಾಯಕನ ಆಟವಾಡಿದ ಪ್ಯಾಟ್ ಕಮಿನ್ಸ್ 41 ರನ್ ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.

ಬಾಡಿಗೆ ಮನೆಯಿಂದ ಬಾಕ್ಸಿಂಗ್ ಡೇ ಹೀರೋ: ಅಪ್ಪನ ಪ್ರತಿ ಬೆವರಿನ ಹನಿಗೂ ಚಿನ್ನದ ಬೆಲೆ ತಂದ ನಿತೀಶ್ ರೆಡ್ಡಿ!

ಭಾರತವನ್ನು ಕಾಡಿದ ಲಯನ್: ಆಸ್ಟ್ರೇಲಿಯಾ ತಂಡವು 173 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಆದರೆ ಕೊನೆಯ ವಿಕೆಟ್‌ಗೆ ಜತೆಯಾದ ನೇಥನ್ ಲಯನ್ ಹಾಗೂ ಸ್ಕಾಟ್ ಬೋಲೆಂಡ್ ಮುರಿಯದ 55 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿದಾಟಿಸಿದರು. ಇದಷ್ಟೇ ಅಲ್ಲದೇ ತಂಡದ ಮುನ್ನಡೆಯನ್ನು 330 ರ ಗಡಿ ದಾಟಿಸುವ ಮೂಲಕ ಟೀಂ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!