Aaron Finch: ಟಿ20 ವಿಶ್ವಕಪ್ ಗೆದ್ದ ನಾಯಕ, ಅಂತಾರಾಷ್ಟ್ರಿಯ ಏಕದಿನ ಕ್ರಿಕೆಟ್‌ಗೆ ದಿಢೀರ್ ಗುಡ್‌ ಬೈ..?

By Naveen KodaseFirst Published Sep 9, 2022, 5:04 PM IST
Highlights

ಸತತ ಫಾರ್ಮ್‌ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರೋನ್ ಫಿಂಚ್
ನ್ಯೂಜಿಲೆಂಡ್ ಎದುರಿನ ಸರಣಿ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಸಾಧ್ಯತೆ
ಕ್ಯಾಲೆಂಡರ್ ವರ್ಷದಲ್ಲಿ 5 ಬಾರಿ ಶೂನ್ಯ ಸುತ್ತಿರುವ ಆ್ಯರೋನ್ ಫಿಂಚ್

ಸಿಡ್ನಿ(ಸೆ.09): ಸತತ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಆ್ಯರೋನ್ ಫಿಂಚ್, ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದ ಬಳಿಕ ದಿಢೀರ್ ಎನ್ನುವಂತೆ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಘೋಷಿಸುವ ಸಾಧ್ಯತೆಯಿದೆ. ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಆ್ಯರೋನ್ ಫಿಂಚ್, ಭಾನುವಾರ(ಸೆ.11) ನಡೆಯಲಿರುವ ಕಿವೀಸ್ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಮೂರು ಪಂದ್ಯಗಳ ಚಾಪೆಲ್-ಹ್ಯಾಡ್ಲಿ ಏಕದಿನ ಸರಣಿಯನ್ನಾಡುತ್ತಿವೆ. ಈಗಾಗಲೇ ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಮೊದಲೆರಡು ಏಕದಿನ ಪಂದ್ಯಗಳನ್ನು ಜಯಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಆದರೆ ಇದೇ ವೇಳೆ ನಾಯಕ ಆ್ಯರೋನ್ ಫಿಂಚ್ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ತಂಡದ ಅಗ್ರಕ್ರಮಾಂಕದ ಮೇಲೆ ಸಾಕಷ್ಟು ಹೊರೆ ಬೀಳುವಂತೆ ಮಾಡಿದೆ. ಹೀಗಾಗಿ ಆ್ಯರೋನ್ ಫಿಂಚ್, ಕಿವೀಸ್ ಎದುರಿನ ಮೂರನೇ ಏಕದಿನ ಪಂದ್ಯದ ಬಳಿಕ ಅಥವಾ ಅದಕ್ಕೂ ಮುಂಚಿತವಾಗಿಯೇ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸುವ ಸಾಧ್ಯತೆಯಿದೆ ಎಂದು ಆಸೀಸ್‌ ಮಾಧ್ಯಮಗಳು ವರದಿ ಮಾಡಿವೆ.

ನ್ಯೂಜಿಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಕೇವಲ 195 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಹೀಗಿದ್ದೂ ಆ್ಯಡಂ ಜಂಪಾ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡವು ಕೇವಲ 82 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 113 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇನ್ನು ಇದೇ ವೇಳೆ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಆ್ಯರೋನ್ ಫಿಂಚ್, 2022ರಲ್ಲೇ ಐದನೇ ಬಾರಿಗೆ ಶೂನ್ಯ ಸುತ್ತುವ ಮೂಲಕ, ಈ ಕ್ಯಾಲೆಂಡರ್ ವರ್ಷದಲ್ಲಿ ಆಸ್ಟ್ರೇಲಿಯಾ ಪರ ಅತಿಹೆಚ್ಚು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬ್ಯಾಟರ್ ಎನ್ನುವ ಕುಖ್ಯಾತಿಗೆ ಫಿಂಚ್ ಪಾತ್ರರಾಗಿದ್ದಾರೆ.

Asia Cup 2022 ಶತಕ ಸಿಡಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಖಡಕ್ ವಾರ್ನಿಂಗ್ ನೀಡಿದ ವಿರಾಟ್ ಕೊಹ್ಲಿ..!

ನ್ಯೂಜಿಲೆಂಡ್ ಎದುರಿನ ಸರಣಿಯ ಮೊದಲೆರಡು ಪಂದ್ಯಗಳಲ್ಲೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 100 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 5 ವಿಕೆಟ್ ಕಳೆದುಕೊಂಡಿತ್ತು. ಇದರ ಹೊರತಾಗಿಯೂ ಮಧ್ಯಮ ಕ್ರಮಾಂಕ ಹಾಗೂ ಕೆಳ ಕ್ರಮಾಂಕದ ಬ್ಯಾಟರ್‌ಗಳು ಜವಾಬ್ದಾರಿಯುತ ಪ್ರದರ್ಶನ ತೋರಿದ್ದರಿಂದಾಗಿ ಏಕದಿನ ಸರಣಿಯಲ್ಲಿ ಆಸೀಸ್‌ ತಂಡವು ಗೌರವಾನ್ವಿತ ಮೊತ್ತ ಗಳಿಸಲು ಯಶಸ್ವಿಯಾಗಿತ್ತು.

Aaron Finch in his last seven ODIs: 26 runs with three ducks 😦 pic.twitter.com/dC2r5GbSIP

— ESPNcricinfo (@ESPNcricinfo)

ಆ್ಯರೋನ್ ಫಿಂಚ್ ಕಳೆದ 7 ಏಕದಿನ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 0,5,5,1,15,0,0 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಆ್ಯರೋನ್ ಫಿಂಚ್ ಕಳಫೆ ಫಾರ್ಮ್‌ನಿಂದ ಬಳಲುತ್ತಿರುವುದರಿಂದ  ಏಕದಿನ ಕ್ರಿಕೆಟ್ ಮಾದರಿಯಲ್ಲಿ ಫಿಂಚ್ ಬದಲಿಗೆ ಬೇರೆ ಆಟಗಾರರನ್ನು ಹುಡುಕುವುದು ಉತ್ತಮ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದರು.

click me!