ಯುವ ಆಟಗಾರರನ್ನು ನಾಚಿಸುವಂತೆ ಡೇವಿಡ್ ವಾರ್ನರ್ ಫೀಲ್ಡಿಂಗ್, ಕ್ಯಾಚ್ ಕಂಡು ಹುಬ್ಬೇರಿಸಿದ ಫ್ಯಾನ್ಸ್!

By Santosh NaikFirst Published Jun 15, 2022, 7:33 PM IST
Highlights

35 ವರ್ಷದ ಡೇವಿಡ್ ವಾರ್ನರ್ ಆತಿಥೇಯ ಶ್ರೀಲಂಕಾ ವಿರುದ್ಧ ಪಲ್ಲೆಕೆಲೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಇಂಟರ್ನೆಟ್ ಮನೆಮಾತಾಗಿದ್ದಾರೆ. ಧನಂಜಯ ಡಿ ಸಿಲ್ವಾ ಅವರನ್ನು ಔಟ್ ಮಾಡುವ ನಿಟ್ಟಿನಲ್ಲಿ ವಾರ್ನರ್ ಅದ್ಭುತವಾದ ಕ್ಯಾಚ್ ಅನ್ನು ಹಿಡಿದರು. ಇದನ್ನು ನೋಡಿರುವ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಪಟ್ಟಿದ್ದಾರೆ.
 

ಪಲ್ಲೆಕಿಲೆ (ಜೂನ್ 15): ಆಸ್ಟ್ರೇಲಿಯಾದ (Australia) ಸ್ಪೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ (David Warner) ತಮ್ಮ ಬ್ಯಾಟಿಂಗ್ ಸಾಹಸಗಳಿಂದ ಚಿರಪರಿಚಿತ. ಹಾಗಂತ ಅವರ ಫೀಲ್ಡಿಂಗ್ ಕಳಪೆಯೇನಲ್ಲ ಆದರೆ, 35 ವರ್ಷದ ವಾರ್ನರ್ ಯುವ ಆಟಗಾರರ ರೀತಿ ಮೈದಾನದಲ್ಲಿ ಮಿಂಚಿನ ಸಂಚಾರ ನಡೆಸುವುದು ಸ್ವಲ್ಪ ಕಡಿಮೆ. ಆದರೆ, ಆತಿಥೇಯ ಶ್ರೀಲಂಕಾ (Sri Lanka) ವಿರುದ್ಧ ಬುಧವಾರ ಪಲ್ಲೆಕಿಲೆಯಲ್ಲಿ ನಡೆದ ಮೊದಲ ಏಕದಿನ (First Odi Match) ಪಂದ್ಯದ ವೇಳೆ ಯುವ ಆಟಗಾರರನ್ನು ನಾಚಿಸುವಂತೆ ವಾರ್ನರ್ ತಮ್ಮ ಫೀಲ್ಡಿಂಗ್ ಕೌಶಲವನ್ನು ಮೆರೆದಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಡಿಎಲ್ಎಸ್ (DLS) ನಿಯಮದ ಅನ್ವಯ 2 ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು. ಆದರೆ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸೀಸ್ ಗೆಲುವಿಗಿಂತ ಡೇವಿಡ್ ವಾರ್ನರ್ ಹಿಡಿದ ಕ್ಯಾಚ್ ಜಗತ್ತಿನ ಗಮನ ಸೆಳೆದಿದೆ. ಶ್ರೀಲಂಕಾ ಇನ್ನಿಂಗ್ಸ್‌ನ 16ನೇ ಓವರ್ ನಲ್ಲಿ ಆಶ್ಟನ್ ಅಗರ್ ಬೌಲಿಂಗ್ ಮಾಡಲು ಬಂದಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ಧನಂಜಯ ಡಿ ಸಿಲ್ವಾ ಚೆಂಡನ್ನು ಮಿಡನ್ ಆನ್‌ನತ್ತ ಬಾರಿಸಿದ್ದರು. ಆದರೆ, ಇಲ್ಲಿ ಫಿಲ್ಡಿಂಗ್ ಮಾಡುತ್ತಿದ್ದ ಡೇವಿಡ್ ವಾರ್ನರ್ ತಮ್ಮ ಬಲಕೆ ಓಡುತ್ತಾ, ಮೇಲಕ್ಕೆ ಹಾರಿ ಎಡಗೈಯೊಂದರಲ್ಲೇ ಕ್ಯಾಚ್ ಪಡೆದುಕೊಂಡರು. 

ವಾರ್ನರ್ ಕ್ಯಾಚ್ ಪಡೆದ ರೀತಿ, ಸ್ವತಃ ಆಸೀಸ್ ಬೌಲರ್ ಆಶ್ಟನ್ ಅಗರ್ ಅಚ್ಚರಿಗೆ ಕಾರಣವಾಗಿತ್ತು. ಯಾಕೆಂದರೆ, ಅಂಥ ದೊಡ್ಡ ಸಾಹಸಿಕ ಯತ್ನದ ಹೊರತಾಗಿ ಕ್ಯಾಚ್ ಪಡೆದುಕೊಳ್ಳುವ ಯಾವುದೇ ಸಾಧ್ಯತೆಯೂ ಇರಲಿಲ್ಲ. ಅಂಥದ್ದೊಂದು ಸಾಹಸವನ್ನು ಡೇವಿಡ್ ವಾರ್ನರ್ ಮಾಡುವ ಮೂಲಕ ಮಿಂಚಿದ್ದರು. ಕ್ಯಾಚ್ ಎಷ್ಟುಅದ್ಭುತವಾಗಿತ್ತೆಂದರೆ ಆಶ್ಟನ್ ಸಗರ್ ಸಂತೋಷಕ್ಕೆ ಪಾರವೇ ಇರಲಿಲ್ಲ.

Brilliant catch by David Warner ♥️ pic.twitter.com/PBC3xV5P6D

— Umair Khan (@UmairKhWorld)


ಆಶ್ಟನ್ ಅಗರ್ ಹಾಗೂ ಮಾರ್ನಸ್ ಲಬುಶೇನ್ ತಲಾ 2 ವಿಕೆಟ್ ಉರುಳಿಸಿದರೆ, ಶ್ರೀಲಂಕಾ ತಂಡ 7 ವಿಕೆಟ್ ಗೆ 300 ರನ್ ಪೇರಿಸಿತು. ಕುಶಲ್ ಮೆಂಡಿಸ್ 86 ರನ್ ಬಾರಿಸಿದರೆ, ಆರಂಭಿಕರಾದ ಪಥುನ್ ನಿಸ್ಸಂಕ ಹಾಗೂ ಧನುಷ್ಕ ಗುಣತಿಲಕ ಕ್ರಮವಾಗಿ 56 ಹಾಗೂ 55 ರನ್ ಬಾರಿಸಿದ್ದರು. ಡೆತ್ ಓವರ್ ನಲ್ಲಿ ವಾನಿಂದು ಹಸರಂಗ ಅದ್ಭುತವಾಗಿ ಆಟವಾಡಿದರು. 49ನೇ ಓವರ್‌ನಲ್ಲಿ 22 ರನ್ ಸಿಡಿಸುವುದರೊಂದಿಗೆ 19 ಎಸೆತಗಳಲ್ಲಿ 37 ರನ್ ಸಿಡಿಸಿದ ವಾನಿಂದು ಹಸರಂಗ ತಂಡದ ಮೊತ್ತವನ್ನು 300ರ ಗಡಿ ಮುಟ್ಟಿಸಿದರು.

ಜೂ.18ಕ್ಕೆ ಕೆಎಲ್ ರಾಹುಲ್‌ಗೆ ಫಿಟ್ನೆಸ್ ಟೆಸ್ಟ್, ಇಂಗ್ಲೆಂಡ್ ಪ್ರವಾಸಕ್ಕೆ ಅನುಮಾನ?

ಮಳೆ ಬಾಧಿತ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ 44 ಓವರ್ ಗಳಳಲ್ಲಿ 282 ರನ್ ಗುರಿ ನೀಡಲಾಗಿತ್ತು. ಡೇವಿಡ್ ವಾರ್ನರ್ 2ನೇ ಓವರ್ ನಲ್ಲಿಯೇ ಮಹೇಶ್ ತೀಕ್ಷಣಗೆ ವಿಕೆಟ್ ನೀಡಿದರೆ, ಸ್ಟೀವ್ ಸ್ಮಿತ್ (53) ಹಾಗೂ ಆರನ್ ಫಿಂಚ್ (44) ಬ್ಯಾಟಿಂಗ್ ನೆರವಿನಿಂದ ಚೇತರಿಕೆ ಕಾಣುವಲ್ಲಿ ಯಶಸ್ವಿಯಾಗಿತ್ತು. ಒಂದೆಡೆ ಆಸ್ಟ್ರೇಲಿಯಾ ತಂಡದ ವಿಕೆಟ್ ಗಳು ಉರುಳುತ್ತಿದ್ದರೂ, ಮಾರ್ಕಸ್ ಸ್ಟೋಯಿನಸ್ ಬಿರುಸಿನ 44 ರನ್ ಸಿಡಿಸಿದರು.

ದಾಖಲೆಯ 48,390 ಕೋಟಿ ರೂಪಾಯಿಗೆ ಐದು ವರ್ಷಗಳ IPL Media Rights ಮಾರಾಟ!

ಕೇವಲ 51 ಎಸೆತಗಳಲ್ಲಿ 80 ರನ್ ಸಿಡಿಸಿದ ಗ್ಲೆನ್ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ತಮ್ಮ 51 ಎಸೆತಗಳ ಇನ್ನಿಂಗ್ಸ್‌ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) 6 ಬೌಂಡರಿ ಹಾಗೂ 6 ಮನಮೋಹಕ ಸಿಕ್ಸರ್‌ಗಳನ್ನು ಚಚ್ಚಿದ್ದರು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 1-0 ಮುನ್ನಡೆ ಕಂಡುಕೊಂಡಿದೆ.

 

click me!