
ಕ್ಯಾನ್‌ಬೆರ್ರಾ(ಆ.19): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದ್ದು, ಆ್ಯರೋನ್ ಫಿಂಚ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಪ್ಯಾಟ್ ಕಮಿನ್ಸ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದ್ದು, ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡ ಕೂಡಿಕೊಂಡಿದ್ದಾರೆ.
ಅಕ್ಟೋಬರ್ 17ರಿಂದ ಆರಂಭವಾಗಲಿರುವ ಜಾಗತಿಕ ಕ್ರಿಕೆಟ್ ಮಹಾಜಾತ್ರೆಯು ಯುಎಇ ಹಾಗೂ ಓಮನ್ ರಾಷ್ಟ್ರಗಳಲ್ಲಿ ನಡೆಯಲಿದ್ದು, ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ನವೆಂಬರ್‌ನಲ್ಲಿ ಆರಂಭವಾಗಲಿರುವ ಆ್ಯಷಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ತಾರಾ ಆಟಗಾರರನ್ನು ಟಿ20 ವಿಶ್ವಕಪ್‌ನಿಂದ ವಿಶ್ರಾಂತಿ ನೀಡಲಿದೆ ಎನ್ನುವ ಗಾಳಿಸುದ್ದಿಗಳಿಗೆ ತೆರೆಬಿದ್ದಿದ್ದು, ಅಂತಹ ಯಾವುದೇ ನಿರ್ಧಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಕೈಗೊಂಡಿಲ್ಲ.
ನಮ್ಮ ತಂಡವು ಈ ಸ್ಪರ್ಧಾತ್ಮಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ. ನಮ್ಮ ತಂಡದಲ್ಲಿ ವಿಶ್ವಶ್ರೇಷ್ಠ ಆಟಗಾರರಿದ್ದು, ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಂಘಟಿತ ಪ್ರದರ್ಶನ ತೋರಿದರೆ ವಿಶ್ವದ ಶ್ರೇಷ್ಠ ಟಿ20 ತಂಡವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಅಭಿಪ್ರಾಯಪಟ್ಟಿದ್ದಾರೆ.
ಐಸಿಸಿ ಕ್ರಿಕೆಟ್ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ..!
ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಸರಣಿಯಿಂದ ಹೊರಗುಳಿದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್ ಹಾಗೂ ಮಾರ್ಕಸ್ ಸ್ಟೋನಿಸ್ ಕೂಡಾ ಆಸ್ಟ್ರೇಲಿಯಾ ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಜೋಶ್ ಇಂಗ್ಲಿಶ್ ತಂಡ ಕೂಡಿಕೊಂಡಿದ್ದು, ಒಂದು ವೇಳೆ ಮ್ಯಾಥ್ಯೂ ವೇಡ್ ತಂಡದಿಂದ ಹೊರಗುಳಿಯುವ ಸಂದರ್ಭ ಬಂದರೆ ಜೋಶ್ ಇಂಗ್ಲಿಶ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಆ್ಯರೋನ್ ಫಿಂಚ್(ನಾಯಕ), ಆಸ್ಟನ್ ಏಗರ್, ಪ್ಯಾಟ್ ಕಮಿನ್ಸ್, ಜೋಸ್ ಹೇಜಲ್‌ವುಡ್, ಜೋಶ್ ಇಂಗ್ಲಿಶ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.