Ashes Test : 56 ರನ್ ಅಂತರದಲ್ಲಿ ಉರುಳಿದ 10 ವಿಕೆಟ್, ಹೋಬರ್ಟ್ ಟೆಸ್ಟ್ ನಲ್ಲಿ ಆಸೀಸ್ ಗೆ ಗೆಲುವು!

By Suvarna NewsFirst Published Jan 16, 2022, 6:16 PM IST
Highlights

5ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 146 ರನ್ ಗೆಲುವು
4-0ಯಿಂದ ಆ್ಯಷಸ್ ಸರಣಿ ವಿಜಯ ಸಾಧಿಸಿದ ಆಸ್ಟ್ರೇಲಿಯಾ
ಹೋಬರ್ಟ್ ನಲ್ಲಿ ಮೂರೇ ದಿನಕ್ಕೆ ಮುಕ್ತಾಯಗೊಂಡ ಟೆಸ್ಟ್ ಪಂದ್ಯ
 

ಹೋಬರ್ಟ್ (ಜ 16): ಆಸ್ಟ್ರೇಲಿಯಾದ (Australia) ವೇಗದ ಬೌಲರ್ ಗಳ ಮತ್ತೊಂದು ಮಾರಣಾಂತಿಕ ಬೌಲಿಂಗ್ ದಾಳಿಗೆ ಕಂಗೆಟ್ಟ ಇಂಗ್ಲೆಂಡ್ (England) ತಂಡ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) 5ನೇ ಹಾಗೂ ಕೊನೆಯ ಪಂದ್ಯದಲ್ಲಿ 146 ರನ್ ಗಳಿಂದ ಶರಣಾಗಿದೆ. ಅದರೊಂದಿಗೆ ಏಕಪಕ್ಷೀಯವಾಗಿ ಸಾಗಿದ ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯನ್ನು ಆತಿಥೇಯ ಆಸ್ಟ್ರೇಲಿಯಾ ತಂಡ 4-0 ಅಂತರದಲ್ಲಿ ಜಯಿಸಿದೆ. ಗೆಲುವಿಗೆ 271 ರನ್ ಗಳ ಸುಲಭ ಸವಾಲು ಪಡೆದುಕೊಂಡಿದ್ದ ಇಂಗ್ಲೆಂಡ್ ತಂಡ ಮೊದಲ ವಿಕೆಟ್ ಗೆ ಅದ್ಭುತ 68 ರನ್ ಜೊತೆಯಾಟವಾಡುವ ಮೂಲಕ ಗೆಲುವಿನ ಲಯದಲ್ಲಿತ್ತು. ಆದರೆ, ಆಸೀಸ್ ಬೌಲಿಂಗ್ ವಿಭಾಗದ ಘಾತಕ ದಾಳಿಗೆ 137 ಎಸೆತಗಳ ಅಂತರದಲ್ಲಿ 56 ರನ್ ಗಳಿಸುವ ವೇಳೆಗೆ ಎಲ್ಲಾ 10 ವಿಕೆಟ್ ಕಳೆದುಕೊಳ್ಳುವ ಮೂಲಕ ಸರಣಿಯಲ್ಲಿ ನಾಲ್ಕನೇ ಸೋಲು ಕಂಡಿತು. ಆಸೀಸ್ ತಂಡಕ್ಕೆ ಸುಲಭವಾಗಿ ಸರಣಿಯನ್ನು ವೈಟ್ ವಾಷ್ ಮಾಡುವ ಅವಕಾಶವಿತ್ತು. ಆದರೆ, ಕಳೆದ ವಾರ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಹವಾಮಾನ ಹಾಗೂ ಇಂಗ್ಲೆಂಡ್ ನ ಕೊನೆಯ ವಿಕೆಟ್ ಜೋಡಿಯ ಸಾಹಸದಿಂದಾಗಿ ಡ್ರಾ ಫಲಿತಾಂಶ ಕಂಡಿತ್ತು.

ಪ್ಯಾಟ್ ಕಮ್ಮಿನ್ಸ್ (Pat Cummins), ಕ್ಯಾಮರೂನ್ ಗ್ರೀನ್ (Cameron Green), ಸ್ಕಾಟ್ ಬೋಲ್ಯಾಂಡ್ (Scott Boland) ಹಾಗೂ ಮಿಚೆಲ್ ಸ್ಟಾರ್ಕ್ (Mitchell Starc) ನೇತೃತ್ವದ ಬೌಲಿಂಗ್ ವಿಭಾಗದ ಮುಂದೆ ಸಂಪೂರ್ಣವಾಗಿ ಇಂಗ್ಲೆಂಡ್ ಮಂಡಿಯೂರಿತು. ಈ ಬೌಲರ್ ಗಳು ತಮ್ಮ ನಡುವೆ ಎಲ್ಲಾ 10 ವಿಕೆಟ್ ಗಳನ್ನು ಹಂಚಿಕೊಂಡರು. ಮಿಚೆಲ್ ಸ್ಟಾರ್ಕ್ 1 ವಿಕೆಟ್ ಉರುಳಿಸಿದರೆ, ಉಳಿದ ಮೂವರು ತಲಾ ಮೂರು ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ನ ಬೆನ್ನೆಲುಬು ಮುರಿದರು.

2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 155 ರನ್ ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ತಂಡ ಗೆಲುವಿಗೆ 271 ರನ್ ಗಳ ಸವಾಲನ್ನು ಪಡೆದುಕೊಂಡಿತ್ತು. ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪಾಲಿಗೆ ಇದು ಸವಾಲಿನ ಟಾರ್ಗೆಟ್ ಆಗಿದ್ದರೂ, ಎಚ್ಚರಿಕೆಯ ಬ್ಯಾಟಿಂಗ್ ಮಾಡಿದರೆ ಗೆಲ್ಲುವ ಅವಕಾಶ ತಂಡಕ್ಕಿತ್ತು. ಇದರ ಪ್ರಯತ್ನವಾಗಿ ರೋರಿ ಬರ್ನ್ಸ್ (Rory Burns ) ಹಾಗೂ ಜಾಕ್ ಕ್ರಾವ್ಲಿ (Zak Crawley) ಮೊದಲ ವಿಕೆಟ್ ಗೆ 68 ರನ್ ಗಳ ಉತ್ತಮ ಜೊತೆಯಾಟ ಆಡಿದ್ದರು. ಆದರೆ, ಚಹಾ ವಿರಾಮಕ್ಕೆ ಕೊನೆಯ ಓವರ್ ಇದ್ದಾಗ, ಕ್ಯಾಮರೂನ್ ಗ್ರೀನ್ ಎಸೆತವನ್ನು ಬಿಡುವ ಯತ್ನದಲ್ಲಿ ಎಡವಿದ ಬರ್ನ್ಸ್ 26 ರನ್ ಗೆ ಬೌಲ್ಡ್ ಆಗಿ ನಿರ್ಗಮಿಸಿದರು.
 

Australia win! 🔥

England are bowled out for 124 and Australia seal a 4-0 series victory! | pic.twitter.com/4XA8vfoZWh

— ICC (@ICC)


ಶನಿವಾರವಷ್ಟೇ ಮೊದಲ ಮಗುವಿನ ಜನನವಾಗಿರುವ ಸಂಭ್ರಮದಲ್ಲಿದ್ದ ಡೇವಿಡ್ ಮಲಾನ್, ಕೆಲ ಬೌಂಡರಿಗಳ ಮೂಲಕ ಉತ್ತಮವಾಗಿ ಆರಂಭ  ಕಂಡಿದ್ದರು. ಆದರೆ, ಗ್ರೀನ್ ಅವರ ಎಸೆತದಲ್ಲಿ ಮಲಾನ್ ಕೇವಲ 10 ರನ್ ಗೆ ಬರ್ನ್ಸ್ ಔಟಾದ ರೀತಿಯಲ್ಲೇ ನಿರ್ಗಮನ ಕಂಡರು. ಬಳಿಕ ಗ್ರೀನ್ ಕ್ರಾವ್ಲಿ ವಿಕೆಟ್ ಅನ್ನು ಉರುಳಿಸಿದರೆ, ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೇವಲ 5 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ನಾಥನ್ ಲ್ಯಾನ್ ಗೆ ಡೀಪ್ ಸ್ಕ್ವೇರ್ ಲೆಗ್ ನಲ್ಲಿ ಕ್ಯಾಚ್ ನೀಡಿ ಹೊರನಡೆದರು.

ಹಾಲಿ ಸರಣಿಯಲ್ಲಿ ಉತ್ತಮ ಆರಂಭದ ನಡುವೆಯೂ ದೊಡ್ಡ ಇನ್ನಿಂಗ್ಸ್ ಆಡಲು ವಿಫಲವಾಗಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಔಟಾದರು. 11 ರನ್ ಬಾರಿಸಿದ್ದ ವೇಳೆ ಬೋಲಾಂಡ್ ಎಸೆತದಲ್ಲಿ ರೂಟ್ ಬೌಲ್ಡ್ ಆಗಿ ಹೊರನಡೆದರು. ರೂಟ್ ಔಟಾದ ಮೊತ್ತಕ್ಕೆ 6ರನ್ ಸೆರುವ ವೇಳೆಗೆ ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ನಿರ್ಗಮನ ಕಂಡರೆ, ಒಲಿವರ್ ಪೋಪ್ ಅವರಿಂದ ಹೆಚ್ಚಿನ ರನ್ ಗಳು ಬರಲಿಲ್ಲ. ಕ್ರಿಸ್ ವೋಕ್ಸ್, ಮಾರ್ಕ್ ವುಡ್ ಹಾಗೂ ಒಲ್ಲಿ ರಾಬಿನ್ಸನ್ ಅವರಿಂದ ಇಂಗ್ಲೆಂಡ್ ಹೆಚ್ಚಿನ ನಿರೀಕ್ಷೆಯನ್ನೇ ಇಡದ ಕಾರಣ 38.5 ಓವರ್ ಗಳಲ್ಲಿ 124 ರನ್ ಗೆ ಆಲೌಟ್ ಆಗುವ ಮೂಲಕ ತನ್ನ ಕೆಟ್ಟ ಟೆಸ್ಟ್ ಸರಣಿಯನ್ನು ಮುಕ್ತಾಯಗೊಳಿಸಿತು.

Ashes Test: ಇಂಗ್ಲೆಂಡ್ ಎದುರು ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ
3 ವಿಕೆಟ್ ಗೆ 37 ರನ್ ಗಳಿಂದ ಮೂರನೇ ದಿನವಾದ ಭಾನುವಾರ ಬ್ಯಾಟಿಂಗ್ ಮುಂದುವರಿಸಿದ ಆಸ್ಟ್ರೇಲಿಯಾ, ಮಾರ್ಕ್ ವುಡ್ (37ಕ್ಕೆ 6) ಅವರ ಜೀವನಶ್ರೇಷ್ಠ ನಿರ್ವಹಣೆಯಿಂದಾಗಿ 155 ರನ್ ಗೆ ಆಲೌಟ್ ಆಯಿತು. 63 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಆಸೀಸ್ ಗೆ ಆಸರೆ ನೀಡಿದ ಅಲೆಕ್ಸ್ ಕ್ಯಾರಿ (49) ಹಾಗೂ ಕ್ಯಾಮರೂನ್ ಗ್ರೀನ್ (23) 7ನೇ ವಿಕೆಟ್ ಗೆ 49 ರನ್ ಜೊತೆಯಾಟವಾಡಿ ಮೊತ್ತವನ್ನು 120ರ ಗಡಿ ದಾಟಿಸಿದ್ದರು. ಗ್ರೀನ್ ಹಾಗೂ ಸ್ಟಾರ್ಕ್ ಬೆನ್ನುಬೆನ್ನಿಗೆ ಔಟಾದ ಬಳಿಕ, ಅಲೆಕ್‌ ಕ್ಯಾರಿ ಬಿರುಸಿನ ಆಟವಾಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶ ಕಂಡಿದ್ದರು. ಪಂದ್ಯದಲ್ಲಿ ಶತಕ ಬಾರಿಸಿದ ಗಮನಸೆಳೆದ ಟ್ರಾವಿಸ್ ಹೆಡ್ (Travis Head) ಪಂದ್ಯಶ್ರೇಷ್ಢ (Player of the Match) ಪ್ರಶಸ್ತಿ ಪಡೆದಿದ್ದು ಮಾತ್ರವಲ್ಲದೆ, 4 ಪಂದ್ಯದ 6 ಇನ್ನಿಂಗ್ಸ್ ಗಳಿಂದ 357 ರನ್ ಸಿಡಿಸುವ ಮೂಲಕ ಸರಣಿಶ್ರೇಷ್ಠ (Player of the Series) ಗೌರವವನ್ನೂ ಪಡೆದರು.

ಆಸ್ಟ್ರೇಲಿಯಾ 303 & 155 (ಅಲೆಕ್ಸ್ ಕ್ಯಾರಿ 49, ಮಾರ್ಕ್ ವುಡ್ 37ಕ್ಕೆ 6), ಇಂಗ್ಲೆಂಡ್: 188 & 124 (ಜಾಕ್ ಕ್ರಾವ್ಲಿ 36, ಸ್ಕಾಟ್ ಬೋಲ್ಯಾಂಡ್ 18ಕ್ಕೆ 3, ಪ್ಯಾಟ್ ಕಮಿನ್ಸ್ 42ಕ್ಕೆ 3, ಕ್ಯಾಮರೂನ್ ಗ್ರೀನ್ 21ಕ್ಕೆ 3).

click me!